ಬೇಸಿಗೆಯಲ್ಲಿ ತಪ್ಪದೆ ಬಿಲ್ವಪತ್ರೆ ಸೇವನೆ ಮಾಡಿ
ಬಿಲ್ವಪತ್ರೆ ಕೇವಲ ಪೂಜೆಗೆ ಮಾತ್ರವಲ್ಲ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಎಲೆಗಳನ್ನು ಸೇವನೆ ಮಾಡಿದರೆ ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಲಾಭಗಳಿವೆ ತಿಳಿದುಕೊಳ್ಳಿ.
Updated on: Apr 15, 2025 | 10:22 AM

ಬಿಲ್ವಪತ್ರೆ ಎಲೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಇದು ಭಗವಾನ್ ಶಿವನಿಗೆ ಬಹಳ ಪ್ರೀಯವಾಗಿದ್ದು ಭಕ್ತರು ಶಿವನನ್ನು ಪೂಜಿಸಲು ಇದನ್ನು ಬಳಕೆ ಮಾಡುತ್ತಾರೆ. ಆದರೆ ಇದು ಕೇವಲ ಪೂಜೆಗಾಗಿ ಅಲ್ಲ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ? ಬೇಸಿಗೆ ಕಾಲದಲ್ಲಿ ಏಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಬೇಸಿಗೆಯಲ್ಲಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಬಿಲ್ವಪತ್ರೆ ಎಲೆಯನ್ನು ಸೇವಿಸಿದರೆ, ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಎಲೆಗಳನ್ನು ಜಗಿದು ಸೇವನೆ ಮಾಡಬಹುದು ಅಥವಾ ಕಷಾಯದ ರೂಪದಲ್ಲಿಯೂ ಸೇವನೆ ಮಾಡಬಹುದು ಇದರಿಂದ ಅದ್ಭುತ ಫಲಿತಾಂಶ ಸಿಗುತ್ತದೆ.

ಬಿಲ್ವಪತ್ರೆಯಲ್ಲಿ ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್ ಎ, ಸಿ, ಬಿ 1, ಬಿ 6 ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ವಿಟಮಿನ್ ಸಿ ಅಧಿಕವಾಗಿರುವ ಈ ಎಲೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಕೆಮ್ಮು ಮತ್ತು ಶೀತದಂತಹ ಸಣ್ಣ ಸೋಂಕುಗಳು ಕಡಿಮೆಯಾಗುತ್ತದೆ.

ಬಿಲ್ವಪತ್ರೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತವೆ. ಜೊತೆಗೆ ಈ ಎಲೆಗಳನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಬಿಪಿ ಕಡಿಮೆಯಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಜೊತೆಗೆ ಯಕೃತ್ತು ಆರೋಗ್ಯಕರವಾಗಿರುತ್ತದೆ. ಪ್ರತಿನಿತ್ಯ ಮುಂಜಾನೆ ಎಲೆಗಳನ್ನು ಜಗಿಯುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಇದರ ಶಿಲೀಂಧ್ರ ವಿರೋಧಿ ಗುಣಗಳು ಚರ್ಮದ ಸಮಸ್ಯೆಗಳನ್ನು ದೂರವಿಡುತ್ತವೆ.

ಬಿಲ್ವಪತ್ರೆ ಎಲೆಗಳಲ್ಲಿರುವ ಕಿಣ್ವಗಳು ಜೀರ್ಣಕಾರಿ ಸಮಸ್ಯೆಗಳನ್ನು ದೂರವಿಡುತ್ತವೆ. ಈ ಎಲೆಗಳನ್ನು ಜಗಿಯುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಬೆಳಿಗ್ಗೆ ಸಮಯದಲ್ಲಿ ಈ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ಎಲ್ಲಾ ಕಲ್ಮಶಗಳನ್ನು ಹೊರಗೆ ಹೋಗಿ ರಕ್ತ ಶುದ್ಧವಾಗುತ್ತದೆ. ದೇಹವನ್ನು ನಿರ್ವಿಷಗೊಳಿಸಲಾಗುತ್ತದೆ.
























