HAL: ಅಮೆರಿಕದ ಜಿಇ ಜೊತೆ ಸೇರಿ ಫೈಟರ್ ಜೆಟ್ ಎಂಜಿನ್ ತಯಾರಿಕೆಗೆ ಎಚ್ಎಎಲ್ ಒಪ್ಪಂದ; ಒಮ್ಮೆಲೇ ಜಿಗಿದ ಷೇರುಬೆಲೆ
HAL MoU With GE Aerospace: ತೇಜಸ್ ಎಂಕೆ2 ಫೈಟರ್ ಜೆಟ್ಗೆ ಎಫ್414 ಎಂಜಿನ್ಗಳನ್ನು ತಯಾರಿಸಲು ಜಿಇ ಏರೋಸ್ಪೇಸ್ ಜೊತೆ ಎಚ್ಎಎಲ್ ಎಂಒಯು ಒಪ್ಪಂದ ಮಾಡಿಕೊಂಡಿದೆ. ಈ ಬಳಿಕ ಜೂನ್ 23ರ ಬೆಳಗ್ಗೆ ಎಚ್ಎಲ್ ಷೇರುಬೆಲೆ ದಿಢೀರ್ ಏರಿಕೆ ಕಂಡಿದೆ.
ಬೆಂಗಳೂರು: ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ ನಡೆದ ಮಹತ್ವದ ಉದ್ದಿಮೆ ಒಪ್ಪಂದಗಳಲ್ಲಿ ತೇಜಸ್ ಫೈಟರ್ ಜೆಟ್ಗೆ ಎಂಜಿನ್ ತಯಾರಿಸುವುದೂ ಒಂದು. ಅಮೆರಿಕದ ಜಿಇ ಏರೋಸ್ಪೇಸ್ ಮತ್ತು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್ಎಎಲ್) ಮಧ್ಯೆ ಜೂನ್ 22, ಗುರುವಾರದಂದು ಎಂಒಯು ಒಪ್ಪಂದವಾಗಿದೆ. ಭಾರತೀಯ ವಾಯುಸೇನೆಗೆ ಸೇರಿದ ತೇಜಸ್–ಎಂಕೆ2 ಎಂಬ ಎಲ್ಸಿಎ ಫೈಟರ್ ಜೆಟ್ಗೆ ಎಫ್414 ಎಂಜಿನ್ಗಳನ್ನು ಈ ಎರಡು ಕಂಪನಿಗಳು ಜೊತೆ ಸೇರಿ ತಯಾರಿಸಲಿವೆ. ಮಿಗ್-29 ಮತ್ತು ಮಿರೇಜ್2000 ಯುದ್ಧವಿಮಾನಗಳ ಕಾಲಾವಧಿ ಮುಗಿಯುತ್ತಿರುವುದರಿಂದ ಅವುಗಳ ಬದಲಿಗೆ ತೇಜಸ್ ಎಲ್ಸಿಎ ಜೆಟ್ ವಿಮಾನಗಳನ್ನು ಸೇನೆಗೆ ಬಳಸಲಾಗುತ್ತದೆ.
ಎಫ್414 ಎಂಜಿನ್ಗಳು ಜಿಇ ಏರೋಸ್ಪೇಸ್ ಅಭಿವೃದ್ಧಿಪಡಿಸಿದ್ದಾಗಿವೆ. ಈ ಎಂಜಿನ್ಗಳ ಶೇ. 80ರಷ್ಟು ತಂತ್ರಜ್ಞಾನವನ್ನು ಎಚ್ಎಎಲ್ಗೆ ಹಸ್ತಾಂತರಿಸಲಾಗುತ್ತದೆ. ಅದನ್ನು ಬಳಸಿ ಜಿಇ ಏರೋಸ್ಪೇಸ್ನ ತಾಂತ್ರಿಕ ಸಹಾಯದೊಂದಿಗೆ ಎಚ್ಎಎಲ್ ಈ ಎಫ್414 ಎಂಜಿನ್ಗಳನ್ನು ಭಾರತದಲ್ಲೇ ತಯಾರಿಸಲಿದೆ.
ಇದನ್ನೂ ಓದಿ: Photos: ಅಮೆರಿಕ ಸಂಸತ್ತಿನಲ್ಲಿ ಮೋದಿ ಐತಿಹಾಸಿಕ ಭಾಷಣ, ಚಪ್ಪಾಳೆ, ಶಿಳ್ಳೆಗಳ ಸುರಿಮಳೆ, ಮೋದಿ ಮೋದಿ ಎಂದು ಕೂಗಿದ ಜನ
ಜಿಇ ಏರೋಸ್ಪೇಸ್ ಮತ್ತು ಭಾರತೀಯ ವಾಯುಸೇನೆ ನಡುವಿನ ಸಂಬಂಧ ಬಹಳ ಹಳೆಯದ್ದು. ಜಿ ಏರೋಸ್ಪೇಸ್ ಭಾರತೀಯ ವಾಯುಸೇನೆಯ ಎಲ್ಸಿಎ ಹಗುರ ಯುದ್ಧವಿಮಾನಗಳಿಗೆ ಎಫ್404 ಎಂಜಿನ್ಗಳನ್ನು ಒದಗಿಸುವ ಕಾರ್ಯವನ್ನು 1986ರಲ್ಲೇ ಆರಂಭಿಸಿತ್ತು. ಎಲ್ಸಿಎ ತೇಜಸ್ ಎಂಕೆ1 ಮತ್ತು ಎಂಕೆ2 ಯುದ್ಧವಿಮಾನಗಳಿಗೆ ಎಫ್404 ಮತ್ತು ಎಫ್414 ಎಂಜಿನ್ಗಳನ್ನು ಜಿಇ ಒದಗಿಸುತ್ತಾ ಬಂದಿದೆ. ಈವರೆಗೆ 75 ಎಫ್404 ಮತ್ತು 8 ಎಫ್414 ಎಂಜಿನ್ಗಳನ್ನು ಜಿಇ ಒದಗಿಸಿದೆ. ಇನ್ನಷ್ಟು 99 ಎಫ್404 ಎಂಜಿನ್ಗಳಿಗೆ ಒಪ್ಪಂದವಾಗಿದೆ. ಈಗ ಎಫ್414 ಎಂಜಿನ್ಗಳನ್ನು ಎಚ್ಎಎಲ್ ಸಂಸ್ಥೆಯೇ ಜಿಇ ಸಹಾಯದೊಂದಿಗೆ ಭಾರತದಲ್ಲಿ ತಯಾರಿಸಲಿದೆ. ಇದರೊಂದಿಗೆ ಯುದ್ಧವಿಮಾನಗಳ ತಯಾರಿಕೆಯಲ್ಲಿ ಬಹುತೇಕ ಸ್ವಾವಲಂಬನೆ ಸಾಧನೆ ಆಗಲಿದೆ.
ಎಚ್ಎಎಲ್ ಷೇರುಬೆಲೆ ಏರಿಕೆ
ಅಮೆರಿಕದ ಜಿಇ ಏರೋಸ್ಪೇಸ್ ಸಂಸ್ಥೆ ಜೊತೆ ಒಪ್ಪಂದ ಆದ ಬಳಿಕ ಎಚ್ಎಎಲ್ ಸಂಸ್ಥೆಯ ಷೇರಿಗೆ ಇರುವ ಬೇಡಿಕೆ ಇನ್ನೂ ಹೆಚ್ಚಾಗುವಂತೆ ಕಾಣುತ್ತಿದೆ. ಮಾರ್ಚ್ ಕೊನೆಯ ವಾರದಿಂದ ಸತತವಾಗಿ ಏರಿಕೆ ಕಾಣುತ್ತಾ ಬರುತ್ತಿರುವ ಎಚ್ಎಎಲ್ ಷೇರುಬೆಲೆ ಜೂನ್ 23ರ ಬೆಳಗಿನ ವಹಿವಾಟಿನಲ್ಲಿ ಚಿಗರೆಯಂತೆ ಎಗರಿತ್ತು. ಜೂನ್ 22ರಂದು 3,753 ರೂ ಬೆಲೆ ಹೊಂದಿದ್ದ ಎಚ್ಎಎಲ್ ಷೇರು ಜೂನ್ 23ರಂದು ಬೆಳಗ್ಗೆ 9:30ಕ್ಕೆ 3858 ರುಪಾಯಿಗೆ ಜಿಗಿದಿತ್ತು. ನಂತರದ ಹೊತ್ತಿನಲ್ಲಿ ಅಚ್ಚರಿ ರೀತಿಯಲ್ಲಿ ಅದರ ಷೇರುಬೆಲೆ 3,700 ರೂಗಿಂತ ಕೆಳಗೆ ಇಳಿದಿದೆ.
ಇದನ್ನೂ ಓದಿ: ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಭಾರತ, ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಹೋರಾಟ; ಪಾಕ್ಗೆ ಪ್ರಧಾನಿ ಮೋದಿ ಪರೋಕ್ಷ ಚಾಟಿ
ಆದರೆ, ಕಳೆದ 6 ತಿಂಗಳಲ್ಲಿ ಅದರ ಷೇರುಬೆಲೆ ಶೇ. 50ಕ್ಕಿಂತಲೂ ಹೆಚ್ಚಾಗಿರುವುದು ಹೌದು. ಕಳೆದ 1 ತಿಂಗಳಿಂದಲೇ ಶೇ. 25ರಷ್ಟು ಹೆಚ್ಚಾಗಿರುವುದು ಗಮನಾರ್ಹ. ಈಗ ಜಿಇ ಜೊತೆ ಒಪ್ಪಂದವಾದ ಬಳಿಕ ಎಚ್ಎಎಲ್ ಷೇರುಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಬಹಳ ದಟ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Fri, 23 June 23