ನವದೆಹಲಿ, ಆಗಸ್ಟ್ 1: ದೇಶಾದ್ಯಂತ ಸಂಗ್ರಹವಾಗುವ ಸರಕು ಮತ್ತು ಸೇವಾ ತೆರಿಗೆಯಾದ ಜಿಎಸ್ಟಿ ವಿವರಗಳು ಈಗ ಜಿಎಸ್ಟಿ ವೆಬ್ಸೈಟ್ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಇರಲಿವೆ. ಇದೀಗ ಜುಲೈ ತಿಂಗಳ ಜಿಎಸ್ಟಿ ಸಂಗ್ರಹ ಮತ್ತು ರಾಜ್ಯವಾರು ಐಜಿಎಸ್ಟಿ ಸೆಟಲ್ಮೆಂಟ್ನ ದತ್ತಾಂಶವನ್ನು ಈ ವೆಬ್ಸೈಟ್ಗೆ (www.gst.gov.in/) ಹಾಕಲಾಗಿದೆ. ಜಾಲತಾಣದ ಮುಖ್ಯಪುಟದಲ್ಲಿರುವ ನ್ಯೂಸ್ ಅಂಡ್ ಅಪ್ಡೇಟ್ಸ್ ಸೆಕ್ಷನ್ ಅಡಿಯಲ್ಲಿ ಇದನ್ನು ನೋಡಬಹುದು. ಇನ್ಮುಂದೆ ಪ್ರತೀ ತಿಂಗಳ ಜಿಎಸ್ಟಿ ಸಂಗ್ರಹದ ಡಾಟಾವನ್ನು ಯಾರು ಬೇಕಾದರೂ ಈ ವೆಬ್ಸೈಟ್ನಲ್ಲಿ ನೋಡಬಹುದು.
ಈ ವೆಬ್ಸೈಟ್ನ ಡೌನ್ಲೋಡ್ಸ್ ಸೆಕ್ಷನ್ಗೆ ಹೋದರೆ ಅಲ್ಲಿರುವ ಜಿಎಸ್ಟಿ ಸ್ಟಾಟಿಸ್ಟಿಕ್ಸ್ ಅಡಿಯಲ್ಲಿ 2017ರಿಂದೀಚೆ ಜಿಎಸ್ಟಿ ರಿಟರ್ನ್ ಸಲ್ಲಿಕೆಯ ಪೂರ್ಣ ಮಾಹಿತಿ ಲಭಿಸುತ್ತದೆ. ರಾಜ್ಯವಾರು ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ ಮತ್ತು ಸೆಸ್ನ ವಿವರಗಳನ್ನೂ ಕಾಣಬಹುದು.
ಇಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜುಲೈ ತಿಂಗಳಲ್ಲಿ ಒಟ್ಟಾರೆ ಜಿಎಸ್ಟಿ ಸಂಗ್ರಹ 1.82 ಲಕ್ಷ ಕೋಟಿ ರೂ ದಾಟಿದೆ. ರೀಫಂಡ್ ಕಳೆದು ಬಂದ ನಿವ್ವಳ ಜಿಎಸ್ಟಿ ಸಂಗ್ರಹ 1,44,897 ಕೋಟಿ ರೂ ಇದೆ. ಕರ್ನಾಟಕದಲ್ಲಿ ಸಂಗ್ರಹವಾದ ಜಿಎಸ್ಟಿ ಪ್ರಮಾಣ 13,025 ಕೋಟಿ ರೂ ಆಗಿದೆ. ಹಿಂದಿನ ವರ್ಷದ ಸಂಗ್ರಹಕ್ಕೆ ಹೋಲಿಸಿದರೆ ಶೇ. 13ರಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಜಿಎಸ್ಟಿ ಸಂಗ್ರಹ 28,970 ಕೋಟಿ ರೂ ಆಗಿದೆ.
ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 31ರವರೆಗೂ ಅವಕಾಶ? ಇದು ಸುಳ್ಳು ಸುದ್ದಿ ಎಂದ ಪಿಐಬಿ ಫ್ಯಾಕ್ಟ್ ಚೆಕ್ ಟೀಮ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Thu, 1 August 24