ಪಿಎಂ ಕಿಸಾನ್ ಹಣ ನವೆಂಬರ್ ಮೊದಲ ವಾರದಲ್ಲಿ? ಕೃಷಿ ಸಚಿವರು ಇತ್ತೀಚೆಗೆ ಹೊರಡಿಸಿದ ಸೂಚನೆ ಗಮನಿಸಿ…
PM Kisan scheme, 21st installment likely on November first week: ಪಿಎಂ ಕಿಸಾನ್ 21ನೇ ಕಂತಿನ ಹಣ ಅಕ್ಟೋಬರ್ ಕೊನೆಯ ವಾರದಲ್ಲಿ ಬರುವ ನಿರೀಕ್ಷೆ ಇತ್ತು. ಆದರೆ ನವೆಂಬರ್ ಮೊದಲ ವಾರದಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ. ಇಕೆವೈಸಿ ಪೂರ್ಣಗೊಂಡಿರುವ ರೈತರ ಪೂರ್ಣ ಪಟ್ಟಿಯನ್ನು ಬೇಗ ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಮನವಿ ಮಾಡಿದೆ.

ನವದೆಹಲಿ, ಅಕ್ಟೋಬರ್ 27: ಪಿಎಂ ಕಿಸಾನ್ ಯೋಜನೆ (PM Kisan scheme) ಅಡಿ 21ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ನಡೆದಿದೆ. ಈ ತಿಂಗಳೇ ಕಂತು ಬಿಡುಗಡೆ ಆಗುವ ಸಾಧ್ಯತೆ ಇತ್ತಾದರೂ, ಕೆಲ ವರದಿಗಳು ನವೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗಬಹುದು ಎಂದು ಹೇಳುತ್ತಿವೆ. ಆದರೆ ಸರ್ಕಾರದಿಂದ ಹಣ ಬಿಡುಗಡೆ ದಿನದ ಕುರಿತು ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಇದೇ ವೇಳೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಫಲಾನುಭವಿ ರೈತರ ಖಾತೆಗಳಿಗೆ 2,000 ರೂ ಅನ್ನು ಶೀಘ್ರವೇ ಜಮೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಹೇಳಿದ್ದಾರಾದರೂ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ.
ಕೃಷಿ ಸಚಿವರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿರುವ ಎಲ್ಲಾ ರೈತರ ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿ ಪೂರ್ಣಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರಗಳಿಂದ ರೈತರ ಪರಿಶೀಲಿತ ಪಟ್ಟಿ ಎಷ್ಟು ಬೇಗ ಕೇಂದ್ರವನ್ನು ತಲುಪುತ್ತದೋ ಅಷ್ಟು ಬೇಗ ಈ ಬಾರಿ ಕಿಸಾನ್ ಹಣ ರೈತರಿಗೆ ಸಿಗುತ್ತದೆ.
ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರಿ…
ಕೆಲ ರಾಜ್ಯಗಳಲ್ಲಿ ಬಿಡುಗಡೆ ಆಗಿದೆ 21ನೇ ಕಂತಿನ ಹಣ
ಪಂಜಾಬ್, ಹರ್ಯಾಣ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಸರ್ಕಾರ ಕಳೆದ ತಿಂಗಳೇ (ಸೆ. 26) ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಮಾಡಿತ್ತು. ಅಲ್ಲಿ ಪ್ರವಾಹ ಮತ್ತು ಭೂಕುಸಿತ ಘಟನೆಗಳು ಸಂಭವಿಸಿದ್ದರಿಂದ ಪರಿಹಾರವಾಗಿ ಮುಂಗಡವಾಗಿ ಪಿಎಂ ಕಿಸಾನ್ ಹಣವನ್ನು ರೈತರಿಗೆ ನೀಡಲಾಗಿದೆ. ಉಳಿದ ರಾಜ್ಯಗಳ ರೈತರಿಗೆ ನವೆಂಬರ್ನಲ್ಲಿ ಹಣ ಸಿಗಬಹುದು.
ಬಿಹಾರ ಚುನಾವಣೆ ವೇಳೆ ಹಣ ಬಿಡುಗಡೆಗೆ ಅವಕಾಶ ಇದೆಯಾ?
ನವೆಂಬರ್ ಮೊದಲ ವಾರದಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಆದರೆ, ಆಗ ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇರುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಣ ಬಿಡುಗಡೆ ಸಾಧ್ಯವಾ? ಇದಕ್ಕೆ ಉತ್ತರ, ಸಾಧ್ಯ.
ಇದನ್ನೂ ಓದಿ: ಪಿಎಫ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತಾ? ಇವು ತಿಳಿದಿರಿ
ಚುನಾವಣೆ ನೀತಿ ಸಂಹಿತೆ ಪ್ರಕಾರ ಸರ್ಕಾರವು ಹೊಸ ಯೋಜನೆ ಘೋಷಿಸುವಂತಿಲ್ಲ. ಈಗಾಗಲೇ ಜಾರಿಯಲ್ಲಿರುವ ಸ್ಕೀಮ್ನಲ್ಲಿ ಹಣ ಬಿಡುಗಡೆಗೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




