ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್ಗಳನ್ನು ಅನಾವರಣಗೊಳಿಸಿದ ಸರ್ಕಾರ
Integrated Logistics plan: ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಕೇಂದ್ರ ಸರ್ಕಾರ ಏಕೀಕೃತ ಲಾಜಿಸ್ಟಿಕ್ಸ್ ಪ್ಲಾನ್ ಅನ್ನು ಅನಾವರಣಗೊಳಿಸಿದೆ. ಸೆ. 19ರಂದು ಪೀಯೂಶ್ ಗೋಯಲ್ ಅವರು ಎಚ್ಎಸ್ಎನ್ ಕೋಡ್ಗಳ ಕೈಪಿಡಿ ಸೇರಿದಂತೆ ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದರು. ವಿವಿಧ ಸಚಿವಾಲಯ ಮತ್ತು ಇಲಾಖೆಗಳೊಂದಿಗೆ ಉದ್ಯಮ ವಲಯ ಸಮನ್ವಯತೆ ಸಾಧಿಸಲು 12,000ಕ್ಕೂ ಅಧಿಕ ಎಚ್ಎಸ್ಎನ್ ಕೋಡ್ಗಳಿವೆ.

ನವದೆಹಲಿ, ಸೆಪ್ಟೆಂಬರ್ 23: ಭಾರತೀಯ ಉದ್ಯಮ ವಲಯದಲ್ಲಿ ಸಾಗಣೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಮೊನ್ನೆ ಏಕೀಕೃತ ಲಾಜಿಸ್ಟಿಕ್ಸ್ ಪ್ಲಾನ್ಗಳನ್ನು (Integrated Logistics Plan) ಅನಾವರಣಗೊಳಿಸಿದರು. ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ. ಈ ನಗರಗಳಲ್ಲಿ ಈಗಾಗಲೇ ಇರುವ ಲಾಜಿಸ್ಟಿಕ್ಸ್ ಸೌಕರ್ಯವನ್ನು ಪರಿಶೀಲಿಸುವುದು, ಲೋಪವಿದ್ದರೆ ಗುರುತಿಸುವುದು, ವ್ಯವಸ್ಥೆ ಬಲಪಡಿಸುವ ಮತ್ತು ವೆಚ್ಚ ಕಡಿಮೆ ಮಾಡುವ ಬಗೆಯನ್ನು ಶೋಧಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸದ್ಯ, ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಈ ಲಾಜಿಸ್ಟಿಕ್ಸ್ ಪ್ಲಾನ್ಗಳನ್ನು ಜಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ಎಲ್ಲೆಡೆ ವಿಸ್ತರಿಸುವ ಗುರಿ ಇಡಲಾಗಿದೆ.
ಲಾಜಿಸ್ಟಿಕ್ಸ್ ವ್ಯವಸ್ಥೆ ಯಾಕೆ ಮುಖ್ಯ?
ಬ್ಯುಸಿನೆಸ್ಗಳು ಸರಾಗವಾಗಿ ನಡೆಯಲು ಲಾಜಿಸ್ಟಿಕ್ಸ್ ಬಹಳ ಮುಖ್ಯ. ಇದು ಮುಖ್ಯವಾಗಿ ಸಾಗಣೆ ವ್ಯವಸ್ಥೆಯಾಗಿದೆ. ಕಾರ್ಖಾನೆಯಲ್ಲಿ ತಯಾರಾದ ಒಂದು ಉತ್ಪನ್ನವು ಬೇರೆ ಬೇರೆ ಪ್ರದೇಶಗಳನ್ನು ತಲುಪುವಂತೆ ಮಾಡುವುದೇ ಲಾಜಿಸ್ಟಿಕ್ಸ್ ವ್ಯವಸ್ಥೆ. ವಿದೇಶಗಳಿಗೆ ಕಳುಹಿಸುವುದಾದರೆ ಸರಕುಗಳನ್ನು ಟ್ರಕ್ಗಳಲ್ಲೋ, ಅಥವಾ ಗೂಡ್ಸ್ ರೈಲುಗಳಲ್ಲೋ ತುಂಬಿ, ನಂತರ ಹಡಗುಗಳಿಗೆ ಹಾಕಿ, ಅಲ್ಲಿಂದ ಇನ್ನೊಂದು ದೇಶಕ್ಕೆ ಕಳುಹಿಸಲಾಗುತ್ತದೆ. ಕೆಲ ಸರಕುಗಳು ವಿಮಾನಗಳಲ್ಲೂ ಸಾಗಣೆ ಆಗುವುದುಂಟು.
ಇದನ್ನೂ ಓದಿ: ಜಿಎಸ್ಟಿ ಇಳಿಕೆ ದಿನವೇ ಕಾರುಗಳ ಬಂಪರ್ ಸೇಲ್; ಒಂದೇ ದಿನದಲ್ಲಿ ಮಾರುತಿಯ 30,000, ಹ್ಯೂಂಡಾಯ್ನ 11,000 ಕಾರುಗಳ ಮಾರಾಟ
ಭಾರತದಲ್ಲಿ ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಇರುವ ಲೋಪಗಳಿಂದ ಸಾಕಷ್ಟು ಸೋರಿಕೆ ಆಗುತ್ತದೆ. ಹಿಂದೆ ಮಾಡಿದ ಅಂದಾಜು ಪ್ರಕಾರ ಲಾಜಿಸ್ಟಿಕ್ಸ್ ವೆಚ್ಚವೇ ಜಿಡಿಪಿಯ ಶೇ. 13-14ರಷ್ಟಾಗುತ್ತದೆ. ಇದೀಗ ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಎಣಿಸಲು ಹೊಸ ವೈಜ್ಞಾನಿಕ ವಿಧಾನವೊಂದನ್ನು ಅಳವಡಿಸಲಾಗಿದ್ದು, ಅದರ ಪ್ರಕಾರ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚ ಜಿಡಿಪಿಯ ಶೇ. 7.97ರಷ್ಟಾಗಬಹುದು.
ಎಚ್ಎಸ್ಎನ್ ಕೋಡ್ಗಳ ಸಮಗ್ರ ಕೈಪಿಡಿ
ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಸೆ. 21ರಂದು ಎಚ್ಎಸ್ಎನ್ (ಹಾರ್ಮೋನೈಸ್ಡ್ ಸಿಸ್ಟಂ ಆಫ್ ನಾಮೆಂಕ್ಲೇಚರ್) ಕೋಡ್ಗಳ ಸಮಗ್ರ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದರು. ಇದರಲ್ಲಿ 31 ಸಚಿವಾಲಯಗಳು ಹಾಗೂ ಇಲಾಖೆಗಳಾದ್ಯಂತ 12,167 ಕೋಡ್ಗಳನ್ನು ಒಳಗೊಳ್ಳಲಾಗಿದೆ.
ಹೆಚ್ಎಸ್ಎನ್ ಕೋಡ್ ಎಂಬುದು ಸರಕುಗಳನ್ನು ತೆರಿಗೆ, ಸುಂಕ ಇತ್ಯಾದಿ ನಿರ್ದಿಷ್ಟ ಉದ್ದೇಶಗಳಿಗೆ ವರ್ಗೀಕರಿಸಲು ಬಳಸಲಾಗುತ್ತದೆ. ಅಂತಾರಾಷ್ಟ್ರೀಯವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆ ಇದು. ಈ ಕೋಡ್ಗಳಿಂದ ಉದ್ಯಮಗಳಿಗೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಅಕೌಂಟ್ನಲ್ಲಿ ಹೆಚ್ಚುವರಿ ಹಣಕ್ಕೆ ಶೇ. 6.5 ಬಡ್ಡಿ; ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್ನ ಆಫರ್
ಲಾಜಿಸ್ಟಿಕ್ಸ್ ಡಾಟಾ ಬ್ಯಾಂಕ್ 2.0
ಪೀಯೂಶ್ ಗೋಯಲ್ ಇದೇ ವೇಳೆ ಲಾಜಿಸ್ಟಿಕ್ಸ್ ಡಾಟಾ ಬ್ಯಾಂಕ್ನ ಪರಿಷ್ಕೃತ ಆವೃತ್ತಿಯನ್ನು ಅನಾವರಣಗೊಳಿಸಿದರು. ಸರಕುಗಳನ್ನು ಸಾಗಿಸಲಾಗುತ್ತಿರುವ ಹಡಗುಗಳನ್ನು ರಿಯಲ್ ಟೈಮ್ನಲ್ಲಿ ಟ್ರ್ಯಾಕ್ ಮಾಡಲು ಇದು ನೆರವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




