ಷೇರುಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; ನಿಫ್ಟಿ ದಾಖಲೆ ಓಟ ಮುಂದುವರಿಕೆ; ಸೆನ್ಸೆಕ್ಸ್ ಕೂಡ ಹೆಚ್ಚಳ
Indian Stock Markets Rise: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ವಿವಿಧ ನಿಫ್ಟಿ ಸೂಚ್ಯಂಕಗಳ ಬೆಳವಣಿಗೆ ಮುಂದುವರಿದಿದೆ. ನಿಫ್ಟಿ50 ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ನಿನ್ನೆ 20,000 ಅಂಕಗಳ ಗಡಿ ಮುಟ್ಟಿದ್ದ ಅದು ಇಂದು 20,100 ಅಂಕಗಳ ಮಟ್ಟ ದಾಟಿದೆ. ಎನ್ಎಸ್ಇ ಇತಿಹಾಸದಲ್ಲೇ ನಿಫ್ಟಿ50 ಸೂಚ್ಯಂಕ ಏರಿದ ಗರಿಷ್ಠ ಮಟ್ಟ ಇದಾಗಿದೆ. ಎನ್ಎಸ್ಇ ಮಾತ್ರವಲ್ಲ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಬಹುತೇಕ ಸೂಚ್ಯಂಕಗಳು ವೃದ್ಧಿ ಕಂಡಿವೆ.
ಮುಂಬೈ, ಸೆಪ್ಟೆಂಬರ್ 12: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ (G20 Summit) ಅಮೋಘ ಯಶಸ್ಸು ಪಡೆದ ಬೆನ್ನಲ್ಲೇ ಇಲ್ಲಿನ ಷೇರು ಮಾರುಕಟ್ಟೆಗಳಲ್ಲಿ ಮಿಂಚಿನ ಸಂಚಾರ ಆಗುತ್ತಿದೆ. ನಿನ್ನೆ (ಸೆ. 11) ಮೊತ್ತಮೊದಲ ಬಾರಿಗೆ 20,000 ಅಂಕಗಳ ಮೈಲಿಗಲ್ಲು ಮುಟ್ಟಿದ್ದ ನಿಫ್ಟಿ50 ಸೂಚ್ಯಂಕ ಇದೀಗ ಆ ಓಟವನ್ನು ಮುಂದುವರಿಸಿ ಇಂದು 20,100 ಅಂಕಗಳನ್ನು ಮುಟ್ಟಿದೆ. ಇನ್ನು, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್30 ಸೂಚ್ಯಂಕ ಕೂಡ 350 ಅಂಕಗಳಷ್ಟು ವೃದ್ದಿ ಕಂಡು 67,435 ಮಟ್ಟ ಮುಟ್ಟಿದೆ.
ಸೆನ್ಸೆಕ್ಸ್ ವೃದ್ಧಿಗೆ ಪ್ರಮುಖವಾಗಿ ಕಾರಣವಾಗಿದ್ದು ಎಲ್ ಅಂಡ್ ಟಿ ಷೇರುಗಳು. ಹಾಗೆಯೇ, ಸೆನ್ಸೆಕ್ಸ್ನಲ್ಲಿ ಐಸಿಐಸಿಐ ಬ್ಯಾಂಕ್, ಜೆಎಸ್ಡಬ್ಲ್ಯು ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ ಕಂಪನಿಗಳ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ಆದರೆ, ಅದಾನಿ ಪೋರ್ಟ್ಸ್, ಅದಾನಿ ಎಂಟರ್ಪ್ರೈಸಸ್, ಎಂ ಅಂಡ್ ಎಂ, ನೆಸ್ಲೆ, ಹಿಂದೂಸ್ತಾನ್ ಯುನಿಲಿವರ್ ಲಿ ಷೇರುಗಳು ಹೂಡಿಕೆದಾರರಿಗೆ ನಷ್ಟ ತಂದಿವೆ.
ಅಮೆರಿಕನ್ ಡಾಲರ್ ಬಲ ಮತ್ತು ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚುತ್ತಿದ್ದರೂ ಭಾರತದ ಷೇರುಮಾರುಕಟ್ಟೆಯು ಹೂಡಿಕೆದಾರರನ್ನು ಸೆಳೆಯುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಅದರಲ್ಲೂ ನಿಫ್ಟಿ ಮಿಂಚಿನ ಓಟ ನಿಜಕ್ಕೂ ಅಚ್ಚರಿ ಮೂಡಿಸಿದೆ. ನಿಫ್ಟಿ50 ಸೂಚ್ಯಂಕ 20,150ರ ಗಡಿದಾಟುವುದು ಕಷ್ಟಸಾಧ್ಯ ಎಂದು ತಜ್ಞರು ಹೇಳುತ್ತಿರುವರಾದರೂ ಶೀಘ್ರದಲ್ಲೇ ಆ ಮೈಲಿಗಲ್ಲು ಮುಟ್ಟುವ ಸಾಧ್ಯತೆ ಇದೆ. ತಜ್ಞರ ಪ್ರಕಾರ ನಿಫ್ಟಿ50 ಸೂಚ್ಯಂಕಕ್ಕೆ ಪ್ರತಿರೋಧ ಮಟ್ಟ 20,100ರಿಂದ 20,150 ಅಂಕಗಳಾಗಿವೆ. ಇನ್ನು, ಬ್ಯಾಂಕ್ ನಿಫ್ಟಿ ಸೂಚ್ಯಂಕವು ಪ್ರತಿರೋಧ ಮಟ್ಟವಾದ 45,000 ಅಂಕಗಳ ಗಡಿ ದಾಟಿದೆ.
ಇದನ್ನೂ ಓದಿ: ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ; ಸೌದಿ ಅರೇಬಿಯಾ ಜೊತೆ ಕಾರ್ಯಾಚರಣೆಗಿಳಿದ ಭಾರತ; 8 ಒಪ್ಪಂದಗಳಿಗೆ ಸಹಿ
ಕುತೂಹಲ ಎಂದರೆ ಭಾರತ ಮತ್ತು ಜಪಾನ್ ಹೊರತುಪಡಿಸಿ ಏಷ್ಯಾದ ಎಲ್ಲಾ ಪ್ರಮುಖ ಷೇರುಪೇಟೆಗಳೂ ಹಿನ್ನಡೆ ಕಂಡಿವೆ. ಚೀನಾ ಕಂಪನಿಯ ಷೇರುಗಳಿಗೆ ಹಿನ್ನಡೆಯಾಗಿದೆ. ಹಾಂಕಾಂಗ್ನ ಹ್ಯಾಂಗ್ ಸೆಂಗ್ ಶೇ. 1ರಷ್ಟು ಕುಸಿತ ಕಂಡಿದೆ. ಸೌತ್ ಕೊರಿಯಾದ ಕೊಸ್ಪಿ ಕೂಡ ಹಿನ್ನಡೆ ಕಂಡಿದೆ. ಜಪಾನ್ನ ನಿಕ್ಕೀ ತುಸು ವೃದ್ದಿ ಕಂಡಿದೆ.
ಅಮೆರಿಕದಲ್ಲಿ ಷೇರುಪೇಟೆ ಸಕಾರಾತ್ಮಕವಾಗಿದೆ. ನಾಸ್ಡಾಕ್ ಸೂಚ್ಯಂಕ, ಎಸ್ ಅಂಡ್ ಪಿ 500, ಡೋ ಜೋನ್ಸ್ ಸೂಚ್ಯಂಕಗಳು ಹೆಚ್ಚಳ ಕಂಡಿವೆ.
ಭಾರತದ ಷೇರುಪೇಟೆ ವೃದ್ಧಿಗೆ ಏನು ಕಾರಣ?
ನಿರೀಕ್ಷೆಯಂತೆ ಜಿ20 ಶೃಂಗಸಭೆ ಸಕಾರಾತ್ಮಕವಾಗಿ ಮುಗಿದಿರುವುದರ ಪರಿಣಾಮ ಷೇರುಪೇಟೆಯ ಮೇಲೂ ಆಗಿದೆ. ಇದು ಪ್ರಮುಖ ಕಾರಣ. ಇನ್ನು, ಭಾರತದ ಬ್ಯಾಂಕುಗಳ ವ್ಯವಹಾರ ಸಕಾರಾತ್ಮಕ ಸ್ಥಿತಿಯಲ್ಲಿದೆ. ಸಾಲಗಳ ಪ್ರಮಾಣ ಹೆಚ್ಚಿದೆ. ಸರ್ಕಾರಿ ಬ್ಯಾಂಕುಗಳಲ್ಲಿ ಎನ್ಪಿಎ ಕಡಿಮೆ ಇದೆ. ಇವೆಲ್ಲವೂ ಹೂಡಿಕೆದಾರರನ್ನು ಆಕರ್ಷಿಸಲು ಕಾರಣವಾಗಿದೆ.
ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದು 4,100 ಕೋಟಿ ರೂ; ಬೇರೆ ದೇಶಗಳಲ್ಲಿ ನಡೆದ ಸಭೆಗಳಿಗೆ ವೆಚ್ಚವಾಗಿದ್ದು ಎಷ್ಟು?
ಇನ್ನೂ ಒಂದು ಪ್ರಮುಖ ಕಾರಣವೆಂದರೆ, ತರಕಾರಿ ಬೆಲೆಗಳು ಇಳಿಯುತ್ತಿದ್ದು ಅದರ ಪರಿಣಾಮವಾಗಿ ಹಣದುಬ್ಬರವೂ ಇಳಿಯುವ ನಿರೀಕ್ಷೆ ಇದೆ. ಇದು ಸಕಾರಾತ್ಮಕ ವಾತಾವರಣ ನಿರ್ಮಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ