ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಹಿಷಿ ಉತ್ತರಾಧಿ ಮಠದಲ್ಲಿ ಕೋಟ್ಯಂತರ ರೂ. ಹಣವಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 12 ದರೋಡೆಕೋರರು ದರೋಡೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಆದರೆ ಅವರಿಗೆ ಕೇವಲ 50 ಸಾವಿರ ರೂ ಮಾತ್ರ ಸಿಕ್ಕಿದ್ದು, ಮಾಳೂರು ಪೊಲೀಸರು ಎಲ್ಲ 12 ಜನರನ್ನು ಬಂಧಿಸಿದ್ದಾರೆ.

ಶಿವಮೊಗ್ಗ, ಏಪ್ರಿಲ್ 12: ಮಠದಲ್ಲಿ (Mahishi Uttaradi Math) ಕೋಟಿ ಕೋಟಿ ರೂ ಆಸ್ತಿ ಇದೆ ಎನ್ನುವ ಸುದ್ದಿ ಎಲ್ಲಡೆ ಹರಿದಾಡಿತ್ತು. ಈ ಮಾತು ದರೋಡೆಕೋರರ ಕಿವಿಯೂ ಮುಟ್ಟಿತ್ತು. ಹಾಗಾಗಿ ಕೋಟ್ಯಂತರ ರೂ ಹಣ ದರೋಡೆ (robbery) ಹೊಡೆಯಲು ದರೋಡೆಕೋರರು ಸಂಚು ರೂಪಿಸಿದ್ದರು. ಪಕ್ಕಾ ಪ್ಲ್ಯಾನ್ ಪ್ರಕಾರ ದರೋಡೆಗಿಳಿದವರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ. ಮಾತ್ರ. ಈ ಸಂಬಂಧ 12 ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಕೋಟ್ಯಂತರ ರೂ ಮಠದ ಹಣದ ದರೋಡೆ ರಹಸ್ಯ ಕುರಿತು ಒಂದು ವರದಿ ಇಲ್ಲಿದೆ ಮುಂದೆ ಓದಿ.
ದರೋಡೆಕೋರರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ ಮಾತ್ರ
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಉತ್ತರಾಧಿ ಮಠದಲ್ಲಿ 300 ಕೋಟಿ ರೂ. ಇದೆ ಎನ್ನುವ ಗಾಳಿ ಸುದ್ದಿಯು ಎಲ್ಲಡೆ ಹರಿದಾಡಿತ್ತು. ಇದರ ಬೆನ್ನಲ್ಲೇ ದರೋಡೆಕೋರರು ಕೋಟಿ ಕೋಟಿ ಹಣ ಲೂಟಿಗೆ ಮುಂದಾಗಿದ್ದರು. ಏ.5 ರಂದು ರಾತ್ರಿ 12 ದರೋಡೆಕೋರರು ಎಂಟ್ರಿ ಕೊಟ್ಟಿದ್ದರು. ಹೀಗೆ ಬಂದವರು ಕೊಟ್ಯಂತರ ರೂ ಹಣಕ್ಕಾಗಿ ಹುಡುಕಾಡಿದ್ದಾರೆ. ಮಠದಲ್ಲಿ ಇದ್ದವರಿಗೆ ಮಾರಕಾಸ್ತ್ರ ತೋರಿಸಿ ಹಣದ ಮಾಹಿತಿ ಕೇಳಿದ್ದಾರೆ. ಆದರೆ ಕೋಟಿ ಕೋಟಿ ಹಣದ ಹಿಂದೆ ಬಿದ್ದಿದ್ದ ದರೋಡೆಕೋರರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ ಮಾತ್ರ.
ಇದನ್ನೂ ಓದಿ: ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು, ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಈ ಘಟನೆ ಮಠದ ಭಕ್ತರು ಮತ್ತು ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿತ್ತು. ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಮಠದಲ್ಲಿ ಇಷ್ಟೊಂದು ಹಣವಿದು ಎಂದು ಗಾಳಿ ಸುದ್ದಿ ಹಬ್ಬಿಸಿದ್ದು ಯಾರು ಎನ್ನುವ ಚರ್ಚೆ ಕೂಡ ಮಠದಲ್ಲಿ ಶುರುವಾಗಿದೆ.
12 ದರೋಡೆಕೋರರ ಬಂಧನ
ಮಾಳೂರು ಪೊಲೀಸರು ಈ ದರೋಡೆಕೋರರ ಹಿಂದೆ ಬಿದಿದ್ದು, ನಿನ್ನೆ ಆರೋಪಿಗಳ ಬಂಧನಕ್ಕೆ ಮಾಳೂರು ಪೊಲೀಸರ ತಂಡ ತೆರಳಿದೆ. ಈ ವೇಳೆ ಶಿಕಾರಿಪುರದ ಪಟ್ಟಣದಲ್ಲಿ ಶ್ರೀನಿವಾಸ ಅಲಿಯಾಸ್ ಸೀನ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಉಳಿದ 12 ಜನರನ್ನೂ ಪೊಲೀಸರು ಬಂಧಿಸಿದ್ದಾರೆ. ಸುರೇಶ ಅಲಿಯಾಸ್ ನೇರಲೆ ಸುರೇಶ್, ಸತೀಶ್ ಅಲಿಯಾಸ್ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ ಅಲಿಯಾಸ್ ಸಿರಿಕಾಂತ್, ಅಭಿಲಾಷ್ ಅಲಿಯಾಸ್ ಅಭಿ, ರಾಕೇಶ್, ಭರತ್ ಅಲಿಯಾಸ್ ಚಿಟ್ಟೆ, ಪವನ ಅಲಿಯಾಸ್ ಗಿಡ್ಡಪವನ್, ರಮೇಶ್ ಅಲಿಯಾಸ್ ನವೀನ, ನವೀನ ಕುಮಾರ್ ಅಲಿಯಾಸ್ ಡೈಮೆಂಡ್ ನವೀನ್, ಕರಿಬಸಪ್ಪ ಆರ್ ಬಂಧಿತರು.
ಶ್ರೀನಿವಾಸ್ ಮತ್ತು ರಿಪ್ಪನ್ ಪೇಟೆ ಪೃಥ್ವಿರಾಜ್ 300 ಕೋಟಿ ರೂ ಹಣ ದರೋಡೆ ಮಾಡಿ ಜೀವನದಲ್ಲಿ ಸೆಟ್ಲು ಆಗಲು ಪ್ಲ್ಯಾನ್ ಮಾಡಿರುತ್ತಾರೆ. ಎರಡು ಮೂರು ಬಾರಿ ಮಹಿಷಿಗೆ ಬೈಕ್ನಲ್ಲಿ ಹೋಗಿ ಬಂದಿದ್ದರು. ಈ ಮಹಿಷಿ ಮಠದಲ್ಲಿಯೇ 300 ಕೋಟಿ ರೂ ಹಣ ಇಡಲಾಗಿದೆ ಎಂದು ತಿಳಿದು ಏ.5 ರಂದು ರಾತ್ರಿ ಹಣ ಎಗುರಿಸಲು ದರೋಡೆ ಇಳಿಯುತ್ತಾರೆ.
ಇದನ್ನೂ ಓದಿ: ಚಿತ್ರದುರ್ಗ: ಜೋಗಿಮಟ್ಟಿ ವನ್ಯಧಾಮಕ್ಕೆ ಜೂನ್ವರೆಗೆ ಪ್ರವಾಸಿಗರಿಗೆ ನಿಷೇಧ!
ಆಯುಧಗಳನ್ನ ಹಿಡಿದು 300 ಕೋಟಿ ರೂ ಹಣ ಕೊಡಿ ಎಂದು ಗದರಿಸುತ್ತಾರೆ. ಆಗ ಮಠದ ಜನರು ನೀಡಿದ 50 ಸಾವಿರ ರೂ ಪಡೆದು ಹೋಗುತ್ತಾರೆ. ಕೋಟ್ಯಂತರ ರೂ ಹಣ ದರೋಡೆಗೆ ಸ್ಕೇಚ್ ಹಾಕಿದ್ದ ದರೋಡೆಕೋರರಿಗೆ ಇದು ದೊಡ್ಡ ನಿರಾಸೆ ಆಗುತ್ತದೆ.
ಇನ್ನು ದರೋಡೆ ವೇಳೆ ದರೋಡೆಕೋರರು ಒಂದಿಷ್ಟು ಸುಳಿವು ಬಿಟ್ಟುಹೋಗಿದ್ದರು. ಇದೇ ಸುಳಿವಿನ ಜಾಡು ಹಿಡಿದ ಪೊಲೀಸರು ಮೊದಲಿಗೆ ಸೀನನ್ನ ಬಂಧಿಸಿದ್ದಾರೆ. ಬಳಿಕ ಎಲ್ಲರನ್ನು ಬಂಧಿಸಿದ್ದಾರೆ. ಆ ಮೂಲಕ ಮಾಳೂರು ಪೊಲೀಸರು ದರೋಡೆ ನಡೆದು ಕೆಲವೇ ದಿನದಲ್ಲಿ 300 ಕೋಟಿ ರೂ ದರೋಡೆ ರಹಸ್ಯ ಬಯಲು ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.