ಎಸ್ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್ಎಎಲ್ನಿಂದ ಒಪ್ಪಂದ
HAL signs MoU with UAC of Russia to manufacture SJ-100 passenger aircrafts: ರಷ್ಯಾದ ಯುಎಸಿ ನಿರ್ಮಿತ ಎಸ್ಜೆ-100 ವಿಮಾನವನ್ನು ಭಾರತದಲ್ಲಿ ತಯಾರಿಸಲು ಯೋಜನೆ ಹಾಕಲಾಗಿದೆ. ಈ ಸಂಬಂಧ ಯುಎಸಿ ಹಾಗೂ ಎಚ್ಎಎಲ್ ನಡುವೆ ಒಪ್ಪಂದ ಆಗಿದೆ. ಯುಎಸಿ ಸಹಯೋಗದಲ್ಲಿ ಎಚ್ಎಎಲ್ ಸಂಸ್ಥೆ ಎಸ್ಜೆ-100 ಪ್ಯಾಸೆಂಜರ್ ವಿಮಾನವನ್ನು ಭಾರತದಲ್ಲಿ ತಯಾರಿಸಲಿದೆ.

ನವದೆಹಲಿ, ಅಕ್ಟೋಬರ್ 28: ಭಾರತದ ಸ್ವಾವಲಂಬನೆಯ ಹಾದಿ ಮತ್ತಷ್ಟು ಸುಗಮಗೊಳ್ಳಲು ಸಹಕಾರಿಯಾಗುವಂತಹ ಬೆಳವಣಿಗೆ ಆಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ಹಾಗೂ ರಷ್ಯಾದ ಯುನೈಟೆಡ್ ಏರ್ಕ್ರಾಫ್ಟ್ ಕಾರ್ಪೊರೇಶನ್ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ (MoU) ಏರ್ಪಟ್ಟಿದೆ. ಇದರ ಪ್ರಕಾರ ಭಾರತದಲ್ಲಿ ಎಸ್ಜೆ-100 (SJ-100 passenger aircraft) ಎನ್ನುವ ಪ್ಯಾಸೆಂಜರ್ ವಿಮಾನವನ್ನು ತಯಾರಿಸಲಾಗುತ್ತದೆ. ಮಾಸ್ಕೋದಲ್ಲಿ ಅಕ್ಟೋಬರ್ 27ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಚ್ಎಎಲ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಭಾರತೀಯ ಕಂಪನಿಯೊಂದು 3-4 ದಶಕಗಳ ನಂತರ ಮೊದಲ ಬಾರಿಗೆ ಪರಿಪೂರ್ಣ ಪ್ರಯಾಣಿಕ ವಿಮಾನ ತಯಾರಿಕೆ ಮಾಡುವ ಅವಕಾಶ ಸಿಕ್ಕಂತಾಗಿದೆ. 1961ರಿಂದ 1988ರವರೆಗೂ ಯುನೈಟೆಡ್ ಕಿಂಗ್ಡಂನ ಆವ್ರೋ ಕಂಪನಿಯ ಎಚ್ಎಸ್748 ಎನ್ನುವ ವಿಮಾನವನ್ನು ಇದೇ ಎಚ್ಎಎಲ್ ಸಹಯೋಗದಲ್ಲಿ ಭಾರತದಲ್ಲಿ ತಯಾರಿಸಲಾಗಿತ್ತು. 1988ರಲ್ಲಿ ಈ ವಿಮಾನದ ಉತ್ಪಾದನೆ ನಿಂತುಹೋಗಿತ್ತು. ಈಗ ರಷ್ಯನ್ ಕಂಪನಿಯ ಸಹಯೋಗದಲ್ಲಿ ಇದೇ ಎಚ್ಎಎಲ್ ಮತ್ತೊಂದು ವಿಮಾನ ತಯಾರಿಕೆಗೆ ಕೈಹಾಕಿರುವುದು ಗಮನಾರ್ಹ.
ಇದನ್ನೂ ಓದಿ: ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ; ಕಡಿಮೆಗೊಳ್ಳುತ್ತಾ ಟ್ರಂಪ್ ತಾಪ?
ಯಾವುದಿದು ಎಸ್ಜೆ-100 ವಿಮಾನ?
ಎಸ್ಜೆ-100 ಅಥವಾ ಸುಖೋಯ್ ಸೂಪರ್ ಜೆಟ್-100 ವಿಮಾನದ ತಯಾರಿಕೆ ಕಳೆದ 20 ವರ್ಷಗಳಿಂದ ಆಗುತ್ತಿದೆ. ಸದ್ಯ 200ಕ್ಕೂ ಹೆಚ್ಚು ಈ ವಿಮಾನಗಳನ್ನು ತಯಾರಿಸಲಾಗಿದೆ. 16ಕ್ಕೂ ಅಧಿಕ ಏರ್ಲೈನ್ ಕಂಪನಿಗಳು ಈ ವಿಮಾನಗಳನ್ನು ಬಳಸುತ್ತಿವೆ.
ಈ ಎಸ್ಜೆ-100 ವಿಮಾನದಲ್ಲಿ ಸುಮಾರು 87ರಿಂದ 101 ಪ್ರಯಾಣಿಕರು ಕೂರಬಹುದು. ಈ ಲಘು ವಿಮಾನಗಳು ಭಾರತದ ಪ್ರಾದೇಶಿಕ ವೈಮಾನಿಕ ನೆಟ್ವರ್ಕ್ ವೃದ್ಧಿಸಲು ಸಹಕಾರಿಯಾಗಲಿವೆ. ಸರ್ಕಾರದ ಉಡಾನ್ ಸ್ಕೀಮ್ನಲ್ಲಿ ವಿವಿಧ ಪಟ್ಟಣಗಳ ಮಧ್ಯೆ ವಿಮಾನ ಸಂಪರ್ಕ ಸಾಧಿಸುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಇಂಥ ಸಣ್ಣ ವಿಮಾನಗಳಿಗೆ ಬೇಡಿಕೆ ಇದೆ. ಒಂದು ಅಂದಾಜು ಪ್ರಕಾರ ಮುಂದಿನ ಒಂದು ದಶಕದಲ್ಲಿ 200ಕ್ಕೂ ಅಧಿಕ ಸಣ್ಣ ವಿಮಾನಗಳು ಭಾರತದಲ್ಲಿ ಅಗತ್ಯ ಬೀಳಲಿವೆ.
ಈ ಕಾರಣಕ್ಕೆ ಎಚ್ಎಎಲ್ನಿಂದ ಎಸ್ಜೆ-100 ವಿಮಾನ ತಯಾರಿಕೆ ಆಗುತ್ತಿರುವುದು ಮಹತ್ವದ ಸಂಗತಿ. ಹಾಗೆಯೇ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸರ್ಕಾರದ ಕನಸು ಈಡೇರಲು ಇದು ಒಂದು ಪ್ರಮುಖ ಹೆಜ್ಜೆಯೂ ಹೌದು. ಭಾರತದ ವಿಮಾನಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯ ಎನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Tue, 28 October 25




