
ನವದೆಹಲಿ, ಅಕ್ಟೋಬರ್ 28: ಕೇಂದ್ರ ಸರ್ಕಾರದ ಕೋಟಿಗೂ ಅಧಿಕ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಸಮಾಧಾನ ತರುವ ಸುದ್ದಿ ಇದು. ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರ ಸಂಪುಟವು ಇಂದು ಮಂಗಳವಾರ 8ನೇ ವೇತನ ಆಯೋಗಕ್ಕಾಗಿ ರಚಿಸಲಾಗಿರುವ ಟರ್ಮ್ಸ್ ಆಫ್ ರೆಫರೆನ್ಸ್ಗೆ (ToR- Terms of Reference) ಅನುಮೋದಿಸಿದೆ. ಎಂಟನೇ ವೇತನ ಆಯೋಗ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಈ ಟಿಒಆರ್ ಅಗತ್ಯವಾಗಿದೆ. ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಹಾಗೂ ಜಾಯಿಂಟ್ ಕನ್ಸಲ್ಟೇಶನ್ ಮೆಷಿನರಿಯ ಸಿಬ್ಬಂದಿಯೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಿ ಟರ್ಮ್ಸ್ ಆಫ್ ರೆಫರೆನ್ಸ್ ಅನ್ನು ರಚಿಸಲಾಗಿದೆ.
ಟರ್ಮ್ಸ್ ಆಫ್ ರೆಫರೆನ್ಸ್ ಎಂಬುದು ಮಾರ್ಗಸೂಚಿ ಇದ್ದಂತೆ. ವೇತನ ಆಯೋಗ ಹೇಗೆ ಕಾರ್ಯನಿರ್ವಹಿಸಬೇಕು, ಯಾವ ಅಂಶಗಳನ್ನು ಗಮನಿಸಬೇಕು, ಶಿಫಾರಸು ಮಾಡಬೇಕು, ವೇತನ ಶ್ರೇಣಿ, ಭತ್ಯೆ, ಪಿಂಚಣಿ ಪರಿಷ್ಕರಣೆ, ನಿವೃತ್ತಿ ಸೌಲಭ್ಯ ಇತ್ಯಾದಿ ಹಲವು ಸಂಗತಿಗಳ ಬಗ್ಗೆ ಎಷ್ಟು ವ್ಯಾಪ್ತಿಯಲ್ಲಿ ಅವಲೋಕನ ನಡೆಸಬೇಕು ಎಂಬುದನ್ನು ಟರ್ಮ್ಸ್ ಆಫ್ ರೆಫರೆನ್ಸ್ನಲ್ಲಿ ತಿಳಿಸಲಾಗಿರುತ್ತದೆ.
ಇದನ್ನೂ ಓದಿ: ಎಸ್ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್ಎಎಲ್ನಿಂದ ಒಪ್ಪಂದ
ಟರ್ಮ್ಸ್ ಆಫ್ ರೆಫರೆನ್ಸ್ ಒಂದು ರೀತಿಯಲ್ಲಿ ಮಾರ್ಗಸೂಚಿಯಂತಿರುತ್ತದೆ. ವೇತನ ಆಯೋಗಕ್ಕೆ ಇದು ಮೂಲ ದಾಖಲೆಯಾಗಿರುತ್ತದೆ. ಸರ್ಕಾರದ ನಿರೀಕ್ಷೆಗಳು ಮತ್ತು ಗುರಿಯನ್ನು ಇದು ಆಯೋಗಕ್ಕೆ ತಿಳಿಸುತ್ತದೆ. ಅದರ ಪ್ರಕಾರ ವೇತನ ಆಯೋಗ ಕಾರ್ಯನಿರ್ವಹಿಸುತ್ತದೆ. ಟರ್ಮ್ಸ್ ಆಫ್ ರೆಫರೆನ್ಸ್ ಇಲ್ಲದಿದ್ದರೆ ವೇತನ ಆಯೋಗ ಒಂದು ಸ್ಪಷ್ಟ ಉದ್ದೇಶ ಇಲ್ಲದೆ ಡಮ್ಮಿಯಾಗುತ್ತದೆ.
ಈಗ ಟರ್ಮ್ಸ್ ಆಫ್ ರೆಫರೆನ್ಸ್ ನಿಗದಿಯಾಗಿರುವುದರಿಂದ 8ನೇ ವೇತನ ಆಯೋಗ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇವತ್ತು ಟಿಒಆರ್ ಅನ್ನು ನೋಟಿಫೈ ಮಾಡಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 18 ತಿಂಗಳೊಳಗೆ ವೇತನ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. 2027ರ ಏಪ್ರಿಲ್ನೊಳಗೆ ಇದು ಆಗಬೇಕು.
ವರದಿ ಸಲ್ಲಿಸಿದ ಬಳಿಕ ಸರ್ಕಾರ ಅದನ್ನು ಪರಿಶೀಲಿಸಿ, ಶಿಫಾರಸುಗಳನ್ನು ಜಾರಿಗೆ ತರಲು 6 ತಿಂಗಳು ಬೇಕು. ಅಂದರೆ, 2027ರ ಅಂತ್ಯದಲ್ಲಿ ಅಥವಾ 2028ರ ಆರಂಭದಲ್ಲಿ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಬಹುದು. ತಡವಾಗಿ ಅದು ಜಾರಿಯಾದರೂ 2026ರ ಜನವರಿಯಿಂದಲೇ ಅದು ಅನ್ವಯ ಆಗುವಂತೆ ಜಾರಿಯಾಗುತ್ತದೆ.
ಇತ್ತೀಚೆಗೆ ಸರ್ಕಾರವು ಗ್ರಾಚುಟಿ ಮಿತಿಯನ್ನು 20 ಲಕ್ಷ ರೂನಿಂದ 25 ಲಕ್ಷ ರೂಗೆ ಏರಿಸಿತ್ತು. ಇದರಿಂದ ನಿವೃತ್ತಿಯಾಗುವ ಉದ್ಯೋಗಿಗಳಿಗೆ ಕೊನೆಯಲ್ಲಿ ಉತ್ತಮ ಮೊತ್ತ ಸಿಗಲು ಸಾಧ್ಯವಾಗುತ್ತದೆ. ಸೆಂಟ್ರಲ್ ಸಿವಿಲ್ ಸರ್ವಿಸಸ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಗ್ರಾಚುಟಿ ಮಿತಿ ಏರಿಕೆಯ ಲಾಭ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ