ಚಿತ್ರದುರ್ಗ: ಜೋಗಿಮಟ್ಟಿ ವನ್ಯಧಾಮಕ್ಕೆ ಜೂನ್ವರೆಗೆ ಪ್ರವಾಸಿಗರಿಗೆ ನಿಷೇಧ!
ಚಿತ್ರದುರ್ಗದ ಊಟಿ ಖ್ಯಾತಿಯ ಜೋಗಿಮಟ್ಟಿ ವನ್ಯಧಾಮ ಬೇಸಿಗೆಯ ತೀವ್ರ ಬಿಸಿಲಿನಿಂದ ಒಣಗುತ್ತಿದೆ. ಹೀಗಾಗಿ ಅಗ್ನಿ ಅವಘಡ ಅಪಾಯ ಹೆಚ್ಚಿರುವ ಮತ್ತು ಪ್ರಾಣಿ-ಪಕ್ಷಿಗಳ ರಕ್ಷಣೆಗಾಗಿ, ಅರಣ್ಯ ಇಲಾಖೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದೆ. ಮಳೆಗಾಲ ಆರಂಭದ ನಂತರ ಈ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರದುರ್ಗ, ಏಪ್ರಿಲ್ 12: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಈ ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಇತ್ತ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಬೇಸಿಗೆಯ ಬಿಸಿಲು ಜೋರಾಗಿದೆ. ಪರಿಣಾಮ ಬಯಲುಸೀಮೆಯ ಕುರುಚಲು ಕಾಡಿನಲ್ಲಿ ಹಸಿರು ಮರೆಯಾಗಿ ಕಪ್ಪುಗಟ್ಟುತ್ತಿದೆ. ಹೀಗಿರುವಾಗಲೇ ಅಲರ್ಟ್ ಆಗಿರುವ ಅರಣ್ಯ ಇಲಾಖೆ, ಚಿತ್ರದುರ್ಗದ ಊಟಿ ಎಂದೇ ಖ್ಯಾತಿಯಾಗಿರುವ ಜೋಗಿಮಟ್ಟಿ (Jogimatti) ವನ್ಯಧಾಮನಕ್ಕೆ ಮಳೆಗಾಲ ಆರಂಭವಾಗುವವರೆಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಕೋಟೆನಾಡಿನ ಊಟಿ ಖ್ಯಾತಿಯ ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ವನ್ಯಧಾಮಕ್ಕೆ ಇದೀಗ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಏಕೆಂದರೆ ಕುರುಚಲು ಕಾಡು ಹೊಂದಿರುವ ವನ್ಯಧಾಮದಲ್ಲಿ ಬಿರು ಬೇಸಿಗೆಯ ಪರಿಣಾಮ ಗಿಡ, ಮರಗಳು ಒಣಗಿ ಕಪ್ಪುಗಟ್ಟುತ್ತಿದೆ. ಹೀಗಾಗಿ ಅಪ್ಪಿತಪ್ಪಿ ಯಾರಾದರೂ ಬೆಂಕಿ ಕಡ್ಡಿ ಗೀರಿದರೂ ಸಹ ಕಾಡು ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಹಿರಿಯೂರಲ್ಲಿ ಆಲಿಕಲ್ಲು ಸಮೇತ ಜೋರು ಮಳೆ, ಕಾದ ಹೆಂಚಿನಂತಾಗಿದ್ದ ರಸ್ತೆಗಳು ತಂಪು-ತಂಪು
ಅಂತೆಯೇ ಬೇಸಿಗೆ ವೇಳೆ ಪ್ರಾಣಿ, ಪಕ್ಷಿಗಳ ರಕ್ಷಣೆ ದೃಷ್ಟಿಯಿಂದಲೂ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮತ್ತು ವಾಯು ವಿಹಾರಿಗಳಿಗೂ ನಿಷೇಧಿಸಲಾಗಿದೆ. ಜೂನ್ ವೇಳೆಗೆ ಮಳೆ ಆರಂಭವಾದ ಬಳಿಕ ಮತ್ತೆ ಜೋಗಿಮಟ್ಟಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಹೇಳಿದ್ದಾರೆ.
ಜೋಗಿಮಟ್ಟಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ. ಅಲ್ಲದೆ ಸಮುದ್ರ ಮಟ್ಟದಿಂದ ಸುಮಾರು ಮೂರುವರೆ ಸಾವಿರ ಅಡಿಯಷ್ಟು ಎತ್ತರ ಪ್ರದೇಶದಲ್ಲಿದ್ದು, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲೊಂದಾಗಿದೆ. ಹೀಗಾಗಿ, ನಿತ್ಯ ಪ್ರವಾಸಿಗರು, ಪರಿಸರ ಪ್ರಿಯರು ಜೋಗಿಮಟ್ಟಿ ವೀಕ್ಷಣೆಗೆ ಬಂದು ನಿರಾಸೆಯಿಂದ ವಾಪಸ್ ಆಗುವುದು ಸಹಜವಾಗಿದೆ. ಆದರೆ ಕಾಡು ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಮುಂಜಾಗೃತೆ ಕ್ರಮವಹಿಸಿದೆ.
ಇದನ್ನೂ ಓದಿ: ಅರಣ್ಯ ಪ್ರದೇಶದಲ್ಲಿ ಮರ ಕಳ್ಳತನಕ್ಕೆ ಯತ್ನ: ಆರೋಪಿಗಳಿಗೆ ವಿಚಿತ್ರ ಶಿಕ್ಷೆ ವಿಧಿಸಿದ ಕೋರ್ಟ್
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ವನ್ಯಧಾಮ ಸಹ ಬೇಸಿಗೆ ಬಿಸಿಲಿಗೆ ಕಳೆಗುಂದಿದೆ. ಬರಿದಾಗುತ್ತಿರುವ ಅರಣ್ಯದಿಂದಾಗಿ ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೀಡಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ, ಬೆಂಕಿ ಅವಘಡ ಮತ್ತು ಪ್ರಾಣಿ, ಪಕ್ಷಿಗಳ ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಜೋಗಿಮಟ್ಟಿ ವನ್ಯಧಾಮಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ. ಕಾಡು ಸಂರಕ್ಷಣೆ ಮತ್ತು ಪ್ರಾಣಿಗಳ ಉಳಿವಿಗೆ ಅರಣ್ಯ ಇಲಾಖೆ ಮತ್ತೆ ಯಾವ ಕ್ರಮಕೈಗೊಳ್ಳಲಿದೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:28 pm, Sat, 12 April 25