GST Record: ಏಪ್ರಿಲ್ ಒಂದೇ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​​ಟಿ ಕಲೆಕ್ಷನ್; ಸಾರ್ವಕಾಲಿಕ ದಾಖಲೆ, ಕರ್ನಾಟಕ ನಂ. 2

|

Updated on: May 01, 2023 | 6:47 PM

Karnataka Sees 2nd Highest GST Collection: 2023ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ 1,87,035 ಕೋಟಿ ರೂ ಜಿಎಸ್​ಟಿ ಸಂಗ್ರಹ ಆಗಿದೆ. ಇದು ಹೊಸ ದಾಖಲೆಯಾಗಿದೆ. ರಾಜ್ಯಾವಾರು ಲೆಕ್ಕದಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್ ಆದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

GST Record: ಏಪ್ರಿಲ್ ಒಂದೇ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​​ಟಿ ಕಲೆಕ್ಷನ್; ಸಾರ್ವಕಾಲಿಕ ದಾಖಲೆ, ಕರ್ನಾಟಕ ನಂ. 2
ಹಣ
Follow us on

ನವದೆಹಲಿ: ಕೇಂದ್ರ ಸರ್ಕಾರದ ಬೊಕ್ಕಸ ಸೇರುತ್ತಿರುವ ಜಿಎಸ್​ಟಿ ತೆರಿಗೆ (GST) ಪ್ರಮಾಣ ಹೆಚ್ಚಾಗುತ್ತಿದೆ. 2023 ಏಪ್ರಿಲ್ ತಿಂಗಳಲ್ಲಿ ಸರ್ಕಾರಕ್ಕೆ ಬಂದಿರುವ ಒಟ್ಟು ಜಿಎಸ್​ಟಿ ಆದಾಯ 1,87,035 ರೂ ಆಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಯಾವುದೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಜಿಎಸ್​ಟಿ ಕಲೆಕ್ಷನ್ ಆಗಿದ್ದು ಇದೇ ಮೊದಲು. ಬಂದಿರುವ 1.87 ಲಕ್ಷ ರೂ ಮೊತ್ತದ ಜಿಎಸ್​ಟಿ ಆದಾಯದಲ್ಲಿ ಸಿಜಿಎಸ್​ಟಿ 38,440 ಕೋಟಿ ರೂ, ಎಸ್​ಜಿಎಸ್​ಟಿ 47,412 ಕೋಟಿ ರೂ, ಐಜಿಎಸ್​ಟಿ 89,158 ಕೋಟಿ ರೂ ಹಾಗು 12,025 ಕೋಟಿ ರೂ ಮೊತ್ತದ ಸೆಸ್​ನ ಆದಾಯ ಸೇರಿದೆ. ಇದು ಮೇ 1ರಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ.

ಮೂರು ವಿಧದ ಜಿಎಸ್​ಟಿಯಲ್ಲಿ ಎಸ್​ಜಿಎಸ್​ಟಿಯಲ್ಲಿ ಬಂದಿರುವ ಸಂಗ್ರಹವೆಲ್ಲವೂ ಆಯಾ ರಾಜ್ಯಗಳಿಗೆ ಸಂದಾಯವಾಗುತ್ತದೆ. ಐಜಿಎಸ್​ಟಿ ಎಂದರೆ ಇಂಟಿಗ್ರೇಟೆಡ್ ಜಿಎಸ್​ಟಿ. ಇದು ಅಂತಾರಾಜ್ಯ ವಹಿವಾಟುಗಳಲ್ಲಿ ಸಂಗ್ರಹವಾದ ತೆರಿಗೆಯಾಗಿದೆ. ಈ ಐಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ 34,972 ಕೋಟಿ ರೂ ಮೊತ್ತದ ಹಣ ಸರಕುಗಳ ಆಮದಿನಿಂದ ಬಂದಿದೆ. ಈ ಐಜಿಎಸ್​ಟಿ ತೆರಿಗೆಯಲ್ಲಿ ಅರ್ಧದಷ್ಟು ಮೊತ್ತ ಕೇಂದ್ರಕ್ಕೆ ಹೋದರೆ, ಉಳಿದ ಅರ್ಧ ಮೊತ್ತ ಸಂಬಂಧಿತ ರಾಜ್ಯಗಳಿಗೆ ಹಂಚಿಕೆ ಆಗುತ್ತದೆ.

ಇದನ್ನೂ ಓದಿNew GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ

2022ರ ಏಪ್ರಿಲ್ ತಿಂಗಳಲ್ಲಿ 1,67,540 ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿತ್ತು. ಇಲ್ಲಿವರೆಗೂ ಅದೇ ದಾಖಲೆ ಆಗಿತ್ತು. ಇದೀಗ 2023 ಏಪ್ರಿಲ್ ತಿಂಗಳಲ್ಲಿ 1,87,035 ಕೋಟಿ ರೂ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಹಿಂದಿನ ವರ್ಷದ ಕಲೆಕ್ಷನ್​ಗಿಂತ ಈ ಬಾರಿ 19,495 ಕೋಟಿಯಷ್ಟು ಹೆಚ್ಚು ಜಿಎಸ್​ಟಿ ಹರಿದುಬಂದಿದೆ.

ಕರ್ನಾಟಕದಲ್ಲಿ 14,593 ಕೋಟಿ ರೂ ಜಿಎಸ್​ಟಿ ಕಲೆಕ್ಷನ್

ದೇಶಾದ್ಯಂತ ಸಂಗ್ರಹವಾಗಿರುವ ಒಟ್ಟು ಜಿಎಸ್​ಟಿ ಕಲೆಕ್ಷನ್ ಪೈಕಿ ಕರ್ನಾಟಕದ ಪಾಲು ಗಮನಾರ್ಹವಾಗಿದೆ. ಕರ್ನಾಟಕದಲ್ಲಿ 14,593 ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹವಾಗಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಜಿಎಸ್​ಟಿ ಬಂದಿರುವುದು. 33,196 ಕೋಟಿ ರೂ ಜಿಎಸ್​ಟಿ ಸಂಗ್ರಹ ಮಹಾರಾಷ್ಟ್ರದಲ್ಲಿ ಆಗಿದೆ. ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳು 10,000 ಕೋಟಿ ರೂಗೂ ಹೆಚ್ಚು ಮೊತ್ತದ ಜಿಎಸ್​ಟಿ ಕಲೆಕ್ಷನ್ ಕಂಡಿವೆ.

ಇದನ್ನೂ ಓದಿGold Loan: ಚಿನ್ನದ ಮೇಲೆ ಸಾಲ; ಬಹಳ ವೇಗ, ಬಹಳ ಸುಲಭ; ಬಡ್ಡಿಯೂ ಕಡಿಮೆ; ಆದರೆ, ಸಾಲ ಪಡೆಯುವ ಮುನ್ನ ಈ ವಿಷಯ ಗಮನಿಸಿರಿ

ಹಿಂದಿನ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಜಿಎಸ್​ಟಿಯಲ್ಲಿ ಅತಿ ಹೆಚ್ಚು ಶೇಕಡವಾರು ಹೆಚ್ಚಳ ಕಂಡಿರುವ ರಾಜ್ಯಗಳೆಂದರೆ ಸಿಕ್ಕಿಂ, ಮಿಜೋರಾಮ್, ಜಮ್ಮು ಕಾಶ್ಮೀರ, ಲಡಾಕ್, ಗೋವಾ, ನಾಗಾಲ್ಯಾಂಡ್. ಕರ್ನಾಟಕದಲ್ಲಿ ಶೇ. 23ರಷ್ಟು ಜಿಎಸ್​ಟಿ ಸಂಗ್ರಹ ಹೆಚ್ಚಾಗಿದೆ.

2023ರ ಏಪ್ರಿಲ್​ನಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿರುವ ರಾಜ್ಯಗಳ ಪಟ್ಟಿ

  1. ಮಹಾರಾಷ್ಟ್ರ: 33,196 ಕೋಟಿ ರೂ
  2. ಕರ್ನಾಟಕ: 14,593 ಕೋಟಿ ರೂ
  3. ಗುಜರಾತ್: 11,721 ಕೋಟಿ ರೂ
  4. ತಮಿಳುನಾಡು: 11,559 ಕೋಟಿ ರೂ
  5. ಉತ್ತರಪ್ರದೇಶ: 10,320 ಕೋಟಿ ರೂ
  6. ಹರ್ಯಾಣ: 10,035 ಕೋಟಿ ರೂ
  7. ಪಶ್ಚಿಮ ಬಂಗಾಳ: 6,447 ಕೋಟಿ ರೂ
  8. ದೆಹಲಿ: 6,320 ಕೋಟಿ ರೂ
  9. ತೆಲಂಗಾಣ: 5,622 ಕೋಟಿ ರೂ
  10. ಒಡಿಶಾ: 5,036 ಕೋಟಿ ರೂ
  11. ರಾಜಸ್ಥಾನ: 4,785 ಕೋಟಿ ರೂ
  12. ಮಧ್ಯಪ್ರದೇಶ: 4,267 ಕೋಟಿ ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Mon, 1 May 23