ನವದೆಹಲಿ, ಸೆಪ್ಟೆಂಬರ್ 12: ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (London Stock Exchange) ಭಾರತೀಯ ಕಂಪನಿಗಳ ಷೇರುಗಳು ನೇರವಾಗಿ ಲಿಸ್ಟ್ ಆಗುವ ಸಾಧ್ಯತೆಯನ್ನು ಅವಲೋಕಿಸಲು ಸರ್ಕಾರ ಸಮ್ಮತಿಸಿದೆ. ಜಿ20 ಸಭೆ ಬಳಿಕ ನಿನ್ನೆ ಭಾರತ ಮತ್ತು ಬ್ರಿಟನ್ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಜೆರೆಮಿ ಹಂಟ್ ಅವರು ಈ ಸಂಗತಿಯನ್ನು ಘೋಷಿಸಿದ್ದಾರೆ. ಸೆ. 11ರಂದು ಭಾರತ ಯುಕೆ ಆರ್ಥಿಕ ಮತ್ತು ಹಣಕಾಸು ಸಂವಾದ ಕಾರ್ಯಕ್ರಮದ ಬಳಿಕ ಇಬ್ಬರೂ ಕೂಡ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದ್ದಾರೆ.
ಗುಜರಾತ್ನ ಗಿಫ್ಟ್ ಸಿಟಿಯಲ್ಲಿ (GIFT City) ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದ (ಐಎಫ್ಎಸ್ಸಿ) ಸ್ಥಾಪನೆ ಆದ ಬಳಿಕ ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಭಾರತೀಯ ಕಂಪನಿಗಳಿಗೆ ಷೇರು ಲಿಸ್ಟ್ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; ನಿಫ್ಟಿ ದಾಖಲೆ ಓಟ ಮುಂದುವರಿಕೆ; ಸೆನ್ಸೆಕ್ಸ್ ಕೂಡ ಹೆಚ್ಚಳ
ಐಐಎಫ್ಸಿಯಲ್ಲಿ ನೊಂದಾಯಿತವಾಗಿರುವ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಲು ಕಂಪನಿಗಳಿಗೆ ಅನುಮತಿಸುವ ಯೋಜನೆಗಳನ್ನು ಸರ್ಕಾರ ಪ್ರಸ್ತಾಪಿಸಿತ್ತು. ಗುಜರಾತ್ನ ಅಹ್ಮದಾಬಾದ್ ಬಳಿ ನಿರ್ಮಾಣವಾಗುತ್ತಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿಯಲ್ಲಿ (ಗಿಫ್ಟ್ ಸಿಟಿ) ಐಐಎಫ್ಸಿ ಸ್ಥಾಪನೆಯಾಗುತ್ತಿದೆ. ಇದಾದ ಬಳಿಕ ನೊಂದಾಯಿತ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಭಾರತೀಯ ಷೇರುಗಳನ್ನು ಲಿಸ್ಟ್ ಮಾಡಬಹುದು.
ಸದ್ಯಕ್ಕೆ ಭಾರತೀಯ ಕಂಪನಿಗಳು ವಿದೇಶಗಳ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ನೇರವಾಗಿ ಷೇರು ಲಿಸ್ಟ್ ಮಾಡಲು ಆಗುವುದಿಲ್ಲ. ಡೆಪಾಸಿಟರಿ ರೆಸಿಪ್ಟ್ನಂತಹ ಸಾಧನಗಳ ಮೂಲಕ ವಿದೇಶಿ ಎಕ್ಸ್ಚೇಂಜ್ಗಳಲ್ಲಿ ಲಭ್ಯ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Tue, 12 September 23