ರಣರೋಚಕ ಪಂದ್ಯದಲ್ಲಿ ರೋಚಕ ಜಯ: ಇತಿಹಾಸ ನಿರ್ಮಿಸಿದ ಪಂಜಾಬ್ ಕಿಂಗ್ಸ್
IPL 2025 PBKS vs KKR: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರಣರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 111 ರನ್ ಬಾರಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 95 ರನ್ಗಳಿಸಿ ಆಲೌಟ್ ಆಗಿದೆ.
Updated on:Apr 16, 2025 | 7:30 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವು ರೋಚಕ ಜಯ ಸಾಧಿಸಿದೆ. ಅದು ಸಹ ಕೇವಲ 16 ರನ್ಗಳಿಂದ ಎಂಬುದು ವಿಶೇಷ. ಮುಲ್ಲನ್ಪುರ್ನ ಎಂವೈಎಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಕೆಕೆಆರ್ ಬೌಲರ್ಗಳ ಸಂಘಟಿತ ದಾಳಿಯಿಂದ ತತ್ತರಿಸಿದ ಕಿಂಗ್ಸ್ ಪಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪರಿಣಾಮ 15.3 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ ಕೇವಲ 111 ರನ್ಗಳಿಸಿ ಆಲೌಟ್ ಆಯಿತು

112 ರನ್ಗಳ ಗುರಿ ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಪಂಜಾಬ್ ಕಿಂಗ್ಸ್ ಬೌಲರ್ಗಳು ಯಶಸ್ವಿಯಾಗಿದ್ದರು. ಇದಾಗ್ಯೂ ಮೂರನೇ ವಿಕೆಟ್ಗೆ ಅಜಿಂಕ್ಯ ರಹಾನೆ ಹಾಗೂ ರಘುವಂಶಿ ಅರ್ಧಶತಕದ ಜೊತೆಯಾಟವಾಡಿದ್ದರು. ಈ ಹಂತದಲ್ಲಿ ದಾಳಿಗಿಳಿದ ಯುಜ್ವೇಂದ್ರ ಚಹಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಬ್ಯಾಕ್ ಟು ಬ್ಯಾಕ್ 4 ವಿಕೆಟ್ ಪಡೆದ ಚಹಲ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಇದರೊಂದಿಗೆ ರಣಉತ್ಸಾಹಕ್ಕೆ ಮಾರ್ಪಟ್ಟ ಪಂಜಾಬ್ ಕಿಂಗ್ಸ್ ಆಟಗಾರರು ಕೆಕೆಆರ್ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದರಲ್ಲೂ ಅದ್ಭುತ ಫೀಲ್ಡಿಂಗ್ ಸೆಟ್ ಮಾಡುವ ಮೂಲಕ ಸತತ ವಿಕೆಟ್ ಪಡೆದರು. ಪರಿಣಾಮ 15.1 ಓವರ್ಗಳಲ್ಲಿ 95 ರನ್ಗಳಿಸಿ ಕೆಕೆಆರ್ ಆಲೌಟ್ ಆಯಿತು.

ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು 16 ರನ್ಗಳ ರೋಚಕ ಜಯ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಕೋರ್ಗಳಿಸಿ ಜಯ ಸಾಧಿಸಿದ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು.

2009 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 116 ರನ್ ಬಾರಿಸಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 92 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 24 ರನ್ಗಳ ಜಯ ಸಾಧಿಸಿದ್ದರು.

ಇದೀಗ 111 ರನ್ಗಳನ್ನು ಡಿಫೆಂಡ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಬಲಿಷ್ಠ ಪಡೆ ಎಂದೇ ಗುರುತಿಸಿಕೊಂಡಿರುವ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 16 ರನ್ಗಳಿಂದ ಮಣಿಸುವ ಮೂಲಕ ಎಂಬುದು ವಿಶೇಷ.
Published On - 7:30 am, Wed, 16 April 25



















