ನೂರು ಕೋಟಿ ಜನರ ವಿಶ್ವಾಸ ಗಳಿಸಿರುವ ಆಧಾರ್ ಬಗ್ಗೆ… ಮೂಡೀಸ್ ಆರೋಪಗಳನ್ನು ತಳ್ಳಿಹಾಕಿದ ಸರ್ಕಾರ
Government vs Moody's Aadhaar Report: ಜಗತ್ತಿನ ಅತಿದೊಡ್ಡ ಡಿಜಿಟಲ್ ಐಡಿ ಪ್ಲಾಟ್ಫಾರ್ಮ್ ಆಗಿರುವ ಆಧಾರ್ನಲ್ಲಿ ಹಲವು ಭದ್ರತಾ ಲೋಪಗಳಿವೆ ಎಂದು ಜಾಗತಿಕ ಹೂಡಿಕೆದಾರ ಸೇವಾ ಸಂಸ್ಥೆ ಮೂಡೀಸ್ ತನ್ನ ಇತ್ತೀಚಿನ ವರದಿಯಲ್ಲಿ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರ, ಮೂಡೀಸ್ನ ಆ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
ನವದೆಹಲಿ, ಸೆಪ್ಟೆಂಬರ್ 26: ಭಾರತದಲ್ಲಿ ಬಹಳ ವ್ಯಾಪಕವಾಗಿ ಬಳಕೆಯಾಗುವ ಆಧಾರ್ನಿಂದ ಭದ್ರತಾ ಅಪಾಯ, ಗೌಪ್ಯತೆಗೆ ಧಕ್ಕೆ ಆಗುತ್ತದೆ ಎಂದು ಹೇಳಿ ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ (Moody’s) ಪ್ರಸ್ತುತಪಡಿಸಿದ್ದ ವರದಿಯನ್ನು ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ಸೆಪ್ಟೆಂಬರ್ 21ರಂದು ಬಿಡುಗಡೆ ಆಗಿದ್ದ ಮೂಡೀಸ್ ವರದಿಯಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ನಿರಾಧಾರವಾಗಿವೆ ಎಂದು ಯುಐಡಿಎಐ ಹೇಳಿದೆ. ಕೂಲಿ ಕಾರ್ಮಿಕರಿಗೆ ನಿಖರವಾಗಿ ಸೇವೆ ನೀಡಲು ಆಧಾರ್ ವಿಫಲವಾಗಿದೆ ಎನ್ನುವ ಆರೋಪವನ್ನೂ ಯುಐಡಿಎಐ ತಳ್ಳಿಹಾಕಿದೆ.
‘ವಿಶ್ವದ ಅತ್ಯಂತ ವಿಶ್ವಸನೀಯ ಡಿಜಿಟಲ್ ಐಡಿ ಎನಿಸಿದ ಆಧಾರ್ ವಿರುದ್ಧ ಒಂದು ಇನ್ವೆಸ್ಟರ್ ಸರ್ವಿಸ್ ಸಂಸ್ಥೆ ಯಾವುದೇ ಆಧಾರ ಇಲ್ಲದೇ ಆರೋಪಗಳನ್ನು ಮಾಡಿದೆ. ಕಳೆದ ದಶಕದಲ್ಲಿ ಶತಕೋಟಿಗೂ ಹೆಚ್ಚು ಭಾರತೀಯರು ಸಹಸ್ರಾರು ಕೋಟಿಗೂ ಹೆಚ್ಚು ಬಾರಿ ಆಧಾರ್ ಬಳಸಿ ತಮ್ಮ ವಿಶ್ವಾಸವನ್ನು ತೋರ್ಪಡಿಸಿದ್ದಾರೆ. ಇಂಥ ಒಂದು ಐಡಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ನಿರ್ಲಕ್ಷಿಸುವುದೆಂದರೆ, ಆಧಾರ್ ಬಳಕೆದಾರರಿಗೆ ತಮ್ಮ ಹಿತಾಸಕ್ತಿ ಬಗ್ಗೆ ಅರಿವಿಲ್ಲವೆಂದು ಹೇಳಿದಂತಾಗುತ್ತದೆ’ ಎಂದು ಸರ್ಕಾರ ಹೇಳಿಕೆ ನೀಡಿದೆ.
ಇದನ್ನೂ ಓದಿ: ಗೃಹಸಾಲಗಳ ಬಡ್ಡಿಗೆ ಸಬ್ಸಿಡಿ; ಕೇಂದ್ರದಿಂದ 60,000 ಕೋಟಿ ರೂ ಮೊತ್ತದ ಯೋಜನೆ ಶೀಘ್ರದಲ್ಲೇ?
ಐಎಂಎಫ್ ಮತ್ತು ವಿಶ್ವಬ್ಯಾಂಕ್ನಂತಹ ಜಾಗತಿಕ ಸಂಸ್ಥೆಗಳು ಆಧಾರ್ ಅನ್ನು ಹೊಗಳಿವೆ. ಇಂಥದ್ದೇ ರೀತಿಯ ಡಿಜಿಟಲ್ ಐಡಿ ವ್ಯವಸ್ಥೆಯನ್ನು ತಮ್ಮಲ್ಲಿ ಹೇಗೆ ಅಳವಡಿಸಬಹುದು ಎಂದು ತಿಳಿಯಲು ಹಲವು ದೇಶಗಳು ಯುಐಡಿಎಐಯನ್ನು ಸಂಪರ್ಕಿಸುತ್ತಿವೆ ಎಂದೂ ಸರ್ಕಾರ ಹೇಳಿದೆ.
ಮೂಡೀಸ್ ವರದಿಯಲ್ಲಿ ಏನಿದೆ?
‘ವಿಶ್ವದ ಅತಿದೊಡ್ಡ ಡಿಜಿಟಲ್ ಐಡಿ ಯೋಜನೆಯಾದ ಆಧಾರ್ನಲ್ಲಿ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್, ಒಟಿಪಿ ಮೂಲಕ ಅಥೆಂಟಿಕೇಶನ್ ಮಾಡಬಹುದು. ನಿರ್ಲಕ್ಷಿತ ವರ್ಗಗಳನ್ನು ಒಂದುಗೂಡಿಸಲು ಮತ್ತು ಸರ್ಕಾರಿ ಸೌಲಭ್ಯಗಳನ್ನು ನಿಖರವಾಗಿ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ, ಆಧಾರ್ನ ಬಯೋಮೆಟ್ರಿಕ್ ಮೇಲಿನ ವಿಶ್ವಾಸಾರ್ಹತೆ ಬಗ್ಗೆ ಅನುಮಾನಗಳಿವೆ. ಆಥರೈಸೇಶನ್ ಪ್ರಕ್ರಿಯೆಯಲ್ಲಿ ಲೋಪ ಸೇರಿದಂತೆ ಹಲವು ಸಮಸ್ಯೆಗಳು ಆಧಾರ್ನಲ್ಲಿವೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್ ಚಾನಲ್ ಬಳಗದ ಸಂಖ್ಯೆ 50ಲಕ್ಷಕ್ಕಿಂತ ಹೆಚ್ಚು; ಮುಂಚೂಣಿಯಲ್ಲಿ ಯಾರಿದ್ದಾರೆ?
‘ಆಧಾರ್ನಲ್ಲಿ ಹಲವು ಬಾರಿ ಸೇವೆ ನಿರಾಕರಣೆಗಳಾಗುತ್ತವೆ. ಬಯೋಮೆಟ್ರಿಕ್ ತಂತ್ರಜ್ಞಾನದ ಮೇಲಿನ ಅವಲಂಬನೆ ಪ್ರಶ್ನಾರ್ಹವಾಗಿದೆ. ಅದರಲ್ಲೂ ಬಿಸಿಲಿನ ಹವಾಮಾನದಲ್ಲಿ ಕೂಲಿ ಕಾರ್ಮಿಕರಿಗೆ ಅನನುಕೂಲವಾಗಿದೆ’ ಎಂದು ಮೂಡೀಸ್ ತನ್ನ ವರದಿಯಲ್ಲಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ