UPI: ಪೇಟಿಎಂ, ಫೋನ್ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ
941 Crore UPI Transactions In 2023 May: ಎನ್ಪಿಸಿಐ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ 2023ರ ಮೇ ತಿಂಗಳಲ್ಲಿ 940 ಕೋಟಿಗೂ ಹೆಚ್ಚು ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. ಇಷ್ಟು ವಹಿವಾಟುಗಳಿಂದ ಸೇರಿ 14 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹಣದ ವರ್ಗಾವಣೆಗಳಾಗಿವೆ.
ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ (Digital Payment System) ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ಅತೀವ ಜನಪ್ರಿಯತೆ ಗಳಿಸುತ್ತಿದೆ. ಪೇಟಿಎಂ, ಫೋನ್ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್ಫಾರ್ಮ್ಗಳ ಜನಬಳಕೆ ಅತಿ ಹೆಚ್ಚಾಗಿದೆ. ಯುಪಿಐ ವ್ಯವಸ್ಥೆಯ ರೂವಾರಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (NPCI) ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ 2023ರ ಮೇ ತಿಂಗಳಲ್ಲಿ 940 ಕೋಟಿಗೂ ಹೆಚ್ಚು ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. ಇಷ್ಟು ವಹಿವಾಟುಗಳಿಂದ ಸೇರಿ 14 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹಣದ ವರ್ಗಾವಣೆಗಳಾಗಿವೆ.
2023ರ ವಿವಿಧ ತಿಂಗಳಲ್ಲಿ ಯುಪಿಐ ಮೂಲಕ ನಡೆದಿರುವ ವಹಿವಾಟು ಸಂಖ್ಯೆ
- ಜನವರಿ: 800 ಕೋಟಿ
- ಫೆಬ್ರುವರಿ: 750 ಕೋಟಿ
- ಮಾರ್ಚ್: 870 ಕೋಟಿ
- ಏಪ್ರಿಲ್: 889 ಕೋಟಿ
- ಮೇ: 941 ಕೋಟಿ
2022-23ರ ಹಣಕಾಸು ವರ್ಷದಲ್ಲಿ, ಅಂದರೆ 2022ರ ಏಪ್ರಿಲ್ನಿಂದ ಹಿಡಿದು 2023ರ ಮಾರ್ಚ್ವರೆಗಿನ ಅವಧಿಯಲ್ಲಿ ಯುಪಿಐ ಪ್ಲಾಟ್ಫಾರ್ಮ್ಗಳಲ್ಲಿ ಆದ ವಹಿವಾಟು ಸಂಖ್ಯೆ 8,300 ಕೋಟಿ. ಈ ವಹಿವಾಟುಗಳಲ್ಲಿ ಒಟ್ಟು 139 ಲಕ್ಷ ಕೋಟಿ ರೂನಷ್ಟು ಹಣದ ಪಾವತಿಗಳಾಗಿವೆ.
ದಿನಕ್ಕೆ 100 ಕೋಟಿ ವಹಿವಾಟು ಮಟ್ಟ ಮುಟ್ಟಬಲ್ಲುದು ಯುಪಿಐ
ಪಿಡಬ್ಲ್ಯೂಸಿ ಇಂಡಿಯಾ ಸಂಸ್ಥೆಯ ವರದಿಯೊಂದರ ಪ್ರಕಾರ 2026-27ರಲ್ಲಿ ಭಾರತದಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ ದಿನಕ್ಕೆ 100 ಕೋಟಿಯಂತೆ ಆಗಬಹುದು. ಭಾರತದಲ್ಲಿರುವ ಒಟ್ಟಾರೆ ಡಿಜಿಟಲ್ ಪೇಮೆಂಟ್ ಸೇವೆಯಲ್ಲಿ ಯುಪಿಐ ಪಾಲು ಶೇ 90ರಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: Economy: 2022-23ರಲ್ಲಿ ಭಾರತಕ್ಕೆ ಒಳ್ಳೆಯ ಜಿಡಿಪಿ ಸಿಗಲು ಹೂಡಿಕೆಗಳೇ ಕಾರಣ ಎಂತಾರೆ ಆರ್ಥಿಕ ತಜ್ಞರು; ಅದು ಹೇಗೆ ಸಾಧ್ಯ?
ಸದ್ಯ 2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಆಗಿರುವ ಒಟ್ಟು ಹಣಕಾಸು ವಹಿವಾಟಿನಲ್ಲಿ ಯುಪಿಐ ಪೇಮೆಂಟ್ ಶೇ 75ರಷ್ಟಿದೆ.
ಯುಪಿಐ ಬಿಟ್ಟರೆ ಬೇರೆ ಯಾವುದಿವೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಮೈಕ್ರೋ ಎಟಿಎಂ, ಪಿಒಎಸ್, ಬ್ಯಾಂಕ್ ಪ್ರೀಪೇಯ್ಡ್ ಕಾರ್ಡ್, ಯುಎಸ್ಎಸ್ಡಿ, ಎಇಪಿಎಸ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Fri, 2 June 23