
ನವದೆಹಲಿ, ಡಿಸೆಂಬರ್ 1: ಜಿಎಸ್ಟಿ ತೆರಿಗೆ ಕಡಿತದ ಪರಿಣಾಮವಾಗಿ ಸರ್ಕಾರಕ್ಕೆ ಟ್ಯಾಕ್ಸ್ ಆದಾಯ ನಿರೀಕ್ಷೆಯಂತೆ ಮಂದಗೊಂಡಿದೆ. ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಸಿಕ್ಕಿದ ಜಿಎಸ್ಟಿ ಆದಾಯ (GST) 1,70,276 ಕೋಟಿ ರೂ ಆಗಿದೆ. ಕಳೆದ ವರ್ಷದ (2024) ನವೆಂಬರ್ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಕಲೆಕ್ಷನ್ಸ್ ಶೇ. 0.7 ಮಾತ್ರವೇ ಏರಿಕೆ ಆಗಿರುವುದು. 2024ರ ನವೆಂಬರ್ನಲ್ಲಿ 1.69 ಲಕ್ಷ ಕೋಟಿ ರೂ ಮೊತ್ತದಷ್ಟು ಜಿಎಸ್ಟಿ ಪ್ರಾಪ್ತವಾಗಿತ್ತು.
ಹಿಂದಿನ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ಬರೋಬ್ಬರಿ 25,000 ಕೋಟಿ ರೂ ಆದಾಯ ಕಡಿಮೆ ಆಗಿದೆ. 2025ರ ಅಕ್ಟೋಬರ್ ತಿಂಗಳಲ್ಲಿ 1.96 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಏಪ್ರಿಲ್ನಿಂದ ನವೆಂಬರ್ವರೆಗೂ 14,75,488 ಕೋಟಿ ರೂ ಜಿಎಸ್ಟಿ ಸಿಕ್ಕಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾದ ಜಿಎಸ್ಟಿ 13,55,242 ಕೋಟಿ ರೂ. ಈ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ಜಿಎಸ್ಟಿ ಸಂಗ್ರಹ ಶೇ. 8.9ರಷ್ಟು ಹೆಚ್ಚಾದಂತಾಗಿದೆ.
ಇದನ್ನೂ ಓದಿ: 19 ಕಿಲೋ ಎಲ್ಪಿಜಿ ಬೆಲೆ 10.50 ರೂ ಇಳಿಕೆ; ಇಲ್ಲಿದೆ ದರಪಟ್ಟಿ
ಕೇಂದ್ರ ಸರ್ಕಾರ ಇತ್ತೀಚೆಗೆ ಹಲವಾರು ಸರಕುಗಳ ಮೇಲಿನ ಜಿಎಸ್ಟಿ ದರವನ್ನು ಇಳಿಸಿತ್ತು. ಶೇ. 12 ಮತ್ತು ಶೇ. 28ರಷ್ಟಿದ್ದ ಜಿಎಸ್ಟಿ ದರಗಳನ್ನು ಶೇ. 5 ಮತ್ತು ಶೇ. 18ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಬಹಳಷ್ಟು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ದೇಶೀಯ ಜಿಎಸ್ಟಿ ಆದಾಯ ನವೆಂಬರ್ನಲ್ಲಿ ಶೇ. 2.3ರಷ್ಟು ಕಡಿಮೆ ಆಗಿ 1.24 ಲಕ್ಷ ಕೋಟಿ ರೂ ಸಿಕ್ಕಿದೆ. ಆಮದುಗಳಿಂದ ಬಂದಿರುವ ಟ್ಯಾಕ್ಸ್ ಸಂಗ್ರಹ 45,976 ಕೋಟಿ ರೂ. ಇದರಲ್ಲಿ ಶೇ. 10.2ರಷ್ಟು ಹೆಚ್ಚಾಗಿದೆ.
ಜಿಎಸ್ಟಿ ರೀಫಂಡ್ಗಳು ನವೆಂಬರ್ನಲ್ಲಿ 18,196 ಕೋಟಿ ರೂ ಆಗಿವೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ರೀಫಂಡ್ ಪ್ರಮಾಣ ಶೇ. 3.5ರಷ್ಟು ಕಡಿಮೆ ಆಗಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಸಂಗ್ರಹ 1.52 ಲಕ್ಷ ಕೋಟಿ ರೂ ಇದ್ದು, ಹಿಂದಿನ ವರ್ಷದಕ್ಕಿಂತ ಶೇ. 1.3ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ