- Kannada News Photo gallery Shigandur Bridge work in final stage: See photos of country's 7th largest bridge, taja suddi
ಅಂತಿಮ ಹಂತಕ್ಕೆ ಬಂದ ಸಿಗಂದೂರು ಕೇಬಲ್ ಆಧಾರಿತ ಸೇತುವೆ: ಇಲ್ಲಿವೆ ಫೋಟೋಸ್
ಶರಾವತಿ ಹಿನ್ನೀರಿನ ಸಿಗಂದೂರು ಕೇಬಲ್ ಆಧಾರಿತ ಸೇತುವೆಯ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ದಶಕಗಳ ಕನಸು ನನಸಾಗುತ್ತಿದ್ದು, ಹಿನ್ನೀರಿನ ಜನರಿಗೆ ಸಂಚಾರ ಸೌಲಭ್ಯ ಲಭ್ಯವಾಗಲಿದೆ. ಈ ಸೇತುವೆಯು ಪ್ರವಾಸೋದ್ಯಮಕ್ಕೂ ಪ್ರಮುಖ ಪಾತ್ರ ವಹಿಸಲಿದೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಯಶಸ್ವಿಯಾಗಿದೆ.
Updated on:Mar 24, 2025 | 2:36 PM

ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರು ಭಾಗದ ದಶಕಗಳ ಕನಸು ನನಸಾಗುವ ಕಾಲ ಸನ್ನಿತವಾಗುತ್ತಿದೆ. ಸಿಗಂಧೂರು ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಪೂರ್ಣಹಂತಕ್ಕೆ ತಲುಪಿದೆ. ಅಂತಿಮ ಹಂತದ ಕಾಮಗಾರಿ ಮತ್ತು ಕೇಬಲ್ ಆಧಾರಿತ ಸೇತುವೆಯ ವಿಹಂಗಮ ನೋಟ ಡ್ರೋನ್ ಕ್ಯಾಮರ್ದಲ್ಲಿ ಸೆರೆಯಾಗಿದೆ. ರಾಜ್ಯದ ಗಮನ ಸೆಳೆದಿರುವ ಕೇಬಲ್ ಆಧಾರಿತ ಸೇತುವೆ ಕುರಿತು ಒಂದು ವರದಿ ಇಲ್ಲಿದೆ.

ಇಡೀ ರಾಜ್ಯದ ಗಮನ ಸೆಳೆದಿರುವುದು ಹಿನ್ನೀರಿನ ಪ್ರದೇಶದಲ್ಲಿರುವ ಸಿಗಂದೂರು ಚೌಡೇಶ್ವರಿ ದೇಗುಲ, ಹಿನ್ನೀರಿನ ಲಾಂಚ್ ಮೂಲಕವೇ ದೇವಿ ದರ್ಶನಕ್ಕೆ ಭಕ್ತರು ಬರುತ್ತಾರೆ. ಇನ್ನೂ ಈ ಭಾಗದ ಜನರಿಗೆ ಲಾಂಚವೇ ಗತಿ. ಇನ್ನೂ ರಾತ್ರಿ ಸಮಯದಲ್ಲಿ ಲಾಂಚ್ ಸೇವೆ ಇರುವುದಿಲ್ಲ. ಇದು ಹತ್ತಾರು ಹಿನ್ನೀರಿನ ಹಳ್ಳಿಗರಿಗೆ ದೊಡ್ಡ ಸಮಸ್ಯೆ ಆಗಿತ್ತು. ದಶಕಗಳಿಂದ ಶರಾವತಿ ಹಿನ್ನೀರಿನ ಜನರಿಗೆ ಸೇತುವೆ ಅಗತ್ಯವಿತ್ತು. ಕೊನೆಗೂ ಅವರ ಕನಸು ನನಸು ಆಗಿದೆ. ಹಿನ್ನೀರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇರುವೆ ಈಗ ಅಂತಿಮ ಹಂತ ತಲುಪಿದೆ. ಈ ಸೇತುವೆ ಸಿದ್ದಗೊಂಡಿರುವ ಡ್ರೋನ್ ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತಿದೆ.

ಸಂಸದ ಬಿ. ವೈ ರಾಘವೇಂದ್ರ ಅವರು ನಿರಂತರವಾಗಿ ಈ ಕಾಮಗಾರಿಯ ಹಿಂದೆ ಬಿದ್ದು ಅದನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಕೇಬಲ್ ಆಧಾರಿತ ಸೇತುವೆ ಮೇಲೆ ಈಗ ಟಾರ್ ಕೂಡಾ ಹಾಕಲಾಗುತ್ತಿದೆ. ಪ್ರವಾಸಿಗರಿಗೆ ಮತ್ತು ಶರಾವತಿ ಹಿನ್ನೀರಿನ ಜನರಿಗೆ ಈ ಸೇತುವೆ ಒಂದು ದೊಡ್ಡ ವರದಾನವಾಗಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಇಚ್ಛಾಶಕ್ತಿ ಪ್ರಯತ್ನದ ಫಲವಾಗಿ 2019ರಲ್ಲಿ ಬೃಹತ್ ಕೇಬಲ್ ಆಧಾರಿತ ಕಾಮಗಾರಿ ಪ್ರಾರಂಭವಾಗಿತ್ತು.

ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು 464.23 ಕೋಟಿ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ರು, ಈ ಸೇತುವೆಯ ಸುಮಾರು 2.14ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದ, 423.15 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿತ್ತು. ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ಕೆಲಸ ನಂತರ ವೇಗ ಪಡೆಯಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್ಗಳನ್ನು ನಿರ್ಮಿಸಲಾಗಿದ್ದು, ಪಿಲ್ಲರ್ಗಳ ನಡುವೆ ಪ್ರೀಕಾಸ್ಟ್ ಕಾಂಕ್ರೀಟ್ ಬ್ಲಾಕ್ಗಳನ್ನು ಜೋಡಿಸಲಾಗಿದೆ. ಅಂತಿಮ ಹಂತದ ಕೆಲಸವು ಭರದಿಂದ ನಡೆಯುತ್ತಿದೆ.

ಹೀಗೆ ಮಲೆನಾಡಿಗರಿಗೆ ಮತ್ತೊಂದು ದೊಡ್ಡ ಯೋಜನೆಯು ಪೂರ್ಣಗೊಂಡಿರುವ ಹೆಮ್ಮೆ. ಕೆಲವೇ ದಿನಗಳಲ್ಲಿ ಹಿನ್ನೀರಿನಲ್ಲಿ ಸಿದ್ದಗೊಂಡಿರುವ ಕೇಬಲ್ ಆಧಾರಿತ ಸೇತುವೆ ಮೇಲೆ ಓಡಾಡುವ ಭಾಗ್ಯ ಲಭಿಸಲಿದೆ. ಅಸಾಧ್ಯ ಎನ್ನುವ ಯೋಜನೆಯನ್ನು ಸಂಸದ ಬಿ. ವೈ ರಾಘವೇಂದ್ರ ಸಾಧ್ಯಗೊಳಸಿದ್ದಾರೆ. ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡಹಾಕಿ ಈ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಇನ್ನೂ ಈ ಸೇತುವೆಯು ರಾಜ್ಯದ ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳನ್ನು ಸಂಪರ್ಕಿಸುವ 2.13 ಕಿ.ಮೀ ಉದ್ದದ ಸಿಗಂಧೂರು ಕೇಬಲ್ ಆಧಾರಿತ ಸೇತುವೆ ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 7ನೇ ಅತಿದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ. ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಗರ್ಡರ್ ಬಾಕ್ಸ್‌ಗಳನ್ನು ಅಳವಡಿಕೆ ಮಾಡುವುದು ಮಾತ್ರ ಬಾಕಿಯಿದ್ದು, ಒಂದೆರಡು ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಇದಾದ ನಂತರ ಉಳಿಕೆ ಕೆಲಸಗಳನ್ನು ಮುಗಿಸಿಕೊಂಡು, ಸುರಕ್ಷತಾ ತಪಾಸಣೆ ಮಾಡಿದ ನಂತರ ಈ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಇದರಿಂದ ಮಲೆನಾಡಿನ ಜನರ ಬಹುಬೇಡಿಕೆಯ ಸಿಗಂಧೂರು ಕೇಬಲ್ ಆಧಾರಿತ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಸಿಗಂಧೂರು ಕೇಬಲ್ ಆಧಾರಿತ ನಿರ್ಮಾಣದಿಂದಾಗಿ ಶರಾವತಿ ಹಿನ್ನೀರು ಭಾಗದ ಜನರ ಕನಸು ಒಂದೆಡೆ ನನಸಾದ್ರೆ ಮತ್ತೊಂದೆಡೆ ಮಲೆನಾಡಿನ ಪ್ರವಾಸೋದ್ಯಮಕ್ಕೆ ದೊಡ್ಡ ಶಕ್ತಿಯಾಗಲಿದೆ. ಈ ಸೇತುವೆ ಮೇಲೆ ಓಡಾಡುವುದಕ್ಕೆ ಜನರು ಕಾತುರದಿಂದ ಕಾಯುತ್ತಿದ್ದಾರೆ.
Published On - 3:18 pm, Sun, 23 March 25



















