ಚ್ಯಾಟ್ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?
Infosys missed AI opportunity: 2018ರಲ್ಲಿ ಓಪನ್ಎಐನಲ್ಲಿ ಹೂಡಿಕೆ ಮಾಡಲು ಕನ್ಸಾರ್ಟಿಯಂನಲ್ಲಿ ಇನ್ಫೋಸಿಸ್ ಅನ್ನೂ ಭಾಗವಾಗಿಸಲು ಪ್ರಯತ್ನವಾಗಿತ್ತು. ಅಂದಿನ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಬಹಳ ಆಸಕ್ತರಾಗಿದ್ದರು. ಆದರೆ, ಕಂಪನಿಯ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಇದಕ್ಕೆ ಸಹಮತ ಹೊಂದಿರಲಿಲ್ಲ. ಹೀಗಾಗಿ, ಇನ್ಫೋಸಿಸ್ ಓಪನ್ಎಐ ಪ್ರಾಜೆಕ್ಟ್ನಿಂದ ಹೊರಬರುವಂತಾಯಿತು ಎಂದು ಸಿಎವೊಬ್ಬರು ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 23: ಚ್ಯಾಟ್ಜಿಪಿಟಿ (ChatGPT), ಡೀಪ್ಸೀಕ್ ಇತ್ಯಾದಿ ಎಲ್ಎಲ್ಎಂ ಮಾಡಲ್ಗಳು ಜಾಗತಿಕವಾಗಿ ಧೂಳೆಬ್ಬಿಸುತ್ತಿವೆ. ಚ್ಯಾಟ್ಜಿಪಿಟಿ ಬಳಸುವವರು ಭಾರತದಲ್ಲೇ ಅತಿಹೆಚ್ಚು. ಚ್ಯಾಟ್ಜಿಪಿಟಿ ಸೃಷ್ಟಿಸಿದ ಓಪನ್ಎಐನ ಸಿಇಒ ಸ್ಯಾಮ್ ಆಲ್ಟ್ಮ್ಯಾನ್, ಭಾರತದಲ್ಲಿ ಫೌಂಡೇಶನಲ್ ಎಐ ಮಾಡಲ್ ಅನ್ನು ನಿರ್ಮಿಸಲು ಆಗಲ್ಲ ಎಂದು ಇತ್ತೀಚೆಗೆ ಹೇಳಿ ಕಿಚ್ಚೆಬ್ಬಿಸಿದ್ದರು. ಚ್ಯಾಟ್ಜಿಪಿಟಿ ಮಟ್ಟದ ಎಐ ಮಾಡಲ್ಗಳನ್ನು ನಿರ್ಮಿಸಲು ಸರ್ಕಾರವೂ ಶತಪ್ರಯತ್ನ ಮಾಡುತ್ತಿದೆ. ಇದೇ ವೇಳೆ, ಮೀನಲ್ ಗೋಯಲ್ (Meenal Goyal) ಎನ್ನುವ ಚಾರ್ಟರ್ಟ್ ಅಕೌಂಟೆಂಟ್ವೊಬ್ಬರು ಕುತೂಹಲ ಮೂಡಿಸುವ ಒಂದು ಪೋಸ್ಟ್ ಹಾಕಿದ್ದಾರೆ. ಅವರ ಪ್ರಕಾರ, ಚ್ಯಾಟ್ಜಿಪಿಟಿ ಭಾರತದ್ದೇ ಆಗಿ ಹೋಗುವ ಅವಕಾಶವೊಂದು ಕೈತಪ್ಪಿತ್ತಂತೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಮನಸ್ಸು ಮಾಡಿದ್ದರೆ ಓಪನ್ಎಐನಲ್ಲಿ ಭಾಗಿಯಾಗಿರುವ ಕಂಪನಿಗಳಲ್ಲಿ ಇನ್ಫೋಸಿಸ್ ಕೂಡ ಇರುವಂತಾಗುತ್ತಿತ್ತು.
ಇದನ್ನೂ ಓದಿ: ಸಣ್ಣ ಉದ್ದಿಮೆಗಳು ಜಿಎಸ್ಟಿಗೆ ನೊಂದಾಯಿಸುವುದು ಕಡ್ಡಾಯವಾ? ನಿಯಮವೇನಿದೆ? ಯಾರಿಗೆ ಕಡ್ಡಾಯ?
2018ರಲ್ಲಿ ಇನ್ಫೋಸಿಸ್ನ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿದ್ದರು. ಆಗಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಮಹತ್ವ ಅರಿತಿದ್ದ ವಿಶಾಲ್ ಅವರು ಇನ್ಫೋಸಿಸ್ ಅನ್ನು ಎಐ ಆದ್ಯತಾ ಕಂಪನಿಯಾಗಿ ರೂಪಿಸಲು ಹೊರಟಿದ್ದರು. ಓಪನ್ಎಐನ ಪ್ರಾಜೆಕ್ಟ್ಗಳಲ್ಲಿ ಪಾಲ್ಗೊಳ್ಳಲು ಅಮೇಜಾನ್, ಇಲಾನ್ ಮಸ್ಕ್, ಸ್ಯಾಮ್ ಆಲ್ಟ್ಮ್ಯಾನ್ ಮೊದಲಾದವರು ಇದ್ದ ಕನ್ಸಾರ್ಟಿಯಂನ ಭಾಗವಾಗಿ ಇನ್ಫೋಸಿಸ್ ಅನ್ನು ಸೇರಿಸಲು ವಿಶಾಲ್ ಸಿಕ್ಕ ಬಯಸಿದ್ದರು.
ಇನ್ಫೋಸಿಸ್ ಒಂದೊಮ್ಮೆ ಓಪನ್ಎಐನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಆದರೆ ನಾರಾಯಣಮೂರ್ತಿ ಅವರಿಗೆ ಆಗ ಇದು ಸರಿ ಕಾಣಲಿಲ್ಲ. ತಮ್ಮ ಸಾಂಪ್ರದಾಯಿಕ ಐಟಿ ಸರ್ವಿಸ್ ಬ್ಯುಸಿನೆಸ್ನಲ್ಲೇ ಮುಂದುವರಿಯಬೇಕೆಂಬುದು ಮೂರ್ತಿ ನಿಲುವಾಗಿತ್ತು. ಹೀಗಾಗಿ, ಓಪನ್ಎಐನಲ್ಲಿ ಮಾಡಿದ್ದ ಹೂಡಿಕೆಯನ್ನು ಇನ್ಫೋಸಿಸ್ ಹಿಂಪಡೆದುಕೊಂಡಿತು.
ಮೀನಲ್ ಗೋಯಲ್ ಆ ಘಟನೆಯನ್ನು ಸ್ಮರಿಸುತ್ತಾ, ಇನ್ಫೋಸಿಸ್ ಅವತ್ತು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರೆ, ಇವತ್ತು ಅದರ ಮೌಲ್ಯ 45 ಬಿಲಿಯನ್ ಡಾಲರ್ ಆಗಿರುತ್ತಿತ್ತು ಎಂದು ಹೇಳಿದ್ದಾರೆ.
ವಿಶಾಲ್ ಸಿಕ್ಕ ಅವರು ಆಗಲೇ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




