2,000 ರೂವರೆಗಿನ ಕಾರ್ಡ್ ಹಣ ಪಾವತಿಗೆ ಶೇ. 18ರಷ್ಟು ಜಿಎಸ್​ಟಿ; ಯಾರಿಗೆ ಬೀಳುತ್ತೆ ಹೊರೆ?

|

Updated on: Sep 08, 2024 | 4:26 PM

18% GST on below Rs 2,000 transaction through card: ಕಾರ್ಡ್​ಗಳ ಮೂಲಕ ಮಾಡಲಾಗುವ 2,000 ರೂವರೆಗಿನ ಹಣ ಪಾವತಿಗೆ ಜಿಎಸ್​ಟಿ ತೆರಿಗೆ ವಿಧಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ಪೇಮೆಂಟ್ ಗೇಟ್​ವೇ ಶುಲ್ಕದ ಮೇಲೆ ಶೇ. 18ರಷ್ಟು ಜಿಎಸ್​ಟಿ ಹಾಕಬಹುದು. ಪೇಮೆಂಟ್ ಅಗ್ರಿಗೇಟರ್ಸ್​ಗೆ ವಿಧಿಸಲಾಗುವ ಈ ಶುಲ್ಕದ ಮೇಲಿನ ತೆರಿಗೆ ಹೊರೆ ಅಂಗಡಿ ಮುಂಗಟ್ಟುಗಳಿಗೆ ವರ್ಗವಾಗಬಹುದು. ಅಲ್ಲಿಂದ ಅಂತಿಮವಾಗಿ ಗ್ರಾಹಕರಿಗೆ ಈ ತೆರಿಗೆ ಹೊರೆ ಬೀಳಬಹುದು.

2,000 ರೂವರೆಗಿನ ಕಾರ್ಡ್ ಹಣ ಪಾವತಿಗೆ ಶೇ. 18ರಷ್ಟು ಜಿಎಸ್​ಟಿ; ಯಾರಿಗೆ ಬೀಳುತ್ತೆ ಹೊರೆ?
ಡಿಜಿಟಲ್ ವಹಿವಾಟು
Follow us on

ನವದೆಹಲಿ, ಸೆಪ್ಟೆಂಬರ್ 8: ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ಸಣ್ಣ ಪ್ರಮಾಣದ ಹಣ ಪಾವತಿಯನ್ನು ಮತ್ತೆ ಜಿಎಸ್​ಟಿ ವ್ಯಾಪ್ತಿಗೆ ತರಲು ಸರ್ಕಾರ ಯೋಜಿಸುತ್ತಿದೆ. 2,000 ರೂವರೆಗಿನ ಡಿಜಿಟಲ್ ವಹಿವಾಟುಗಳಲ್ಲಿ ಪೇಮೆಂಟ್ ಅಗ್ರಿಗೇಟರ್ಸ್ ಮೇಲೆ ಶೇ. 18ರಷ್ಟು ಜಿಎಸ್​ಟಿ ವಿಧಿಸುವ ಸಾಧ್ಯತೆ ಇದೆ. ಇಂಥದ್ದೊಂದು ಪ್ರಸ್ತಾಪ ನಾಳೆ (ಸೆ. 9) ನಡೆಯಲಿರುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಲಿದೆ. ಕೇಂದ್ರ ಮತ್ತು ರಾಜ್ಯಗಳ ಕಂದಾಯ ಅಧಿಕಾರಿಗಳಿರುವ ಜಿಎಸ್​ಟಿ ಫಿಟ್ಮೆಂಟ್ ಕಮಿಟಿ ಈ ಹೊಸ ತೆರಿಗೆಯನ್ನು ಜಾರಿಗೆ ತರುವ ಬಗ್ಗೆ ಒಲವು ಹೊಂದಿರುವುದು ತಿಳಿದುಬಂದಿದೆ. ವರದಿಗಳ ಪ್ರಕಾರ ಸಣ್ಣ ಡಿಜಿಟಲ್ ವಹಿವಾಟಿಗೆ ಹೊಸ ಜಿಎಸ್​ಟಿ ಹೊರೆ ಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ.

2016ರಲ್ಲಿ ನೋಟ್ ಬ್ಯಾನ್​ಗೆ ಮುನ್ನ ಕಾರ್ಡ್ ಮೂಲಕ ನಡೆಯುವ ಎಲ್ಲಾ ವಹಿವಾಟಿಗೆ ಜಿಎಸ್​ಟಿ ತೆರಿಗೆ ಇರುತ್ತಿತ್ತು. ನೋಟ್ ಬ್ಯಾನ್ ಆದ ಬಳಿಕ ಸಾರ್ವಜನಿಕರನ್ನು ಡಿಜಿಟಲ್ ವಹಿವಾಟು ನಡೆಸಲು ಉತ್ತೇಜಿಸುವ ಸಲುವಾಗಿ ಸಣ್ಣ ವಹಿವಾಟುಗಳನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈಗ ಮತ್ತೊಮ್ಮೆ ಅದು ಚಾಲನೆಗೆ ಬರುವ ಸಾಧ್ಯತೆ ಇದೆ.

2,000 ರೂ ವಹಿವಾಟಿಗೆ ಎಷ್ಟು ಜಿಎಸ್​ಟಿ ಇರುತ್ತೆ?

ಪೇಮೆಂಟ್ ಗೇಟ್​ವೇ ಮತ್ತು ಬ್ಯಾಂಕುಗಳ ನಡುವೆ ಪೇಮೆಂಟ್ ಮಧ್ಯವರ್ತಿಗಳಾಗಿರುವ ಪೇಟಿಎಂ, ಅಮೇಜಾನ್ ಪೇ, ಫೋನ್​ಪೇ, ಗೂಗಲ್ ಪೇ, ರೇಜರ್​ಪೇ ಇತ್ಯಾದಿ ಪೇಮೆಂಟ್ ಅಗ್ರಿಗೇಟರ್ಸ್ ಮೇಲೆ ಜಿಎಸ್​ಟಿ ವಿಧಿಸಲಾಗುತ್ತದೆ. ಉದಾಹರಣೆಗೆ, ಕಾರ್ಡ್ ಮೂಲಕ 2,000 ರೂ ಹಣ ಪಾವತಿಸಿದರೆ ಅದಕ್ಕೆ ಪೇಮೆಂಟ್ ಗೇಟ್​ವೇ ಸರ್ವಿಸ್ ಶುಲ್ಕವಾಗಿ ಶೇ. 0.5ರಿಂದ 2ರಷ್ಟು ಹಣವನ್ನು ಪೇಮೆಂಟ್ ಅಗ್ರಿಗೇಟರ್ಸ್ ನೀಡುತ್ತವೆ. ಸರಾಸರಿಯಾಗಿ ಶೇ. 1ರಷ್ಟು ಶುಲ್ಕ ಎಂದು ಭಾವಿಸಬಹುದು. ಈ ಶೇ. 1ರಷ್ಟು ಶುಲ್ಕದ ಮೇಲೆ ಶೇ. 18ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾಪ ಇದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ

ಅಂದರೆ, 2,000 ರೂ ವಹಿವಾಟು ನಡೆದಲ್ಲಿ ಅದಕ್ಕೆ 200 ರೂ ಶುಲ್ಕ ಇರುತ್ತದೆ. ಈ 200 ರೂಗೆ ಶೇ. 18ರಷ್ಟು ಜಿಎಸ್​ಟಿ ಎಂದರೆ 38 ರೂ ಆಗುತ್ತದೆ. ಸಾಮಾನ್ಯವಾಗಿ ಈ ಶುಲ್ಕ ಮತ್ತು ತೆರಿಗೆಯನ್ನು ಪೇಮೆಂಟ್ ಅಗ್ರಿಗೇಟರ್ಸ್​ಗೆ ವಿಧಿಸಲಾಗುತ್ತದೆಯಾದರೂ ಆ ಹೊರೆಯನ್ನು ಅಂಗಡಿಗಳಿಗೆ ವರ್ಗಾಯಿಸಲಾಗುತ್ತದೆ. ಅಂಗಡಿಯವರೂ ಕೂಡ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಹಾಗಾಗಿ, ಸರ್ಕಾರ ಯಾರಿಗೇ ಜಿಎಸ್​ಟಿ ಹಾಕಿದರೂ ಅದರ ಹೊರೆ ಬೀಳುವುದು ಅಂತಿಮ ಗ್ರಾಹಕರಿಗೆಯೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ