ಪಿಎಂಎಸ್ 4.0 ಆ್ಯಪ್ ಬಿಡುಗಡೆ; ಕೇಂದ್ರದಿಂದ ನೇರವಾಗಿ ಅಕ್ಕಿ ಖರೀದಿಸಲು ರಾಜ್ಯಗಳಿಗೆ ಅವಕಾಶ
Pralhad Joshi launches PMS 4.0 app: ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಆಗಸ್ಟ್ 1ರಂದು ಪ್ರೈಸ್ ಮಾನಿಟರಿಂಗ್ ಸಿಸ್ಟಂನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ. ದೇಶಾದ್ಯಂತ 38 ಆಹಾರಧಾನ್ಯಗಳ ಬೆಲೆಗಳ ಅಪ್ಡೇಟೆಡ್ ಮಾಹಿತಿ ಈ ಆ್ಯಪ್ನಲ್ಲಿ ಸಿಗುತ್ತದೆ. ಹಾಗೆಯೇ, ಯಾವುದೇ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಬೇಕಿದ್ದರೆ ಕೇಂದ್ರದಿಂದ ನೇರವಾಗಿ ಖರೀದಿಸುವ ಅವಕಾಶವನ್ನು ನೀಡಲಾಗಿದೆ.
ನವದೆಹಲಿ, ಆಗಸ್ಟ್ 1: ವಿವಿಧ ಆಹಾರಧಾನ್ಯಗಳ ಬೆಲೆಗಳ ಮೇಲೆ ನಿಗಾ ಇಡಲು ಪ್ರೈಸ್ ಮಾನಿಟರಿಂಗ್ ಸಿಸ್ಟಂ ಅಥವಾ ಪಿಎಂಎಸ್ನ 4ನೇ ಆವೃತ್ತಿಯ ಆ್ಯಪ್ ಅನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇಂದು ಗುರುವಾರ ಅನಾವರಣಗೊಳಿಸಿದ್ದಾರೆ. ಈ ಮುಂಚೆಯೇ ಈ ಆ್ಯಪ್ನಲ್ಲಿ 22 ವಸ್ತುಗಳ ಬೆಲೆಗಳನ್ನು ಟ್ರ್ಯಾಕ್ ಮಾಡಲಾಗಿತ್ತು. ನಾಲ್ಕನೇ ಆವೃತ್ತಿಯಲ್ಲಿ 16 ಹೊಸ ಸೇರ್ಪಡೆಗಳಾಗಿವೆ. ಇದರೊಂದಿಗೆ ಈ ಆ್ಯಪ್ನಲ್ಲಿ 38 ಆಹಾರವಸ್ತುಗಳ ದೇಶವ್ಯಾಪಿ ದರಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.
ರಾಗಿ, ಗೋದಿ, ಜೋಳ ಮೊದಲಾದವುಗಳನ್ನು ಹೊಸದಾಗಿ ಪಿಎಂಎಸ್ ಮಾನಿಟರಿಂಗ್ ಸಿಸ್ಟಂಗೆ ಸೇರಿಸಲಾಗಿದೆ. ದೇಶಾದ್ಯಂತ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 550 ಸೆಂಟರ್ಗಳಿಂದ ಈ ಆಹಾರವಸ್ತುಗಳ ಬೆಲೆಗಳ ಮಾಹಿತಿ ಈ ಆ್ಯಪ್ಗೆ ಬರುತ್ತದೆ. ಈ ದರ ವ್ಯತ್ಯಯವನ್ನು ಗಮನಿಸಿ ಸೂಕ್ತ ನೀತಿ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಈ ಪಿಎಂಎಸ್ ಅನುವು ಮಾಡಿಕೊಡುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಈ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ. ಈ 38 ಆಹಾರವಸ್ತುಗಳ ಬೆಲೆಗಳು ಹಣದುಬ್ಬರದ ಶೇ. 31 ಭಾಗವನ್ನು ನಿರ್ಧರಿಸುತ್ತವೆ ಎಂಬುದು ಗಮನಾರ್ಹ.
ರಾಜ್ಯಗಳು ನೇರವಾಗಿ ಅಕ್ಕಿ ಖರೀದಿಸಲು ಅವಕಾಶ
ರಾಜ್ಯಗಳಿಗೆ ಅಕ್ಕಿ ಕೊರತೆ ಬಿದ್ದರೆ ಅವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಮೂಲಕ ನೇರವಾಗಿ ಆಹಾರ ನಿಗಮವಾದ ಎಫ್ಸಿಐನಿಂದ ಖರೀದಿಸಬಹುದು. ಅಕ್ಕಿಯನ್ನು ಖರೀದಿಸಲು ಇ-ಹರಾಜಿನಲ್ಲಿ ಪಾಲ್ಗೊಳ್ಳಬೇಕಿಲ್ಲ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರೂ ಆದ ಪ್ರಹ್ಲಾದ್ ಜೋಷಿ ಇಂದು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಫೋಸಿಸ್ನಿಂದ 32,403 ಕೋಟಿ ರೂ ಜಿಎಸ್ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?
ಕ್ವಿಂಟಾಲ್ಗೆ 2,800 ರೂ ಬೆಲೆಗೆ ಅಕ್ಕಿಯು ರಾಜ್ಯಗಳಿಗೆ ಸಿಗಲಿದೆ. ಕೇಂದ್ರ ಸರ್ಕಾರ ಪಡಿತರ ಯೋಜನೆ ಅಡಿ ಪ್ರತೀ ಕುಟುಂಬಕ್ಕೆ 5 ಕಿಲೋ ಉಚಿತ ಅಕ್ಕಿ ಒದಗಿಸುತ್ತದೆ. ಯಾವುದೇ ರಾಜ್ಯ ಸರ್ಕಾರಗಳಿಗೆ ಇದಕ್ಕಿಂತ ಹೆಚ್ಚು ಅಕ್ಕಿ ಬೇಕಿದ್ದರೆ ಕ್ವಿಂಟಾಲ್ಗೆ 2,800 ರೂ ಬೆಲೆಗೆ ಅಕ್ಕಿಯನ್ನು ಎಫ್ಸಿಐನಿಂದ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ