LIC IPO: ಎಲ್​ಐಸಿ ಐಪಿಒನೊಂದಿಗೆ ಮುಂದುವರಿಯಲಿದೆ ಸರ್ಕಾರ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

| Updated By: Srinivas Mata

Updated on: Feb 22, 2022 | 10:41 PM

ಕೇಂದ್ರ ಸರ್ಕಾರವು ಎಲ್​ಐಸಿ ಐಪಿಒದೊಂದಿಗೆ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

LIC IPO: ಎಲ್​ಐಸಿ ಐಪಿಒನೊಂದಿಗೆ ಮುಂದುವರಿಯಲಿದೆ ಸರ್ಕಾರ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us on

“ಮಾರುಕಟ್ಟೆ ಮತ್ತು ಆಸಕ್ತಿಯಲ್ಲಿ ಉತ್ಸಾಹ ಇದೆ” ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಯೊಂದಿಗೆ ಸರ್ಕಾರವು ಮುಂದುವರಿಯುತ್ತಿದೆ ಎಂದು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಒತ್ತಿ ಹೇಳಿದರು. ಅದೇ ಸಮಯಕ್ಕೆ ಎಚ್ಚರಿಕೆ ಮಾತೆಂಬಂತೆ, “ಮಾರುಕಟ್ಟೆ ಪರಿಸ್ಥಿತಿ (ಐಪಿಒ) ಅನುಕೂಲಕರವಾಗಿದೆಯೇ” ಎಂದು ಸರ್ಕಾರವು ಆಲೋಚಿಸುತ್ತಿದೆ ಎಂದು ಅವರು ಹೇಳಿದ್ದಾರೆ. “ಮಾರುಕಟ್ಟೆಯಲ್ಲಿ ಉತ್ಸಾಹ ಇದೆ ಮತ್ತು ಎಲ್​ಐಸಿ ಐಪಿಒ ಬಗ್ಗೆ ಆಸಕ್ತಿ ಇದೆ. ನಾವು ಅದನ್ನು ಮುಂದುವರಿಸುತ್ತಿದ್ದೇವೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೂ “ಮಾರುಕಟ್ಟೆ ಪರಿಸ್ಥಿತಿಯು ಅನುಕೂಲಕರವಾಗಿದೆಯೇ ಎಂಬ ಬಗ್ಗೆಯೂ ನಾವು ಸಮಾನವಾಗಿ ಆಲೋಚಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.

ಮುಂಬೈಗೆ ಎರಡು ದಿನಗಳ ಭೇಟಿಯ ಕೊನೆಯ ದಿನವಾದ ಇಂದು ಪತ್ರಿಕಾಗೋಷ್ಠಿಯಲ್ಲಿ ಹಣಕಾಸು ಸಚಿವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಈ ಹೇಳಿಕೆ ನೀಡಿದ್ದಾರೆ. ಪೂರ್ವ ಯುರೋಪಿನಲ್ಲಿ ಸದ್ಯಕ್ಕೆ ಇರು ಪರಿಸ್ಥಿತಿಯು ಪ್ರಪಂಚದಾದ್ಯಂತದ ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಹಿಂದಿನ ದಿನದಲ್ಲಿ ಪ್ರತಿ ಬ್ಯಾರೆಲ್‌ಗೆ 99 ಯುಎಸ್​ಡಿ ದಾಟಿದೆ. ಎಲ್​ಐಸಿ ಐಪಿಒಗಾಗಿ ಕರಡು (ಡ್ರಾಫ್ಟ್) ರೆಡ್-ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಅನ್ನು ಫೆಬ್ರವರಿ 13ರಂದು ಬಿಡುಗಡೆ ಮಾಡಲಾಗಿದೆ. ಈ ಆಫರ್ 316.25 ಮಿಲಿಯನ್ ಷೇರುಗಳು ಅಥವಾ ಸರ್ಕಾರವು ಎಲ್​ಐಸಿನಲ್ಲಿ ಹೊಂದಿರುವ ಒಟ್ಟು ಪಾಲಿನಲ್ಲಿ ಸುಮಾರು ಶೇ 5ರಷ್ಟರ ಮಾರಾಟ ಆಗುತ್ತದೆ.

DRHP ಬಿಡುಗಡೆಯು ಐಪಿಒನಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. “ಇದನ್ನು ರಚಿಸಿರುವ ರೀತಿಯ ಕಾರಣಕ್ಕೆ ಬಹಳಷ್ಟು ಆಸಕ್ತಿಯನ್ನು ಉಂಟು ಮಾಡಿದೆ ಎಂದು ನಾನು ಭಾವಿಸುತ್ತೇನೆ,” ಎಂಬುದಾಗಿ ಅವರು ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮುಂಬೈಗೆ ಭೇಟಿ ನೀಡಿದ ಮೊದಲ ದಿನದಲ್ಲಿ ಕೇಂದ್ರ ಬಜೆಟ್ ಕುರಿತು ಚರ್ಚಿಸಲು ಉದ್ಯಮ, ವ್ಯಾಪಾರ ಮತ್ತು ಹಣಕಾಸು ಮಾರುಕಟ್ಟೆಯ ಪಾಲುದಾರರನ್ನು ಭೇಟಿ ಮಾಡಿದ್ದರು. ಎಲ್​ಐಸಿಯ ಐಪಿಒದಲ್ಲಿ ನಿರೀಕ್ಷಿತ ಹೂಡಿಕೆದಾರರಾಗಿ ಇರುವವರು ಅದರ ನಿಯಂತ್ರಣ ಷೇರುದಾರ ಆದ ಸರ್ಕಾರವು ನಿಗದಿಪಡಿಸಿದ ಗುರಿಗಳನ್ನು ಪೂರೈಸಲು ತಮ್ಮ ಹಿತಾಸಕ್ತಿಗಳನ್ನು ತ್ಯಾಗ ಮಾಡುವುದಿಲ್ಲ ಎಂದು ಕಂಪೆನಿಯ ಆಡಳಿತ ಮಂಡಳಿಯಿಂದ ಭರವಸೆಯನ್ನು ಬಯಸುತ್ತಿದ್ದಾರೆ ಎಂದು ರಾಯಿಟರ್ಸ್ ಈ ಹಿಂದೆ ವರದಿ ಮಾಡಿದೆ.

ಭಾರತದ ಅತಿದೊಡ್ಡ ಸಾರ್ವಜನಿಕ ಲಿಸ್ಟಿಂಗ್​ಗಾಗಿ ವರ್ಚುವಲ್ ರೋಡ್‌ ಶೋಗಳಲ್ಲಿ ಎಲ್‌ಐಸಿ ನಿರ್ವಹಣೆ ಮತ್ತು ಐಪಿಒ ಬ್ಯಾಂಕರ್‌ಗಳು ವಿಮಾದಾರರ ಹಿಂದಿನ ಹೂಡಿಕೆಗಳು ಮತ್ತು ಅವುಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ, ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ ಎಂಬುದಾಗಿ ರಾಯಿಟರ್ಸ್ ವರದಿ ತಿಳಿಸಿದೆ. ಕಳೆದ ವಾರ ಪ್ರಾರಂಭವಾದ ಐಪಿಒ ರೋಡ್‌ಶೋಗಳಲ್ಲಿ ಹಿತಾಸಕ್ತಿಯ ಸಂಘರ್ಷದ ಸಂಭಾವ್ಯ ಸಮಸ್ಯೆಗಳು ಮುಖ್ಯತ್ವವನ್ನು ತೆಗೆದುಕೊಳ್ಳುತ್ತಿವೆ ಮತ್ತು ತಿಂಗಳ ಅಂತ್ಯದವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ: LIC Policy: ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮರುಜೀವ ನೀಡುವುದಕ್ಕೆ ಎಲ್​ಐಸಿಯಿಂದ ಮತ್ತೊಂದು ಅವಕಾಶ