ಗರ್ಭದಲ್ಲಿರುವ ಮಗು ಸ್ಮಾರ್ಟ್ ಆಗಲು ಏನು ಮಾಡಬೇಕು ಗೊತ್ತಾ?
ಹೊಟ್ಟೆಯಲ್ಲಿರುವಾಗಲೇ ಮಗುವಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂಬ ಮಾತನ್ನು ನೀವು ಕೇಳಿರಬಹುದು. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಗರ್ಭ ಸಂಸ್ಕಾರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿದೆ. ಗರ್ಭಾವಸ್ಥೆಯಲ್ಲಿಯೇ ಮಗುವಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೆ ಪೂರಕ ಎಂಬಂತೆ ಮಗುವನ್ನು ಸ್ಮಾರ್ಟ್ ಮಾಡಲು ಕೆಲವು ಸರಳ ಸಲಹೆಗಳು ಇಲ್ಲಿವೆ.

ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಎಷ್ಟೋ ವಿಷಯಗಳನ್ನು ಗ್ರಹಿಸುತ್ತದೆ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಅದಕ್ಕಾಗಿಯೇ ಮಗು ಬೆಳೆಯುತ್ತಿರುವಾಗ ತಾಯಂದಿರು ಒಳ್ಳೆಯ ವಿಷಯಗಳನ್ನು ಮಾತನಾಡಬೇಕು, ಕೇಳಬೇಕು ಎಂದು ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಗರ್ಭ ಸಂಸ್ಕಾರದ (Garbh Sanskar) ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿದೆ. ಜೊತೆಗೆ ರಾಮಾಯಣ (RAMAYANA), ಮಹಾಭಾರತದ (Mahabharata), ಕಥೆಗಳನ್ನು ಬೋಧನೆ ಮಾಡಲಾಗುತ್ತದೆ. ಗರ್ಭಾವಸ್ಥೆಯಲ್ಲಿಯೇ ಒಳ್ಳೆಯ ಮೌಲ್ಯಗಳನ್ನು ಕಲಿಸಲು ಇವು ಬಹಳ ಪರಿಣಾಮಕಾರಿಯಾದಂತಹ ವಿಧಾನವಾಗಿದೆ. ಮಗುವಿಗೆ ಭಾಷೆಗಳು ಅರ್ಥವಾಗದಿದ್ದರೂ ಕೂಡ ಶಬ್ದಗಳನ್ನು ಗ್ರಹಿಸುವ ಸಾಮರ್ಥ್ಯವಿರುತ್ತದೆ. ಈ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿದ್ದರೂ ಕೂಡ ಕೆಲವು ಸಂಶೋಧನೆಗಳಲ್ಲಿ ಮಗುವಿಗೆ ಪದೇ ಪದೇ ಕೇಳುವ ಶಬ್ದವನ್ನು ಗ್ರಹಿಸುವ ಶಕ್ತಿ ಇರುತ್ತದೆ ಎಂಬುದು ತಿಳಿದು ಬಂದಿದೆ ಹಾಗಾಗಿ ಗರ್ಭಾವಸ್ಥೆಯಲ್ಲಿ ಮಗುವನ್ನು ಸ್ಮಾರ್ಟ್ ಮಾಡಲು ಕೆಲವು ಸರಳ ಸಲಹೆಗಳು ಇಲ್ಲಿವೆ.
- ಸಂಗೀತ ಕೇಳುವುದು ಒಂದು ಥೆರೆಪಿ. ಇದು ಆಯಾಸವನ್ನು ಕಡಿಮೆ ಮಾಡುವುದರಿಂದ ತಾಯಿ, ಮಗು ಇಬ್ಬರಿಗೂ ಒಳ್ಳೆಯದು. ಆದರೆ ಯಾವ ರೀತಿಯ ಸಂಗೀತ ಆಲಿಸುತ್ತೀರಿ ಎಂಬುದು ಬಹಳ ಮುಖ್ಯವಾಗಿರುತ್ತದೆ. ಭಜನೆ, ಸುಮಧುರ ಸಂಗೀತ, ಶ್ಲೋಕ, ಕಥೆಗಳನ್ನು ಕೇಳುವುದು ಒಳ್ಳೆಯದು. ಆದರೆ ಆದಷ್ಟು ಸಣ್ಣ ಧ್ವನಿಯಲ್ಲಿ ಕೇಳಲು ಪ್ರಯತ್ನ ಮಾಡಿ, ಜೊತೆಗೆ ಹೆಚ್ಚು ಹೊತ್ತು ಸಂಗೀತ ಕೇಳಬೇಡಿ. ದಿನದಲ್ಲಿ ಒಂದಿಷ್ಟು ಹೊತ್ತು ಇದಕ್ಕಾಗಿಯೇ ಸಮಯ ಹೊಂದಿಸಿಕೊಳ್ಳುವುದು ಒಳ್ಳೆಯದು.
- ಗರ್ಭಿಣಿಯ ಸುತ್ತಮುತ್ತ ಧನಾತ್ಮಕ ವಾತಾವರಣ ಇರುವುದು ಬಹಳ ಮುಖ್ಯ. ಇದು ಮಗುವಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಪ್ರತಿನಿತ್ಯ ಮನೆಯಲ್ಲಿ ಜಗಳ, ಮಾನಸಿಕ ಒತ್ತಡ ಈ ರೀತಿ ಅಂಶಗಳು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಆದಷ್ಟು ಖುಷಿಯಾಗಿರಿ. ಕೀರ್ತನೆ, ನ್ರತ್ಯ, ಯಕ್ಷಗಾನ, ಒಳ್ಳೆಯ ಹಾಸ್ಯ ಇರುವ ಕಥೆಗಳನ್ನು ಕೇಳಿ.
- ಬೆಳಿಗ್ಗೆ 20 ನಿಮಿಷ ತಾಜಾ ಗಾಳಿ ಹಾಗೂ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕುಳಿತುಕೊಳ್ಳಿ. ಈ ರೀತಿಯ ಅಭ್ಯಾಸ ಕಾಯಿಲೆಗಳಿಂದ ದೂರ ಇರಿಸುತ್ತದೆ. ಅದಲ್ಲದೆ ಇವೆಲ್ಲವೂ ನಿಮ್ಮ ಮನಸ್ಸನ್ನು ನಿರಾಳಗೊಳಿಸಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇಂತಹ ಅಭ್ಯಾಸ ಮಗುವಿಗೂ ಒಳ್ಳೆಯದು. ಅದಲ್ಲದೆ ನಿಯಮಿತವಾಗಿ ವ್ಯಾಯಾಮ ಮಾಡಿ ಜೊತೆಗೆ ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯಬೇಡಿ. ಸಮಯ ಸಿಕ್ಕಾಗೆಲ್ಲಾ ನಿಮ್ಮ ಮಗುವಿನೊಂದಿಗೆ ಮಾತನಾಡಿ
- ತಾಯಿ ಎಷ್ಟು ಉತ್ತಮ ಆಹಾರ ಸೇವಿಸುತ್ತಾಳೋ ಅಷ್ಟು ಮಗುವಿಗೆ ಪೌಷ್ಠಿಕಾಂಶ ಸಿಗುತ್ತದೆ. ಹಾಗಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ಆದರೆ ಆ ತರಕಾರಿ ಒಳ್ಳೆಯದಲ್ಲ, ಬಾದಾಮಿ ತಿನ್ನಬೇಕು, ಕೇಸರಿ ತಿನ್ನುವುದು ಒಳ್ಳೆಯದು ಎಂಬಂತಹ ಮಾತುಗಳು ಸುಳ್ಳು. ನಿಮಗಿಷ್ಟವಾಗುವ ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಿ. ಹೊರಗಿನ ಆಹಾರಗಳನ್ನು ಸಾಧ್ಯವಾದಷ್ಟು ಸೇವನೆ ಮಾಡಬೇಡಿ. ಏನೇ ತಿನ್ನಬೇಕು ಎನಿಸಿದರೂ ಮನೆಯಲ್ಲಿಯೇ ಮಾಡಿ ತಿನ್ನಿ. ಇದು ಮಗುವಿನ ಬೆಳವಣಿಗೆಗೆ ಬಹಳ ಸಹಾಯ ಮಾಡುತ್ತದೆ. ಜೊತೆಗೆ ಭರಪೂರವಾಗಿ ಹಣ್ಣು, ತರಕಾರಿಗಳ ಸೇವನೆ ಮಾಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 14 April 25