Stock Market Investors Wealth: 5 ದಿನದಲ್ಲಿ ಷೇರು ಪೇಟೇಲಿ ಕರಗಿದ್ದು ಹೂಡಿಕೆದಾರರ 9.1 ಲಕ್ಷ ಕೋಟಿ ರೂ. ಸಂಪತ್ತು
ಫೆಬ್ರವರಿ 22ನೇ ತಾರೀಕಿನ ಮಂಗಳವಾರವೂ ಸೇರಿದಂತೆ ಸತತವಾಗಿ ಐದು ದಿನಗಳ ಕಾಲ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡುಬಂದಿದ್ದರಿಂದ ಹೂಡಿಕೆದಾರರ ಸಂಪತ್ತು 9.1 ಲಕ್ಷ ಕೋಟಿ ರೂಪಾಯಿ ಕರಗಿದೆ.
ಬಂಡುಕೋರರ ಪ್ರಾಬಲ್ಯದ ಉಕ್ರೇನ್‌ನ ಎರಡು ಪ್ರದೇಶಗಳನ್ನು ರಷ್ಯಾ ಗುರುತಿಸಿದ ನಂತರ ಬೆಂಚ್‌ಮಾರ್ಕ್ ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲಿ ಶೇಕಡಾ 2ಕ್ಕಿಂತ ಹೆಚ್ಚು ಕುಸಿತದೊಂದಿಗೆ ಭಾರತೀಯ ಷೇರು ಮಾರುಕಟ್ಟೆಗೆ ಇಂದು (ಫೆಬ್ರವರಿ 23, 2022) ಬೆಳಗ್ಗೆ “ಭಯಾನಕ ಮಂಗಳವಾರ”ವಾಗಿ ಮಾರ್ಪಟ್ಟಿತು. ಕಳೆದ ಹಲವು ದಿನಗಳಿಂದ ಕುದಿಯುತ್ತಿರುವ ಉಕ್ರೇನ್- ರಷ್ಯಾ ಬಿಕ್ಕಟ್ಟು ವಿಶ್ವದಾದ್ಯಂತ ಮಾರುಕಟ್ಟೆಗಳ ಹಿನ್ನಡೆಗೆ ಕಾರಣವಾಗಿದೆ. ಹೆಚ್ಚಿದ ಉದ್ವಿಗ್ನತೆ ಮತ್ತು ಸಂಭವನೀಯ ಯುದ್ಧದ ಸುದ್ದಿಯಿಂದ ಎದ್ದಿರುವ ಆತಂಕವು ಕೇವಲ ಐದು ದಿನಗಳ ಅವಧಿಯಲ್ಲಿ ಬಿಎಸ್ಇ-ಲಿಸ್ಟಿಂಗ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ರೂ. 9.1 ಲಕ್ಷ ಕೋಟಿ ಕರಗಿಸಿತು. ಫೆಬ್ರವರಿ 16ನೇ ತಾರೀಕು ಭಾರತೀಯ ಷೇರು ಮಾರುಕಟ್ಟೆ (Share Market) ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯವಾದ ಕೊನೆ ದಿನವಾಗಿತ್ತು. ಆದರೆ ಅಂದಿನಿಂದ ಕುಸಿತವು ನಿರಂತರವಾಗಿದೆ.
30 ಸ್ಟಾಕ್ಗಳ ಗುಚ್ಛವಾದ ಬಿಎಸ್ಇ- ಸೆನ್ಸೆಕ್ಸ್ ಮಂಗಳವಾರ 1,245 ಪಾಯಿಂಟ್‌ಗಳ ನಷ್ಟದೊಂದಿಗೆ 56,439 ಪಾಯಿಂಟ್ಸ್ನಲ್ಲಿ ಪ್ರಾರಂಭವಾಯಿತು. ಆದರೆ ನಿಫ್ಟಿ 359 ಪಾಯಿಂಟ್‌ಗಳ ಕುಸಿತದೊಂದಿಗೆ ನಿರ್ಣಾಯಕವಾದ 17,000 ಪಾಯಿಂಟ್ಸ್ ಮಟ್ಟಕ್ಕಿಂತ ಕೆಳಗೆ ಇಳಿದು, 16,848 ಪಾಯಿಂಟ್ಸ್ನಲ್ಲಿ ದಿನಾರಂಭ ಮಾಡಿತು. ಏಷ್ಯಾದ ಇತರ ಎಲ್ಲ ಸೂಚ್ಯಂಕಗಳು ಈ ದಿನದಲ್ಲಿ ಶೇಕಡಾ 1ಕ್ಕಿಂತ ಹೆಚ್ಚು ಕುಸಿದವು. ಎನ್‌ಎಸ್‌ಇಯಲ್ಲಿನ ಎಲ್ಲ ವಲಯದ ಸೂಚ್ಯಂಕಗಳು ಕುಸಿದಿದ್ದು, ಮಾಧ್ಯಮ ಮತ್ತು ಪಿಎಸ್‌ಯು ಬ್ಯಾಂಕ್‌ಗಳು ನಷ್ಟವನ್ನು ಕಂಡವು. ವಿಶಾಲ ಮಾರುಕಟ್ಟೆಗಳು ಸಹ ಶೇ 1.2ರಿಂದ ಶೇ 2.2 ರಷ್ಟು ನಷ್ಟವನ್ನು ಅನುಭವಿಸಿದವು. ಮುಂದಿನ 30 ದಿನಗಳಲ್ಲಿ ಟ್ರೇಡರ್ಗಳು ನಿರೀಕ್ಷಿಸುವ ಚಂಚಲತೆ ಮಟ್ಟವನ್ನು ಸೂಚಿಸುವ ಇಂಡಿಯಾ VIX, 22.9 ರಿಂದ 26.9 ಮಟ್ಟಕ್ಕೆ, ಅಂದರೆ ಶೇ 17.5ರಷ್ಟು ಗಮನಾರ್ಹವಾಗಿ ಜಿಗಿದಿದೆ.
“ಹೂಡಿಕೆಗೆ ಸುರಕ್ಷಿತ ಎನಿಸುವಂಥವು ರಾತ್ರೋರಾತ್ರಿ ಏರಿಕೆ ಕಂಡವು. ಯುಎಸ್ ಟ್ರೆಷರಿ ಯೀಲ್ಡ್ಸ್ ದೀರ್ಘಾವಧಿಯಲ್ಲಿ ಸುಮಾರು 7-8 ಬೇಸಿಸ್ ಪಾಯಿಂಟ್ಸ್ ಕುಸಿದಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಬೆಳವಣಿಗೆಗೆ ಅಪಾಯಗಳ ಹೊರತಾಗಿಯೂ ಅಮೆರಿಕದ ಕೇಂದ್ರ ಬ್ಯಾಂಕ್ ಫೆಡ್ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸುವ ಯೋಜನೆಗಳನ್ನು ಮರುಪರಿಶೀಲಿಸುವ ಅವಕಾಶವಿದೆ, ”ಎಂದು ಬ್ರೋಕರೇಜ್ ಸಂಸ್ಥೆ ಐಎಫ್ಎ ಗ್ಲೋಬಲ್ ಮಂಗಳವಾರ ತನ್ನ ಬೆಳಗಿನ ಟಿಪ್ಪಣಿಯಲ್ಲಿ ಹೇಳಿದೆ.
ಭಾರತಕ್ಕೆ ದೊಡ್ಡ ಸವಾಲು ಅಂದರೆ ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ. ಇದರ ಹಣದುಬ್ಬರದ ಪರಿಣಾಮವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿತ್ತೀಯ ನಿಲುವನ್ನು ಬಿಡಲು ಒತ್ತಡ ಸೃಷ್ಟಿ ಆಗಿದೆ. ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಸುಮಾರು ಶೇ 3.5ರಷ್ಟು ಏರಿಕೆಯಾಗಿ, 97 ಡಾಲರ್ಗೆ ತಲುಪಿದೆ. ಆದರೆ ಅಪಾಯದ ನಿವಾರಣೆ ಮಧ್ಯೆಯೂ ಚಿನ್ನವು 1,900 ಯುಎಸ್ಡಿ ಮಾರ್ಕ್ ಅನ್ನು ದಾಟಿದೆ. “ಆರ್ಥಿಕ ಪರಿಣಾಮಗಳು ಹೆಚ್ಚಿನ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳಲ್ಲಿ ಗೋಚರಿಸುತ್ತವೆ. ಈಗಿನಿಂದ ಉದ್ವಿಗ್ನತೆ ಉಲ್ಬಣಗೊಳ್ಳುತ್ತವೆಯೇ ಅಥವಾ ಒಳಗೊಂಡಿರುತ್ತವೆಯೇ ಎಂಬುದರ ಬಗ್ಗೆ ಅನಿಶ್ಚಿತತೆಯೊಂದಿಗೆ ಪರಿಸ್ಥಿತಿಯು ಡೋಲಾಯಮಾನವಾಗಿ ಉಳಿದಿದೆ,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
“ಈ ಇಳಿಕೆಯಲ್ಲಿ ಖರೀದಿ ಅವಕಾಶಗಳು ಹೊರಹೊಮ್ಮಬಹುದು. ಆದರೆ ಎಫ್‌ಐಐಗಳು ಮಾರಾಟವನ್ನು ಮುಂದುವರಿಸುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಖರೀದಿಸಲು ಆತುರ ಪಡಬಾರದು,” ಎಂದು ವಿಜಯಕುಮಾರ್ ಹೇಳುತ್ತಾರೆ. “ಇದು ಕೆಲವು ಉತ್ತಮ ಗುಣಮಟ್ಟದ ಹಣಕಾಸುಗಳ ಬೆಲೆಗಳನ್ನು ತಗ್ಗಿಸುವುದನ್ನು ಮುಂದುವರಿಸುತ್ತದೆ. ಈ ವಿಭಾಗದಲ್ಲಿ ನಿಧಾನವಾಗಿ ಪರಿಗಣಿಸಬಹುದು,” ಎನ್ನುತ್ತಾರೆ.
ಇದು ಮಾಸಿಕ ಫ್ಯೂಚರ್ ಅಂಡ್ ಆಪ್ಷನ್ ಮುಕ್ತಾಯ ವಾರವಾಗಿರುವುದರಿಂದ ಏರಿಳಿಕೆ ಜಾಸ್ತಿ ಉಂಟಾಗಬಹುದು ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆ, ರಾಜ್ಯ ಚುನಾವಣೆಗಳ ಫಲಿತಾಂಶಗಳು ಮತ್ತು ಅಮೆರಿಕದ ಫೆಡ್ ಸಭೆಯಂತಹ ಘಟನೆಗಳ ಕಾರಣದಿಂದಾಗಿ ಮಾರ್ಚ್ ಇನ್ನಷ್ಟು ಅಸ್ಥಿರ ಆಗಬಹುದು ಎಂದು ತಜ್ಞರು ಸೂಚಿಸುತ್ತಾರೆ. “ಒಟ್ಟಾರೆ ಟ್ರೆಂಡ್ ಬುಲಿಶ್ ಆಗಿದೆ. ಆದರೆ ಮುಂದಿನ ತಿಂಗಳಲ್ಲಿ ನಾವು ಹೆಚ್ಚಿನ ಏರಿಳಿತವನ್ನು ನಿರೀಕ್ಷೆ ಮಾಡಬಹುದು. ಆದ್ದರಿಂದ ಅಲ್ಪಾವಧಿಯಲ್ಲಿ ಟ್ರೇಡರ್ಗಳು ಮಾರಾಟಗಾರರಾಗಿ ಉಳಿಯಬೇಕು. ಆದರೆ ದೀರ್ಘಾವಧಿಯ ಹೂಡಿಕೆದಾರರು ಈ ಇಳಿಕೆಯನ್ನು ಖರೀದಿ ಅವಕಾಶವಾಗಿ ನೋಡಬೇಕು,” ಎಂದು ಟ್ರೇಡಿಂಗೋ ಸಂಸ್ಥಾಪಕ ಪಾರ್ಥ್ ನ್ಯಾತಿ ಹೇಳಿದ್ದಾರೆ.
ಎಚ್ಚರಿಕೆ: ಇಲ್ಲಿರುವ ಶಿಫಾರಸು, ಸಲಹೆಗಳು ಆಯಾ ಲೇಖಕರು, ಬ್ರೋಕರೇಜ್ ಸಂಸ್ಥೆಗಳಿಗೆ ಸಂಬಂಧಿಸಿದ್ದು. ಟಿವಿ9 ನೆಟ್ವರ್ಕ್ ಸಂಸ್ಥೆಯಾಗಲೀ ಲೇಖಕರಾಗಲೀ ಜವಾಬ್ದಾರಿ ಅಲ್ಲ.
ಇದನ್ನೂ ಓದಿ: Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು, ನಿಫ್ಟಿ 230ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ
Published On - 6:09 pm, Tue, 22 February 22