IPL 2025: ಐಪಿಎಲ್ಗೆ ಮತ್ತೋರ್ವ ಕನ್ನಡಿಗ ಎಂಟ್ರಿ
IPL 2025: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಕರ್ನಾಟಕದ 14 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಮೊದಲು ಹರಾಜಿನ ಮೂಲಕ 13 ಆಟಗಾರರು ಆಯ್ಕೆಯಾಗಿದ್ದರೆ, ಇದೀಗ ಬದಲಿ ಆಟಗಾರನಾಗಿ ಕನ್ನಡಿಗ ಸ್ಮರಣ್ ರವಿಚಂದ್ರನ್ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದಾರೆ.
Updated on: Apr 15, 2025 | 9:24 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮತ್ತೋರ್ವ ಕನ್ನಡಿಗನ ಎಂಟ್ರಿಯಾಗಿದೆ. ಈ ಬಾರಿ ಎಂಟ್ರಿ ಕೊಟ್ಟಿರುವುದು ಕರ್ನಾಟಕದ ಸ್ಪೋಟಕ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ (Smaran Ravichandran). ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಸ್ಮರಣ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಗಾಯಗೊಂಡಿದ್ದು, ಹೀಗಾಗಿ ಅವರು ಐಪಿಎಲ್ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಇದೀಗ ಕರ್ನಾಟಕದ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆಯ್ಕೆ ಮಾಡಿದೆ.

21 ವರ್ಷದ ಸ್ಮರಣ್ ರವಿಚಂದ್ರನ್ ಕಳೆದ ವರ್ಷ ನಡೆದ ಮಹಾರಾಜ ಟಿ20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಗುಲ್ಬರ್ಗ ಮಿಸ್ಟಿಕ್ಸ್ ಪರ ಕಣಕ್ಕಿಳಿದಿದ್ದ ಸ್ಮರಣ್ ಕೇವಲ 9 ಇನ್ನಿಂಗ್ಸ್‌ಗಳಿಂದ 43.14 ರ ಸರಾಸರಿಯಲ್ಲಿ 302 ರನ್ ಬಾರಿಸಿದ್ದರು. ಅದು ಸಹ 145.19 ರ ಅದ್ಭುತ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ.

ಅಲ್ಲದೆ 2024ರ ಮಹಾರಾಜ ಟಿ20 ಟೂರ್ನಿಯಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಬಾರಿಸಿ ಮಿಂಚಿದ್ದಾರೆ. ಹಾಗೆಯೇ ಕರ್ನಾಟಕದ ಪರ ಆಡಿದ 10 ಲಿಸ್ಟ್ ಎ ಪಂದ್ಯಗಳಲ್ಲಿ 72.16 ಸರಾಸರಿಯಲ್ಲಿ 322 ರನ್ ಹಾಗೂ 6 ಟಿ20 ಪಂದ್ಯಗಳಲ್ಲಿ 34 ಸರಾಸರಿಯಲ್ಲಿ 170 ರನ್ ಕಲೆಹಾಕಿದ್ದಾರೆ.

ಇನ್ನು ಕರ್ನಾಟಕ ಪರ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸ್ಮರಣ್ ರವಿಚಂದ್ರನ್ 64.50 ಸರಾಸರಿಯಲ್ಲಿ 516 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಪಂಜಾಬ್ ಮತ್ತು ಹರಿಯಾಣ ವಿರುದ್ಧ ಸತತ ಶತಕಗಳನ್ನು ಸಿಡಿಸಿ ಮಿಂಚಿದ್ದರು. ಈ ಅದ್ಭುತ ಪ್ರದರ್ಶನಗಳ ಫಲವಾಗಿ ಇದೀಗ ಸ್ಮರಣ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.

ಸನ್ರೈಸರ್ಸ್ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಇಶಾನ್ ಕಿಶನ್, ರಾಹುಲ್ ಚಹರ್, ಅಥರ್ವ ಟೈಡೆ, ಅಭಿನವ್ ಮನೋಹರ್, ಸಿಮರ್ಜೀತ್ ಸಿಂಗ್, ಜೀಶನ್ ಅನ್ಸಾರಿ, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಅನಿಕೇತ್ ವರ್ಮಾ, ಇಶಾನ್ ಮಾಲಿಂಗ, ಸ್ಮರಣ್ ರವಿಚಂದ್ರನ್.



















