- Kannada News Photo gallery Cricket photos PSL 2025: Sahibzada Farhan Equals Virat Kohli's World Record
PSL 2025: ಸ್ಫೋಟಕ ಸೆಂಚುರಿ… ವಿಶ್ವ ದಾಖಲೆ ಬರೆದ ಪಾಕಿಸ್ತಾನ್ ಬ್ಯಾಟರ್
Sahibzada Farhan Record: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ (PSL 2025) ಇಸ್ಲಾಮಾಬಾದ್ ಯುನೈಟೆಡ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಸಾಹಿಬ್‌ಝಾದ ಫರ್ಹಾನ್ ಸ್ಪೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
Updated on:Apr 15, 2025 | 11:00 AM

PSL 2025: ಪಾಕಿಸ್ತಾನ್ ಸೂಪರ್ ಲೀಗ್ನ 5ನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಸಾಹಿಬ್‌ಝಾದ ಫರ್ಹಾನ್ (Sahibzada Farhan )ವಿಶ್ವ ದಾಖಲೆ ಬರೆದಿದ್ದಾರೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಹಾಗೂ ಪೇಶಾವರ್ ಝಲ್ಮಿ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಸ್ಲಾಮಾಬಾದ್ ಯುನೈಟೆಡ್ ತಂಡದ ನಾಯಕ ಶಾದಾಬ್ ಖಾನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಬಿಸಿದ ಯುನೈಟೆಡ್ ತಂಡಕ್ಕೆ ಸಾಹಿಬ್‌ಝಾದ ಫರ್ಹಾನ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫರ್ಹಾನ್ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು.

ಈ ಶತಕದೊಂದಿಗೆ ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ಸಾಹಿಬ್‌ಝಾದ ಫರ್ಹಾನ್ ತಮ್ಮದಾಗಿಸಿಕೊಂಡರು. ಅಲ್ಲದೆ ಈ ದಾಖಲೆ ಬರೆದ ಪಾಕಿಸ್ತಾನದ ಮೊದಲ ಬ್ಯಾಟರ್ ಹಾಗೂ ವಿಶ್ವದ 5ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮುನ್ನ ಕ್ರಿಸ್ ಗೇಲ್ (2011), ವಿರಾಟ್ ಕೊಹ್ಲಿ (2016), ಜೋಸ್ ಬಟ್ಲರ್ (2022), ಶುಭ್ಮನ್ ಗಿಲ್ (2023) ಒಂದೇ ವರ್ಷದಲ್ಲಿ 4 ಟಿ20 ಶತಕ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಸಾಹಿಬ್‌ಝಾದ ಫರ್ಹಾನ್ ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸಾಹಿಬ್‌ಝಾದ ಫರ್ಹಾನ್ ಈ ವರ್ಷ ಒಟ್ಟು 4 ಟಿ20 ಶತಕಗಳನ್ನು ಬಾರಿಸಿದ್ದಾರೆ. ಫರ್ಹಾನ್ ಬ್ಯಾಟ್ನಿಂದ ಈ 4 ಸೆಂಚುರಿಗಳು ಮೂಡಿಬಂದಿರುವುದು ಕೇವಲ 9 ಇನಿಂಗ್ಸ್ಗಳಲ್ಲಿ ಎಂಬುದೇ ವಿಶೇಷ. ಇನ್ನು ರಾವಲ್ಪಿಂಡಿಯಲ್ಲಿ ಬಾರಿಸಿದ ಶತಕದ ನೆರವಿನಿಂದ ಇಸ್ಲಾಮಾಬಾದ್ ಯುನೈಟೆಡ್ ತಂಡ 20 ಓವರ್ಗಳಲ್ಲಿ 243 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪೇಶಾವರ ಝಲ್ಮಿ ತಂಡವು 141 ರನ್ಗಳಿಗೆ ಆಲೌಟ್ ಆಗಿದೆ.
Published On - 10:57 am, Tue, 15 April 25



















