ನವದೆಹಲಿ, ಮಾರ್ಚ್ 7: ತಮಿಳುನಾಡಿನಲ್ಲಿರುವ ಲಿಗ್ನೈಟ್ ಉತ್ಪಾದನಾ ಸಂಸ್ಥೆಯಾದ ಎನ್ಎಲ್ಸಿ ಇಂಡಿಯಾದ (NLC India) ತನ್ನ ಕೆಲ ಷೇರುಪಾಲನ್ನು ಸರ್ಕಾರ ಮಾರಾಟಕ್ಕಿಟ್ಟಿದೆ. ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್ ಸಂಸ್ಥೆಯಲ್ಲಿನ ತನ್ನ ಶೇ. 7ರಷ್ಟು ಷೇರುಗಳನ್ನು ಸರ್ಕಾರ ಮಾರುತ್ತಿದೆ. ಸಾಂಸ್ಥಿಕ ಹೂಡಿಕೆದಾರರು ಮತ್ತು ರೀಟೇಲ್ ಹೂಡಿಕೆದಾರರಿಗೆ 9.7 ಕೋಟಿ ಷೇರುಗಳು ಮಾರಾಟವಾಗಲಿವೆ. ಕನಿಷ್ಠ ಬೆಲೆ ಅಥವಾ ಫ್ಲೋರ್ ಪ್ರೈಸ್ 212 ರೂನಂತೆ ಷೇರುಗಳು ಬಿಕರಿಯಾಗಲಿವೆ. ಈ ಮಾರಾಟದಿಂದ ಸರ್ಕಾರ ಸುಮಾರು 2,000 ಕೋಟಿ ರೂ ಆದಾಯ ಸಿಗುವ ನಿರೀಕ್ಷೆ ಇದೆ.
ಇಂದು ಗುರುವಾರ (ಮಾ. 7) ಸಾಂಸ್ಥಿಕ ಹೂಡಿಕೆದಾರರಿಗೆ ಎನ್ಎಲ್ಸಿ ಇಂಡಿಯಾದ ಷೇರುಗಳು ಮಾರಾಟಕ್ಕೆ ಲಭ್ಯ ಇರುತ್ತವೆ. ಶುಕ್ರವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಶನಿವಾರ ಮತ್ತು ಭಾನುವಾರ ಷೇರುಪೇಟೆಗೆ ವೀಕೆಂಡ್ ರಜೆಗಳಾಗಿವೆ. ಸೋಮವಾರ (ಮಾ. 11) ಎನ್ಎಲ್ಸಿ ಷೇರುಗಳನ್ನು ರೀಟೇಲ್ ಹೂಡಿಕೆದಾರರು ಖರೀದಿಸಬಹುದಾಗಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್‌ಗಳ ವಿತರಣೆ, ಬಳಕೆಗೆ RBIನಿಂದ ಹೊಸ ಮಾರ್ಗಸೂಚಿ, ಇದು ಯಾರಿಗೆಲ್ಲ ಅನ್ವಯ
ನೇಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್ ಸಂಸ್ಥೆ ಸರ್ಕಾರದ ಪಾಲು ಶೇ. 79.20ರಷ್ಟು ಇದೆ. ಈಗ ಶೇ. 7ರಷ್ಟು ಷೇರುಪಾಲನ್ನು ಬಿಕರಿ ಮಾಡಿದರೂ ಸರ್ಕಾರದ ಪಾಲು ಶೇ. 72ಕ್ಕಿಂತಲೂ ಹೆಚ್ಚೇ ಇರುತ್ತದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ನೇಯ್ವೇಲಿಯಲ್ಲಿ ಲಿಗ್ನೈಟ್ ಗಣಿಗಾರಿಕೆಗೆ 1956ರಲ್ಲಿ ಸ್ಥಾಪನೆಯಾದ ಕಂಪನಿ ಎನ್ಎಲ್ಸಿ ಇಂಡಿಯಾ. ಲಿಗ್ನೈಟ್ ಎಂಬುದು ಒಂದು ವಿಧದ ಕಲ್ಲಿದ್ದಲು. ನೇಯ್ವೇಲಿ ಮತ್ತು ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿ ಇದು ಲಿಗ್ನೈಟ್ ಗಣಿಗಾರಿಕೆ ನಡೆಸುತ್ತದೆ.
ಎನ್ಎಲ್ಸಿ ಇಂಡಿಯಾದ ಷೇರುಬೆಲೆ ನಿನ್ನೆ 226 ರೂಗೆ ಅಂತ್ಯವಾಗಿತ್ತು. ಸರ್ಕಾರ ಇದರ ಷೇರನ್ನು 212 ರೂಗೆ ಮಾರಲು ನಿರ್ಧರಿಸಿದ ಬಳಿಕ ಇಂದು ಶೇ. 6ರಷ್ಟು ಬೆಲೆ ಕುಸಿತವಾಗಿದೆ.
ಇದನ್ನೂ ಓದಿ: ಉದ್ಯೋಗದಾರರು ಇಪಿಎಫ್ ಖಾತೆಯ ವಿವರಗಳನ್ನು ತಿದ್ದುಪಡಿ ಮಾಡಬೇಕೆ? ಇಲ್ಲಿದೆ ಸುಲಭ ಮಾರ್ಗ
ಕಳೆದ ಒಂದು ವರ್ಷದಿಂದ ಎನ್ಎಲ್ಸಿ ಇಂಡಿಯಾ ಮಲ್ಟಿಬ್ಯಾಗರ್ ಷೇರು ಎನಿಸಿದೆ. 74 ರೂ ಇದ್ದ ಇದರ ಷೇರು ಬೆಲೆ 12 ತಿಂಗಳ ಅಂತರದಲ್ಲಿ 226 ರೂಗೆ ಏರಿದ್ದು ನಿಜಕ್ಕೂ ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ