ಮೈಕ್ರೋಸಾಫ್ಟ್, ಗೂಗಲ್ಗೆ ಸ್ಪರ್ಧೆಯೊಡ್ಡುವ ಭಾರತೀಯ ಸಂಸ್ಥೆ ಝೋಹೋ ಈಗ ಟ್ರೆಂಡಿಂಗ್ನಲ್ಲಿ; ಹಳ್ಳಿಯಲ್ಲಿರುವ ಈ ಕಂಪನಿಯ ವಿಶೇಷತೆಗಳೇನು?
What is Zoho and their products: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನಿನ್ನೆ ಝೋಹೋ ಪ್ಲಾಟ್ಫಾರ್ಮ್ ಬಳಸಲಿರುವುದಾಗಿ ಹೇಳಿದ್ದರು. ತಮಿಳುನಾಡಿನಲ್ಲಿ ಮುಖ್ಯ ಕಚೇರಿ ಇರುವ ಝೋಹೋ, ಬ್ಯುಸಿನೆಸ್ ಸಂಸ್ಥೆಗಳಿಗೆ ಬೇಕಾದ ವಿವಿಧ ಪರಿಕರಗಳನ್ನು ನಿರ್ಮಿಸುತ್ತದೆ. 150ಕ್ಕೂ ಹೆಚ್ಚು ದೇಶಗಳಲ್ಲಿ ಇದರ ಗ್ರಾಹಕರಿಗಿದ್ದು, 50ಕ್ಕೂ ಅಧಿಕ ಉತ್ಪನ್ನಗಳನ್ನು ಇದು ಹೊಂದಿದೆ.

ನವದೆಹಲಿ, ಸೆಪ್ಟೆಂಬರ್ 23: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಾವು ಝೋಹೋ ಪ್ಲಾಟ್ಫಾರ್ಮ್ (Zoho corporation) ಬಳಸಲಿದ್ದೇನೆ ಎಂದು ನಿನ್ನೆ ಎಕ್ಸ್ ಪೋಸ್ಟ್ವೊಂದರಲ್ಲಿ ಹೇಳಿ ಕುತೂಹಲ ಮೂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶೀ ವಸ್ತು ಮತ್ತು ಸೇವೆಗಳನ್ನು ಬಳಸುವಂತೆ ಹೇಳಿದ್ದರು. ಅವರ ಮಾತಿನಂತೆ ದೇಶೀಯವಾದ ಝೋಹೋದ ಸೇವೆಗಳನ್ನು ಬಳಸುತ್ತಿದ್ದೇನೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಪೋಸ್ಟ್ಗೆ ಝೋಹೋ ಸಿಇಒ ಶ್ರೀಧರ್ ವೆಂಬು ಪ್ರತಿಕ್ರಿಯಿಸಿದ್ದು, ಎರಡು ದಶಕಗಳಿಗೂ ಅಧಿಕ ಕಾಲ ಪ್ರಾಡಕ್ಟ್ ಸ್ಯೂಟ್ ನಿರ್ಮಿಸಲು ಶ್ರಮಿಸಿದ ತಮ್ಮ ಎಂಜಿನಿಯರುಗಳಿಗೆ ಇದು ಉತ್ತೇಜನ ಕೊಟ್ಟಂತಾಗಿದೆ ಎಂದು ಹೇಳಿದ್ದಾರೆ.
ಯಾವುದಿದು ಝೋಹೋ ಸಂಸ್ಥೆ?
ತಮಿಳುನಾಡಿನ ಶ್ರೀಧರ್ ವೆಂಬು ಹಾಗೂ ಅಮೆರಿಕ ಮೂಲದ ಟೋನಿ ಥಾಮಸ್ ಅವರಿಬ್ಬರು 1996ರಲ್ಲಿ ಝೋಹೋ ಕಾರ್ಪೊರೇಶನ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಬಹಳ ಕಡಿಮೆ ಬೆಲೆಗೆ ವಿವಿಧ ಸಾಫ್ಟ್ವೇರ್ ಪರಿಕರಗಳನ್ನು ಇದು ನಿರ್ಮಿಸುತ್ತದೆ. ಬ್ಯುಸಿನೆಸ್ ಸಂಸ್ಥೆಗಳಿಗೆ ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜ್ಮೆಂಟ್ (ಸಿಆರ್ಎಂ) ಸಾಫ್ಟ್ವೇರ್, ಅಕೌಂಟಿಂಗ್ ಇತ್ಯಾದಿ ನಾನಾ ಅಪ್ಲಿಕೇಶನ್ಗಳನ್ನು ಝೋಹೋ ನಿರ್ಮಿಸಿದೆ. ಮೈಕ್ರೋಸಾಫ್ಟ್, ಗೂಗಲ್, ಸೇಲ್ಸ್ಫೋರ್ಸ್ ಇತ್ಯಾದಿ ದೊಡ್ಡ ದೊಡ್ಡ ಕಂಪನಿಗಳ ಅಪ್ಲಿಕೇಶನ್ಗಳಿಗೆ ಝೋಹೋ ಸರಳ ಪರ್ಯಾಯ ಒದಗಿಸುತ್ತಿದೆ.
ಝೋಹೋ ಸಿಆರ್ಎಂ, ಜೋಹೋ ಕೆಂಪೇನ್ಸ್, ಝೋಹೋ ಸೇಲ್ಸ್ ಐಕ್ಯು, ಝೋಹೋ ಸೋಷಿಯಲ್, ಝೋಹೋ ಬುಕ್ಸ್, ಝೋಹೋ ಇನ್ವಾಯ್ಸ್, ಝೋಹೋ ಎಕ್ಸ್ಪೆನ್ಸ್, ಝೋಹೋ ಇನ್ವೆಂಟರಿ, ಝೋಹೋ ರೈಟರ್ ಹೀಗೆ 50ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ಆಫರ್ ಮಾಡುತ್ತದೆ. ಬ್ಯುಸಿನೆಸ್ ಬೆಳವಣಿಗೆ ಮತ್ತು ನಿರ್ವಹಣೆಗೆ ಈ ಅಪ್ಲಿಕೇಶನ್ಗಳು ಸಹಕಾರಿಯಾಗುತ್ತವೆ.
ಇದನ್ನೂ ಓದಿ: ದೇಶಿ ಉತ್ಪನ್ನ ಬಳಸಿ; ಜೋಹೋ ಬಳಸುವ ಮೂಲಕ ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ವಿಶ್ವಾದ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿನ 13 ಕೋಟಿ ಬಳಕೆದಾರರು ಝೋಹೋ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ. ಝೋಹೋದ ಉತ್ಪನ್ನಗಳು ಕಡಿಮೆ ಬೆಲೆಗೆ ಲಭ್ಯ ಇದ್ದು, ಸಾಕಷ್ಟು ಸಣ್ಣ ಉದ್ದಿಮೆಗಳು ಇವನ್ನು ಅಳವಡಿಸಿಕೊಂಡಿವೆ. ಸಣ್ಣ ಉದ್ಯಮಗಳು ಮಾತ್ರವಲ್ಲ, ಅಮೇಜಾನ್, ನೆಟ್ಫ್ಲಿಕ್ಸ್, ಪ್ಯೂಮಾ, ಟೊಯೊಟಾ, ಸೋನಿ, ಲಾರಿಯಲ್ ಇತ್ಯಾದಿ ದೊಡ್ಡ ದೊಡ್ಡ ಸಂಸ್ಥೆಗಳೂ ಕೂಡ ಝೋಹೋ ಪರಿಕರಗಳನ್ನು ಬಳಸುತ್ತಿವೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಝೋಹೋ
ಝೋಹೋ ಸಂಸ್ಥೆ ಇತ್ತೀಚೆಗೆ ಝಿಯಾ ಎಲ್ಎಲ್ಎಂ ಎನ್ನುವ ಎಐ ಮಾಡಲ್ ಅನ್ನು ನಿರ್ಮಿಸಿದೆ. ಝಿಯೋ ಎಜೆಂಟ್ ಸ್ಟುಡಿಯೋ ಮೂಲಕ 25 ಎಐ ಏಜೆಂಟ್ಗಳನ್ನು ಇದು ಆಫರ್ ಮಾಡಿದೆ.
ಝೋಹೋ ಸಂಸ್ಥೆ ಪ್ಯಾಕೇಜ್ ರೂಪದಲ್ಲಿ ತನ್ನ ಅಪ್ಲಿಕೇಶನ್ಗಳನ್ನು ಒದಗಿಸುತ್ತದೆ. ಸಂಸ್ಥೆಯ ಅಗತ್ಯಗಳಿಗೆ ಅನುಗುಣವಾಗಿ ಈ ಪ್ಯಾಕೇಜ್ಗಳಿರುತ್ತವೆ.‘
ಇದನ್ನೂ ಓದಿ: ಬದಲಾದ ಕಾಲಚಕ್ರ: ಬಂಡವಾಳದ ಬೆನ್ನತ್ತಿ ಬೆಂಗಳೂರಿಗೆ ಬಂದ ಅಮೆರಿಕದ ನ್ಯೂಜೆರ್ಸಿ
ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರದ್ದು ಕುತೂಹಲಕಾರಿ ವ್ಯಕ್ತಿತ್ವ
ಝೋಹೋದ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಮದ್ರಾಸ್ ಐಐಟಿಯ ಉತ್ಪನ್ನ. ಅಮೆರಿಕದಲ್ಲಿ ಎಂಎಸ್ ಮತ್ತು ಪಿಎಚ್ಡಿ ಮಾಡಿದ್ದಾರೆ. 1996ರಲ್ಲಿ ಅಮೆರಿಕದಲ್ಲಿ ಅಡ್ವೆಂಟ್ನೆಟ್ ಎನ್ನುವ ನೆಟ್ವರ್ಕ್ ಎಕ್ವಿಪ್ಮೆಂಟ್ ಸೇವೆ ನೀಡುವ ಕಂಪನಿ ಸ್ಥಾಪಿಸಿದರು. ಇದೇ ಮುಂದೆ ಝೋಹೋ ಕಾರ್ಪೊರೇಶನ್ ಆಯಿತು. 2019ರಲ್ಲಿ ಇದರ ಮುಖ್ಯ ಕಚೇರಿಯನ್ನು ತಮಿಳುನಾಡಿನ ತೇಂಕಾಸಿ ಎಂಬಲ್ಲಿಗೆ ಶಿಫ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಉದ್ಯಮಗಳು ಬೆಳೆಯಬೇಕು. ಉದ್ಯಮಗಳಿಗೆ ಬೇಕಾದ ಎಂಜಿನಿಯರುಗಳು ಗ್ರಾಮೀಣ ಭಾಗದಲ್ಲೇ ಸಿಗುತ್ತಾರೆ ಎಂಬುದು ವೆಂಬು ಅವರ ವಾದ. ಬಿಳಿ ಅಂಗಿ, ಪಂಚೆ ತೊಟ್ಟು ಸಾದಾ ಸೀದಾ ಆಸಾಮಿ ಎನಿಸುವ ಶ್ರೀಧರ್ ವೆಂಬು ಅವರ ದೃಷ್ಟಿಕೋನವೂ ಬಹಳ ಸರಳ. ಆದರೆ, ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಬೇಕು ಎನ್ನುವ ಕನಸು ಅವರದ್ದು. ಸಿಇಒ ಸ್ಥಾನದಿಂದ ಕೆಳಗಿಳಿದು ಚೀಫ್ ಸೈಂಟಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಉತ್ಪನ್ನಗಳ ನಿರ್ಮಾಣಕ್ಕೆ ಸಹಾಯವಾಗುವುದು, ಗ್ರಾಮೀಣ ಭಾಗಕ್ಕೆ ಪುಷ್ಟಿ ಕೊಡುವುದು ಸದ್ಯ ಅವರ ಗುರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Tue, 23 September 25




