ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ; ಕಡಿಮೆಗೊಳ್ಳುತ್ತಾ ಟ್ರಂಪ್ ತಾಪ?
India increases crude oil imports from US: ವರ್ಷದ ಹಿಂದಿನದಕ್ಕೆ ಹೋಲಿಸಿದರೆ ಅಮೆರಿಕದಿಂದ ಭಾರತ ಖರೀದಿಸುವ ತೈಲದ ಪ್ರಮಾಣ ಬಹುತೇಕ ಎರಡು ಪಟ್ಟು ಹೆಚ್ಚಿದೆ. 2022ರ ನಂತರ ಅಮೆರಿಕದಿಂದ ಭಾರತ ಅತಿಹೆಚ್ಚು ಕಚ್ಛಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದಿಂದ ತೈಲ ಖರೀದಿ ಹೆಚ್ಚಿಸಿದ್ದರೂ ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ, ಅಥವಾ ಗಣನೀಯವಾಗಿ ಕಡಿಮೆಗೊಳಿಸಿಲ್ಲ.

ನವದೆಹಲಿ, ಅಕ್ಟೋಬರ್ 28: ಈ ತಿಂಗಳು ಭಾರತ ಅಮೆರಿಕದಿಂದ ತೈಲ ಆಮದು (Crude Oil) ಹೆಚ್ಚಿಸಿದೆ. ಕೆಪ್ಲರ್ ದತ್ತಾಂಶದ (KPler data) ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಅಮೆರಿಕದಿಂದ ಭಾರತ ದಿನಕ್ಕೆ 5,40,000 ಬ್ಯಾರಲ್ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೆರಿಕ ತೈಲವನ್ನು ಭಾರತ ಖರೀದಿಸುತ್ತಿರುವುದು 2022ರ ನಂತರ ಇದೇ ಮೊದಲು ಎನ್ನಲಾಗಿದೆ. ಭಾರತದ ಈ ನಡೆಯಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಾಪ ತಣ್ಣಗಾಗುವ ನಿರೀಕ್ಷೆ ಇದೆ.
ಅಮೆರಿಕದಿಂದ ತೈಲ ಆಮದು ಹೆಚ್ಚಿಸುವ ಒಂದು ಕ್ರಮದಿಂದ ಭಾರತ ಎರಡು ಗುರಿ ಸಾಧಿಸಲು ಸಾಧ್ಯವಾಗುತ್ತಿದೆ. ಮೊದಲನೆಯದು, ಭಾರತದ ಒಟ್ಟಾರೆ ತೈಲ ಆಮದಿನಲ್ಲಿ ರಷ್ಯಾದ ಪಾಲು ಅತಿಹೆಚ್ಚು ಇತ್ತು. ಇದನ್ನು ಕಡಿಮೆಗೊಳಿಸಿ, ಆಮದು ಮೂಲಗಳನ್ನು ವಿಸ್ತರಿಸಿದಂತಾಗಿದೆ. ಎರಡನೇ ಫಲ, ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನ ಗೊಳಿಸುವುದಾಗಿದೆ.
ಅಮೆರಿಕದ ತೈಲದ ಬೆಲೆ ಈಗ ತುಸು ಕಡಿಮೆ…
ರಷ್ಯಾದ ತೈಲವನ್ನು ಭಾರತ ಖರೀದಿಸಲು ಪ್ರಮುಖ ಕಾರಣಗಳಲ್ಲಿ ಅಗ್ಗದ ಬೆಲೆಯೂ ಒಂದು. ಇದೀಗ ಅಮೆರಿಕದ ಡಬ್ಲ್ಯುಟಿಐ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಗೊಂಡಿದೆ. ಹೀಗಾಗಿ, ಅಮೆರಿಕದ ತೈಲಕ್ಕೂ ಭಾರತ ಕೈಹಾಕುತ್ತಿದೆ.
ವರ್ಷದ ಹಿಂದೆ ಡಬ್ಲ್ಯುಟಿಐನಿಂದ ಭಾರತ ದಿನಕ್ಕೆ 3 ಲಕ್ಷ ಬ್ಯಾರಲ್ ತೈಲ ಪಡೆಯುತ್ತಿತ್ತು. ಇದೀಗ 4-5 ಲಕ್ಷ ಬ್ಯಾರಲ್ಗೆ ಏರಿದೆ. ಭಾರತದ ತೈಲ ಕಂಪನಿಗಳಿಗೂ ತಮ್ಮ ತೈಲಮೂಲಗಳನ್ನು ವಿಸ್ತರಿಸಲು ಅವಕಾಶ ಸಿಕ್ಕಿದೆ.
ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?
ರಷ್ಯಾ ತೈಲವನ್ನು ಭಾರತ ಕಡಿಮೆ ಮಾಡುತ್ತಿದೆಯಾ?
ಅಮೆರಿಕದ ತೈಲ ಖರೀದಿಯನ್ನು ಭಾರತ ಹೆಚ್ಚಿಸುತ್ತಿದೆಯಾದರೂ, ರಷ್ಯಾದಿಂದ ತೈಲ ಪಡೆಯುವುದನ್ನು ಕಡಿಮೆಗೊಳಿಸಿಲ್ಲ ಎನ್ನುವುದು ಗಮನಾರ್ಹ. ಭಾರತದ ಮೂರನೇ ಒಂದು ಭಾಗದ ತೈಲ ಆಮದು ರಷ್ಯಾದಿಂದ ಆಗುತ್ತಿದೆ. ಅದು ಮುಂದುವರಿಯಲಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ಟಾಪ್-3ಯಲ್ಲಿ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




