ಶಿವಮೊಗ್ಗ ಈದ್ಗಾ ಮೈದಾನ ಜಾಗಕ್ಕೆ ಬೇಲಿ: ಹಿಂದೂಗಳ ಪ್ರತಿಭಟನೆ, ಡಿಸಿ ಹೇಳಿದ್ದೇನು?
ಶಿವಮೊಗ್ಗದ ಈದ್ಗಾ ಮೈದಾನದ ವಿವಾದಕ್ಕೆ ಕಾರಣವಾಗಿದೆ. ರಂಜಾನ್ ಹಬ್ಬದ ಬಳಿಕ ಏಕಾಏಕಿ ಈದ್ಗಾ ಮೈದಾನ ಸುತ್ತ ತಂತಿ ಬೇಲಿ ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹಾಗಿದ್ದರೆ ಈದ್ಗಾ ಮೈದಾನಕ್ಕೆ ತಂತಿ ಬೇಲಿ ಹಾಕಿದ್ದು ಏಕೆ? ಏನಿದು ವಿವಾದ? ಈಗ ಮುನ್ನಲೆಗೆ ಬರಲು ಕಾರಣವೇನು? ಇಲ್ಲಿದೆ ವಿವರ

ಶಿವಮೊಗ್ಗ, ಏಪ್ರಿಲ್ 02: ಶಿವಮೊಗ್ಗ (Shivamogga) ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಈದ್ಗಾ ಮೈದಾನವು (Idgah Maidan) ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ದಶಕಗಳಿಂದ ಈ ಮೈದಾನವು ಸಾರ್ವಜನಿಕ ವಾಹನ ನಿಲುಗಡೆಗೆ ಮುಕ್ತವಾಗಿತ್ತು. ಆದರೆ, ರಂಜಾನ್ (Ramadan) ಹಬ್ಬದ ಬಳಿಕ ಈ ಮೈದಾನ ಸುತ್ತ ಬೇಲಿ ಹಾಕಲಾಗಿದೆ. ಇದರಿಂದ ಎರಡು ಸಮಾಜಗಳ ನಡುವೆ ವಾಕ್ಸಮರ ಶುರುವಾಗಿದೆ.
ಈ ಈದ್ಗಾ ಮೈದಾನ ಅಂದಾಜು 30 ಗುಂಟೆ ಇದೆ. ಈ ಮೈದಾನ ಇಷ್ಟು ವರ್ಷಗಳ ಕಾಲ ಇದು ಪಾಲಿಕೆ ಆಸ್ತಿ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಹೊಸ ದಾಖಲೆಗಳ ಪ್ರಕಾರ ಈ ಈದ್ಗಾ ಮೈದಾನವು ವಕ್ಫ ಆಸ್ತಿ ಎನ್ನುವುದು ಬಹಿರಂಗಗೊಂಡಿದೆ. ಈ ಮೈದಾನವು ವಕ್ಫ ಆಸ್ತಿ ಅಂತ ಆಸ್ತಿ ತೆರಿಗೆ ರಜಿಸ್ಟರ್ನಲ್ಲಿ ನೊಂದಣಿಯಾಗಿದೆ. ಮೂರು-ನಾಲ್ಕು ವರ್ಷಗಳಿಂದ ಈ ಜಾಗಕ್ಕೆ ಮುಸ್ಲೀಂ ಸಮಾಜದವರು ತೆರಿಗೆಯನ್ನು ಕಟ್ಟುತ್ತಿದ್ದಾರೆ. ಸೋಮವಾರ ರಂಜಾನ್ ಹಬ್ಬದ ಬಳಿಕ ಈ ಜಾಗಕ್ಕೆ ತರಾತುರಿಯಲ್ಲಿ ತಂತಿ ಬೇಲಿ ಹಾಕಲಾಯತು. ಮಂಗಳವಾರ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಂಘಟನೆಗಳ ಒತ್ತಡಕ್ಕೆ ಮಣಿದು ಎಸ್ಪಿ ಸೂಚನೆಯಂತೆ ತಾತ್ಕಾಲಿಕ ಬೇಲಿಯನ್ನು ಪಾಲಿಕೆ ಮತ್ತು ಪೊಲೀಸರು ತೆರವು ಮಾಡಿದರು. ಈ ಘಟನೆಯನ್ನು ಖಂಡಿಸಿ ಮುಸ್ಲಿಂ ಪರ ಸಂಘಟನೆಗಳು ಬುಧವಾರ ಶಿವನೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಬಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮುಸ್ಲಿಂ ಮುಖಂಡರು ಈದ್ಗಾ ಮೈದಾನ ವಕ್ಫ ಆಸ್ತಿ ಆಗಿದೆ. ಅದನ್ನು ನಮಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದರು.
ಈದ್ಗಾ ಮೈದಾನವು ನಮಗೆ ಸೇರಿದ್ದು ಅಂತ ಮುಸ್ಲಿಂ ಪರ ಸಂಘಟನೆಗಳು ಹೇಳುತ್ತಿದ್ದರೇ, ಹಿಂದೂಪರ ಸಂಘಟನೆಗಳು ಈ ಜಾಗ ದಶಕಗಳಿಂದ ಪಾಲಿಕೆಯ ಆಸ್ತಿಯಾಗಿದೆ. ಕೇವಲ ಮುಸ್ಲಿಮರಿಗೆ ಪ್ರಾರ್ಥನೆಗೆ ಮಾತ್ರ ಅವಕಾಶ ಇದೆ ಎಂದು ಹೇಳುತ್ತಿದ್ದಾರೆ.
ತಣ್ಣಗೆ ಇದ್ದ ವಿವಾದಾತ್ಮಕ ಈದ್ಗಾ ಮೈದಾನದ ಜಾಗವು ಈಗ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಇಬ್ಬರು ಮುಸ್ಲಿಂ ಮುಖಂಡರ ಜೊತೆ ಒಂದೂವೆರೆ ಗಂಟೆ ಸಭೆ ನಡೆಸಿದ್ದಾರೆ. ಸದ್ಯ, ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ಮುಂಜಾಗೃತೆ ವಹಿಸಿದ್ದಾರೆ. ಎಲ್ಲ ಮೂಲ ದಾಖಲೆಗಳನ್ನು ಪರಿಶೀನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿ ಮತ್ತು ಮತ್ತು ಎಸ್ಪಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ರಂಜಾನ್ ಪ್ರಾರ್ಥನೆ ವೇಳೆ ಮೊಳಗಿದ ಪ್ಯಾಲಿಸ್ತಾನಿ ಪರ ಘೋಷಣೆ, ಪ್ಲೇ ಕಾರ್ಡ್ ಪ್ರದರ್ಶನ
ಈದ್ಗಾ ಮೈದಾನದ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಇದೆ. ಯಾವುದೇ ಅಹಿತರಕ ಘಟನೆ ನಡೆದಯಂತೆ ಪೊಲೀಸರು ಮೈದಾನಕ್ಕೆ ಹೋಗುವ ಜಾಗಕ್ಕೆ ಬ್ಯಾರಿಕೆಡ್ ಹಾಕಿದ್ದಾರೆ. ಮುಂದೆ ಈದ್ಗಾ ಮೈದಾನದ ವಿವಾದವು ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೊಡಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Wed, 2 April 25