ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು, ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಶಿವಮೊಗ್ಗದ ಈದ್ಗಾ ಮೈದಾನದ ವಿವಾದ ಕೊನೆಗೂ ಅಂತ್ಯವಾಗಿದೆ. ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ನಡುವಿನ ಜಗಳದಿಂದಾಗಿ 10 ದಿನಗಳ ಕಾಲ ಮೈದಾನ ನಿರ್ಬಂಧ ಹೇರಲಾಗಿತ್ತು. ಎಸ್ಪಿ ಮತ್ತು ಡಿಸಿ ಅವರ ಮಧ್ಯಸ್ಥಿಕೆಯಿಂದ ವಿವಾದ ಪರಿಹಾರವಾಗಿದ್ದು, ಇದೀಗ ಮೈದಾನ ಸಾರ್ವಜನಿಕರು ಸೇರಿದಂತೆ ವ್ಯಾಪಾರಸ್ಥರಿಗೆ ಮುಕ್ತವಾಗಿದೆ.

ಶಿವಮೊಗ್ಗ, ಏಪ್ರಿಲ್ 11: ನಗರದ ಡಿಸಿ ಕಚೇರಿಯ ಮುಂಭಾಗದಲ್ಲಿರುವ ಈದ್ಗಾ ಮೈದಾನದ (Eidgah Ground) ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಮತ್ತೆ ದಶಕಗಳಿಂದ ಮೈದಾನದ ಜಾಗವು ಈಗ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. 10 ದಿನಗಳಿಂದ ನಿರ್ಬಂಧ ವಿಧಿಸಿದ್ದ ಮೈದಾನ ಇದೀಗ ಮುಕ್ತವಾಗಿದೆ. ಎಸ್ಪಿ ಮತ್ತು ಡಿಸಿ ಇಬ್ಬರು ಸೇರಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಸಂತಸ ಮೂಡಿದೆ. ಸುಮಾರು ಒಂದು ಎಕರೆ ಮೈದಾನದ ಆಸ್ತಿ ಕುರಿತು ಮುಸ್ಲಿಂ (muslim) ಮತ್ತು ಹಿಂದೂ ಪರ ಸಂಘಟನೆಗಳ ನಡುವೆ ಇತ್ತೀಚೆಗೆ ಫೈಟ್ ಶುರುವಾಗಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಮೈದಾನ ನಮ್ಮದು ಎಂದ ಮುಸ್ಲಿಂ ಸಂಘಟನೆಗಳು
ಮಾ. 31 ರಂದು ನಗರದ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಿಸಲಾಯಿತು. ಆ ಬಳಿಕ ಮೈದಾನಕ್ಕೆ ಹಾಕಿದ್ದ ಬೇಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಬೇಲಿ ಹಾಕಿದ್ದಕ್ಕೆ ಹಿಂದೂ ಪರ ಸಂಘಟನೆಗಳು ಸ್ಥಳದಲ್ಲೇ ಹೋರಾಟ ಮಾಡಿದ್ದರು. ನಂತರ ಅಲ್ಲಿದ್ದ ಬೇಲಿ ತೆಗೆದು ಪೊಲೀಸರು ಬ್ಯಾರಿಕೇಡ್ ಹಾಕಿ ಮೈದಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದರು. ಇದರ ಬೆನ್ನಲ್ಲೇ ಮುಸ್ಲಿಂ ಸಂಘಟನೆಗಳು ಮೈದಾನ ನಮ್ಮದು ಎಂದು ಹೋರಾಟ ಮಾಡಿದ್ದರು.
ಇದನ್ನೂ ಓದಿ: ಶಿವಮೊಗ್ಗ ಈದ್ಗಾ ಮೈದಾನ ಜಾಗಕ್ಕೆ ಬೇಲಿ: ಹಿಂದೂಗಳ ಪ್ರತಿಭಟನೆ, ಡಿಸಿ ಹೇಳಿದ್ದೇನು?
ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬೀದಿಗೆ ಇಳಿದು ಪೊಲೀಸರು ಹಾಕಿರುವ ಬ್ಯಾರಿಕೇಡ್ ತೆಗೆಯಬೇಕೆಂದು ಆಕ್ರೋಶ ಹೊರಹಾಕಿದ್ದರು. ಇನ್ನು ಬಿಜೆಪಿ ಕೂಡ ಏ. 10 ರೊಳಗೆ ಬ್ಯಾರಿಕೇಡ್ ತೆಗೆಯಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಈ ನಡುವೆ ಎಸ್ಪಿ ಮತ್ತು ಡಿಸಿ ಇಬ್ಬರು ಸೇರಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ರಾತೋರಾತ್ರಿ ಮೈದಾನಕ್ಕೆ ಹಾಕಿದ್ದ ಬ್ಯಾರಿಕೇಡ್ ಎಲ್ಲವನ್ನು ತೆಗೆದು ಹಾಕಿದ್ದಾರೆ. ಕಳೆದ ಹತ್ತು ದಿನಗಳಿಂದ ಈದ್ಗಾ ಮೈದಾನದ ಪರಿಸ್ಥಿತಿ ತುಂಬಾ ಬಿಗುವಿನಿಂದ ಕೂಡಿತ್ತು. ನಿನ್ನೆ ಪೊಲೀಸರು ಬ್ಯಾರಿಕೇಡ್ ತೆಗೆದಿದ್ದರಿಂದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ.
ಹತ್ತು ದಿನಗಳಿಂದ ಮೈದಾನಕ್ಕೆ ಹೇರಿದ್ದ ನಿರ್ಬಂಧದಿಂದ ಸುತ್ತಮುತ್ತಲು ಅಂಗಡಿ, ಹೊಟೇಲ್, ಬೀದಿ ಬದಿಯ ಹಣ್ಣಿನ ವ್ಯಾಪಾರ ಸ್ತಬ್ಧಗೊಂಡಿತ್ತು. ಇದರಿಂದ ವ್ಯಾಪಾರಸ್ಥರಿಗೆ ದೊಡ್ಡ ನಷ್ಟವಾಗಿತ್ತು. ವ್ಯಾಪಾರ ವಹಿವಾಟು ಇಲ್ಲದೇ ವ್ಯಾಪಾರಸ್ಥರು ಕಂಗಾಲಾಗಿದ್ದರು. ಮತ್ತೊಂದಡೆ ಮೈದಾದನಲ್ಲಿ 24 ಗಂಟೆ ಹತ್ತಾರು ಪೊಲೀಸರು ಮತ್ತು ವಾಹನ ಮಾತ್ರ ಮೈದಾನದ ಒಳಗೆ ಮತ್ತು ಹೊರಗೆ ಬಂದೋಬಸ್ತ್ಗೆ ವ್ಯವಸ್ಥೆ ಮಾಡಿದ್ದರು.
ಎಚ್ಚೆತ್ತ ಜಿಲ್ಲಾಡಳಿತ: ವಿವಾದ ಅಂತ್ಯ
ಈದ್ಗಾ ಮೈದಾನದ ವಿವಾದ ನೋಡಿದ ಜನರು ಗಾಬರಿಯಾಗಿದ್ದರು. ನಿತ್ಯ ನಾಳೆ ಏನಾಗೋತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿತ್ತು. ಕೊನೆಗೂ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ಮೈದಾನದ ವಿವಾದಕ್ಕೆ ತೆರೆಎಳೆದಿದೆ. ಮತ್ತೆ ದಶಕಗಳಿಂದ ಮೈದಾನದ ಜಾಗವು ಈಗ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ವಾಹನ ಪಾರ್ಕಿಂಗ್, ವ್ಯಾಪಾರ ವಹಿವಾಟ ಮತ್ತೆ ಶುರುವಾಗಿದೆ.
ಇದನ್ನೂ ಓದಿ: ರಂಜಾನ್ ಪ್ರಾರ್ಥನೆ ವೇಳೆ ಮೊಳಗಿದ ಪ್ಯಾಲಿಸ್ತಾನಿ ಪರ ಘೋಷಣೆ, ಪ್ಲೇ ಕಾರ್ಡ್ ಪ್ರದರ್ಶನ
ಶಿವಮೊಗ್ಗ ಕೋಮು ಸೂಕ್ಷ್ಮ ನಗರವಾಗಿದೆ. ಇಲ್ಲಿ ಸಣ್ಣ ಪುಟ್ಟ ಗಲಾಟೆಗಳಾದರೂ ಕೋಮು ಬಣ್ಣ ಬಳಿದುಕೊಳ್ಳುತ್ತವೆ. ಕಳೆದ ಕೆಲವು ವರ್ಷಗಳಿಂದ ಅನೇಕ ಇಂತಹ ಘಟನೆಗಳಿಂದ ಜನರು ತತ್ತರಿಸಿಹೋಗಿದ್ದಾರೆ. ಈದ್ಗಾ ಮೈದಾನದ ವಿವಾದವು ಸಮಸ್ಯೆ ಆಗುವ ಮೊದಲೇ ಪರಿಹಾರ ಸಿಕ್ಕಿರುವುದು ಮಾತ್ರ ನಗರದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.