ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್​ಗಳನ್ನು ಅನಾವರಣಗೊಳಿಸಿದ ಸರ್ಕಾರ

Integrated Logistics plan: ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಕೇಂದ್ರ ಸರ್ಕಾರ ಏಕೀಕೃತ ಲಾಜಿಸ್ಟಿಕ್ಸ್ ಪ್ಲಾನ್ ಅನ್ನು ಅನಾವರಣಗೊಳಿಸಿದೆ. ಸೆ. 19ರಂದು ಪೀಯೂಶ್ ಗೋಯಲ್ ಅವರು ಎಚ್​ಎಸ್​ಎನ್ ಕೋಡ್​ಗಳ ಕೈಪಿಡಿ ಸೇರಿದಂತೆ ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದರು. ವಿವಿಧ ಸಚಿವಾಲಯ ಮತ್ತು ಇಲಾಖೆಗಳೊಂದಿಗೆ ಉದ್ಯಮ ವಲಯ ಸಮನ್ವಯತೆ ಸಾಧಿಸಲು 12,000ಕ್ಕೂ ಅಧಿಕ ಎಚ್​ಎಸ್​ಎನ್ ಕೋಡ್​ಗಳಿವೆ.

ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್​ಗಳನ್ನು ಅನಾವರಣಗೊಳಿಸಿದ ಸರ್ಕಾರ
ಲಾಜಿಸ್ಟಿಕ್ಸ್

Updated on: Sep 23, 2025 | 2:47 PM

ನವದೆಹಲಿ, ಸೆಪ್ಟೆಂಬರ್ 23: ಭಾರತೀಯ ಉದ್ಯಮ ವಲಯದಲ್ಲಿ ಸಾಗಣೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಮೊನ್ನೆ ಏಕೀಕೃತ ಲಾಜಿಸ್ಟಿಕ್ಸ್ ಪ್ಲಾನ್​ಗಳನ್ನು (Integrated Logistics Plan) ಅನಾವರಣಗೊಳಿಸಿದರು. ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಈ ನಗರಗಳಲ್ಲಿ ಈಗಾಗಲೇ ಇರುವ ಲಾಜಿಸ್ಟಿಕ್ಸ್ ಸೌಕರ್ಯವನ್ನು ಪರಿಶೀಲಿಸುವುದು, ಲೋಪವಿದ್ದರೆ ಗುರುತಿಸುವುದು, ವ್ಯವಸ್ಥೆ ಬಲಪಡಿಸುವ ಮತ್ತು ವೆಚ್ಚ ಕಡಿಮೆ ಮಾಡುವ ಬಗೆಯನ್ನು ಶೋಧಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸದ್ಯ, ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಈ ಲಾಜಿಸ್ಟಿಕ್ಸ್ ಪ್ಲಾನ್​ಗಳನ್ನು ಜಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ಎಲ್ಲೆಡೆ ವಿಸ್ತರಿಸುವ ಗುರಿ ಇಡಲಾಗಿದೆ.

ಲಾಜಿಸ್ಟಿಕ್ಸ್ ವ್ಯವಸ್ಥೆ ಯಾಕೆ ಮುಖ್ಯ?

ಬ್ಯುಸಿನೆಸ್​ಗಳು ಸರಾಗವಾಗಿ ನಡೆಯಲು ಲಾಜಿಸ್ಟಿಕ್ಸ್ ಬಹಳ ಮುಖ್ಯ. ಇದು ಮುಖ್ಯವಾಗಿ ಸಾಗಣೆ ವ್ಯವಸ್ಥೆಯಾಗಿದೆ. ಕಾರ್ಖಾನೆಯಲ್ಲಿ ತಯಾರಾದ ಒಂದು ಉತ್ಪನ್ನವು ಬೇರೆ ಬೇರೆ ಪ್ರದೇಶಗಳನ್ನು ತಲುಪುವಂತೆ ಮಾಡುವುದೇ ಲಾಜಿಸ್ಟಿಕ್ಸ್ ವ್ಯವಸ್ಥೆ. ವಿದೇಶಗಳಿಗೆ ಕಳುಹಿಸುವುದಾದರೆ ಸರಕುಗಳನ್ನು ಟ್ರಕ್​ಗಳಲ್ಲೋ, ಅಥವಾ ಗೂಡ್ಸ್ ರೈಲುಗಳಲ್ಲೋ ತುಂಬಿ, ನಂತರ ಹಡಗುಗಳಿಗೆ ಹಾಕಿ, ಅಲ್ಲಿಂದ ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ. ಕೆಲ ಸರಕುಗಳು ವಿಮಾನಗಳಲ್ಲೂ ಸಾಗಣೆ ಆಗುವುದುಂಟು.

ಇದನ್ನೂ ಓದಿ: ಜಿಎಸ್​ಟಿ ಇಳಿಕೆ ದಿನವೇ ಕಾರುಗಳ ಬಂಪರ್ ಸೇಲ್; ಒಂದೇ ದಿನದಲ್ಲಿ ಮಾರುತಿಯ 30,000, ಹ್ಯೂಂಡಾಯ್​ನ 11,000 ಕಾರುಗಳ ಮಾರಾಟ

ಭಾರತದಲ್ಲಿ ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಇರುವ ಲೋಪಗಳಿಂದ ಸಾಕಷ್ಟು ಸೋರಿಕೆ ಆಗುತ್ತದೆ. ಹಿಂದೆ ಮಾಡಿದ ಅಂದಾಜು ಪ್ರಕಾರ ಲಾಜಿಸ್ಟಿಕ್ಸ್ ವೆಚ್ಚವೇ ಜಿಡಿಪಿಯ ಶೇ. 13-14ರಷ್ಟಾಗುತ್ತದೆ. ಇದೀಗ ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಎಣಿಸಲು ಹೊಸ ವೈಜ್ಞಾನಿಕ ವಿಧಾನವೊಂದನ್ನು ಅಳವಡಿಸಲಾಗಿದ್ದು, ಅದರ ಪ್ರಕಾರ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚ ಜಿಡಿಪಿಯ ಶೇ. 7.97ರಷ್ಟಾಗಬಹುದು.

ಎಚ್​ಎಸ್​ಎನ್ ಕೋಡ್​ಗಳ ಸಮಗ್ರ ಕೈಪಿಡಿ

ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಸೆ. 21ರಂದು ಎಚ್​ಎಸ್​ಎನ್ (ಹಾರ್ಮೋನೈಸ್ಡ್ ಸಿಸ್ಟಂ ಆಫ್ ನಾಮೆಂಕ್ಲೇಚರ್) ಕೋಡ್​ಗಳ ಸಮಗ್ರ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದರು. ಇದರಲ್ಲಿ 31 ಸಚಿವಾಲಯಗಳು ಹಾಗೂ ಇಲಾಖೆಗಳಾದ್ಯಂತ 12,167 ಕೋಡ್​ಗಳನ್ನು ಒಳಗೊಳ್ಳಲಾಗಿದೆ.

ಹೆಚ್​ಎಸ್​ಎನ್ ಕೋಡ್ ಎಂಬುದು ಸರಕುಗಳನ್ನು ತೆರಿಗೆ, ಸುಂಕ ಇತ್ಯಾದಿ ನಿರ್ದಿಷ್ಟ ಉದ್ದೇಶಗಳಿಗೆ ವರ್ಗೀಕರಿಸಲು ಬಳಸಲಾಗುತ್ತದೆ. ಅಂತಾರಾಷ್ಟ್ರೀಯವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆ ಇದು. ಈ ಕೋಡ್​ಗಳಿಂದ ಉದ್ಯಮಗಳಿಗೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಅಕೌಂಟ್​ನಲ್ಲಿ ಹೆಚ್ಚುವರಿ ಹಣಕ್ಕೆ ಶೇ. 6.5 ಬಡ್ಡಿ; ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್​ನ ಆಫರ್

ಲಾಜಿಸ್ಟಿಕ್ಸ್ ಡಾಟಾ ಬ್ಯಾಂಕ್ 2.0

ಪೀಯೂಶ್ ಗೋಯಲ್ ಇದೇ ವೇಳೆ ಲಾಜಿಸ್ಟಿಕ್ಸ್ ಡಾಟಾ ಬ್ಯಾಂಕ್​ನ ಪರಿಷ್ಕೃತ ಆವೃತ್ತಿಯನ್ನು ಅನಾವರಣಗೊಳಿಸಿದರು. ಸರಕುಗಳನ್ನು ಸಾಗಿಸಲಾಗುತ್ತಿರುವ ಹಡಗುಗಳನ್ನು ರಿಯಲ್ ಟೈಮ್​ನಲ್ಲಿ ಟ್ರ್ಯಾಕ್ ಮಾಡಲು ಇದು ನೆರವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ