ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ, ಈ ವರ್ಷದ ಕೊನೆಯವರೆಗೂ

|

Updated on: Aug 20, 2023 | 5:35 PM

Export Duty on Onion: ದೇಶದಲ್ಲಿ ಈರುಳ್ಳಿ ದಾಸ್ತಾನು ಕಡಿಮೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಈರುಳ್ಳಿ ಮೇಲೆ ರಫ್ತು ಸುಂಕು ವಿಧಿಸಿದೆ. ಇದು 2023ರ ಡಿಸೆಂಬರ್​​ವರೆಗೂ ಜಾರಿಯಲ್ಲಿರುತ್ತದೆ. ಸರ್ಕಾರ ಬಳಿ ಇರುವ ಈರುಳ್ಳಿ ಸಂಗ್ರಹವನ್ನು ಬೆಲೆ ನಿಯಂತ್ರಣಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ, ಈ ವರ್ಷದ ಕೊನೆಯವರೆಗೂ
ಈರುಳ್ಳಿ
Follow us on

ನವದೆಹಲಿ, ಆಗಸ್ಟ್ 20: ಟೊಮೆಟೋ ಬೆಲೆ ಏರಿಕೆಯಿಂದ ಕೈಸುಟ್ಟುಕೊಂಡಿರುವ ಕೇಂದ್ರ ಸರ್ಕಾರ ಇದೀಗ ಈರುಳ್ಳಿಯಿಂದ (Onion) ತೀರಾ ಕಣ್ಣೀರು ಬರದಂತೆ ಈಗಲೇ ಎಚ್ಚರವಹಿಸುತ್ತಿದೆ. ಈರುಳ್ಳಿ ಬೆಲೆ ಹೆಚ್ಚತೊಡಗಿರುವ ಹಿನ್ನೆಲೆಯಲ್ಲಿ ಈರುಳ್ಳಿಯ ರಫ್ತಿನ ಮೇಲೆ ಶೇ. 40ರಷ್ಟು ಸುಂಕ ವಿಧಿಸಿದೆ. ಈ ವರ್ಷದ ಕೊನೆಯವರೆಗೂ ಈರುಳ್ಳಿ ರಫ್ತು ಸುಂಕ (Export duty on onion) ಜಾರಿಯಲ್ಲಿರುತ್ತದೆ. ವರದಿಗಳ ಪ್ರಕಾರ ಟೊಮೆಟೋದಂತೆ ಈರುಳ್ಳಿ ಬೆಲೆ ಕೂಡ ತುಟ್ಟಿಯಾಗುವ ಸಾಧ್ಯತೆ ಇದೆ. ಪರಿಸ್ಥಿತಿ ತೀರಾ ಹತೋಟಿ ಮೀರದಂತಾಗಲು ಸರ್ಕಾರ ರಫ್ತು ಸುಂಕ ವಿಧಿಸಲು ನಿರ್ಧರಿಸಿತು ಎನ್ನಲಾಗಿದೆ.

ಈರುಳ್ಳಿ ಬೆಲೆ ಭಾರತದ ಕೆಲ ಪ್ರಮುಖ ಮಾರುಕಟ್ಟೆಗಳಲ್ಲಿ ಬಹಳಷ್ಟು ಹೆಚ್ಚಾಗಿದೆ. ಏಷ್ಯಾದ ಅತಿದೊಡ್ಡ ಈರುಳ್ಳಿ ಮಂಡಿ ಎನಿಸಿದ ಮಹಾರಾಷ್ಟ್ರದ ಪಿಂಪಲಗಾಂವ ಕೃಷಿ ಮಾರುಕಟ್ಟೆಯಲ್ಲಿ ಈರುಳ್ಳಿ ಎರಡು ಪಟ್ಟು ಬೆಲೆ ಪಡೆದು ಮಾರಾಟವಾಗುತ್ತಿದೆ.

ಈ ಬಾರಿ ಮುಂಗಾರು ವೈಪರೀತ್ಯದಿಂದಾಗಿ ಈರುಳ್ಳಿ ಆವಕ ಬಹಳ ಕಡಿಮೆ ಆಗಿದೆ. ಟೊಮೆಟೋದಂತೆ ಈರುಳ್ಳಿ ಕೂಡ ಬಹಳ ಬೇಡಿಕೆಯ ತರಕಾರಿಯಾದ್ದರಿಂದ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಖರೀದಿಗೆ ಮುಂದಾಗುತ್ತಿರುವುದರಿಂದ ಬೆಲೆ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಚೀನಾದ ಆರ್ಥಿಕತೆ ಮಾದರಿ ಮತ್ತೆ ಕೆಲಸ ಮಾಡಲು ಸಾಧ್ಯ ಇಲ್ಲ: ಹಿರಿಯ ಹೂಡಿಕೆದಾರನ ಅನಿಸಿಕೆ

ಸರ್ಕಾರಕ್ಕೆ ಹಣದುಬ್ಬರದ ತಲೆನೋವು

ಟೊಮೆಟೋ ಹಾಗು ಇತರ ತರಕಾರಿಗಳ ಬೆಲೆ ಏರಿಕೆಯ ಪರಿಣಾಮ ಜುಲೈ ತಿಂಗಳಲ್ಲಿ ಭಾರತದಲ್ಲಿ ಶೇ. 5ರೊಳಗೆ ಇದ್ದ ಹಣದುಬ್ಬರ ಶೇ.. 7.44ಕ್ಕೆ ಜಿಗಿದಿದೆ. ಕೇಂದ್ರ ಸರ್ಕಾರಕ್ಕೆ ಈಗ ಹಣದುಬ್ಬರದ್ದೇ ಚಿಂತೆಯಾಗಿದೆ. ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಸರ್ಕಾರಕ್ಕೆ ಈಗ ಈರುಳ್ಳಿ ಮೊದಲಾದ ತರಕಾರಿಗಳ ಬೆಲೆ ನಿಯಂತ್ರಣದ ವಿಚಾರ ಬಹಳ ಪ್ರಮುಖ ಎನಿಸಿದೆ.

ಟೊಮೆಟೋ ಬೆಲೆ ಈಗ ಕಡಿಮೆ ಆಗತೊಡಗಿದೆ. ಈರುಳ್ಳಿ ಬೆಲೆ ಏರತೊಡಗಿದೆ. ಯಾವತ್ತೂ ಇಳಿಕೆಯಾಗದ ಹಾಲಿನ ದರವೂ ಹಣದುಬ್ಬರ ನಿಯಂತ್ರಣ ಕಾರ್ಯದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇನ್ನು, ತರಕಾರಿ, ಬೇಳೆ, ಕಾಳುಗಳೂ ತುಟ್ಟಿಯಲ್ಲಿವೆ.

ಇದನ್ನೂ ಓದಿ: Family Business: ಮುಂದಿನ ಪೀಳಿಗೆ ನಾಯಕ ಸುದರ್ಶನ್ ವೇಣು, ಉದಯೋನ್ಮುಖ ಮಹಿಳಾ ಉದ್ಯಮಿ ರೋಷನಿ ನಾದರ್​ಗೆ ಪ್ರಶಸ್ತಿ

ಸರ್ಕಾರ ತನ್ನ ಬಳಿ ಇರುವ ಈರುಳ್ಳಿ ದಾಸ್ತಾನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಬೆಲೆ ಹೆಚ್ಚು ಇರವ ಪ್ರದೇಶಗಳಲ್ಲಿ ಈರುಳ್ಳಿಯನ್ನು ಸರ್ಕಾರ ಮಾರುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಲ್ಲಿ ಹೊಸ ಈರುಳ್ಳಿ ಬೆಳೆ ಬರುವವರೆಗೂ ಸರ್ಕಾರ ಇದೇ ವಿಧಾನದಲ್ಲಿ ಪರಿಸ್ಥಿತಿ ನಿಭಾಯಿಸುವ ಆಲೋಚನೆ ಹೊಂದಿದೆ. ಅದ್ಯದ ಅದರ ಬಳಿ 3 ಲಕ್ಷ ಟನ್​ಗಳಷ್ಟು ಈರುಳ್ಳಿ ದಾಸ್ತಾನು ಇರುವುದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ