ನವದೆಹಲಿ: ಈ ವರ್ಷದ ಮುಂಗಾರು ಬೆಳೆ ಅಥವಾ ಖಾರಿಫ್ ಬೆಳೆಗಳಿಗೆ (Kharif Crops) ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ದೊರೆತಿದೆ. ಅದರ ಪ್ರಕಾರ ವಿವಿಧ ಬೆಳೆಗಳಿಗೆ ಇರುವ ಎಂಎಸ್ಪಿಯನ್ನು (Minimum Support Price) ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. 2040 ರೂ ಇರುವ ಭತ್ತದ ಎಂಎಸ್ಪಿ ದರವನ್ನು 2,200 ರೂವರೆಗೂ ಏರಿಸುವ ಸಾಧ್ಯತೆ ಇದೆ. ಕ್ವಿಂಟಾಲ್ ರಾಗಿಗೆ ಇರುವ 3,578 ರೂ ಬೆಂಬಲ ಬೆಲೆಯನ್ನು 4,000 ರೂಗೆ ಏರಿಸಬಹುದು ಎನ್ನಲಾಗುತ್ತಿದೆ.
ಗೋಧಿ ಇತ್ಯಾದಿ ಹಿಂಗಾರು ಬೆಳೆಗಳಿಗೆ ಸರ್ಕಾರ ಇತ್ತೀಚೆಗೆ ಎಂಎಸ್ಪಿ ದರ ಹೆಚ್ಚಿಸಿತ್ತು. ಈಗ ಮುಂಗಾರು ಬೆಳೆಗೂ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಬಹುದು.
ಇದನ್ನೂ ಓದಿ: UPI: ಪೇಟಿಎಂ, ಫೋನ್ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ
ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಈ ವರ್ಷ ಇದೂವರೆಗೂ ಕೇಂದ್ರ ಸರ್ಕಾರ ರೈತರಿಂದ 262 ಲಕ್ಷ ಟನ್ಗಳಷ್ಟು ಗೋಧಿ ಖರೀದಿ ಮಾಡಿದೆ. ಒಟ್ಟು 47,000 ಕೋಟಿ ರೂ ಹಣವನ್ನು ಈ ಗೋಧಿ ಬೆಳೆದ ರೈತರಿಗೆ ತಲುಪಿಸಲಾಗಿದೆ. 21.27 ಲಕ್ಷ ರೈತರಿಗೆ ಅನುಕೂಲವಾಗಿದೆ.
ಕಳೆದ ವರ್ಷ (2022) ಕೇಂದ್ರ ಸರ್ಕಾರ ಎಂಎಸ್ಪಿ ದರದಲ್ಲಿ ರೈತರಿಂದ 188 ಲಕ್ಷ ಟನ್ಗಳಷ್ಟು ಗೋಧಿ ಖರೀದಿ ಮಾಡಿತ್ತು. ಈ ವರ್ಷ ಕೇವಲ 5 ತಿಂಗಳಲ್ಲಿ ಆ ಮೊತ್ತವನ್ನು ಮೀರಿಸಿ ಖರೀದಿ ಡೆದಿದೆ. ಹಿಂಗಾರು ಋತು ಅಥವಾ ರಾಬಿ ಋತುವಿನ ಬೆಳೆಯಾದ ಗೋಧಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್ಗೆ 2,125 ರೂಗೆ ನಿಗದಿ ಮಾಡಿದೆ.
ಇದನ್ನೂ ಓದಿ: Arecanut Price 01 ಜೂನ್: ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ