
ಬೆಂಗಳೂರು, ಸೆಪ್ಟೆಂಬರ್ 11: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯ ಮಾನ ಮರ್ಯಾದೆಯ ಪ್ರಶ್ನೆಯಾಗಿದ್ದ ಎಲ್ಸಿಎ ತೇಜಸ್ ಎಂಕೆ1ಎ ಯುದ್ಧ ವಿಮಾನಗಳ (LCA Tejas fighter jet) ಒಂದೊಂದೇ ತಯಾರಿಕೆ ಮತ್ತು ಡೆಲಿವರಿ ಸದ್ಯದಲ್ಲೇ ಶುರುವಾಗುವಂತೆ ತೋರುತ್ತಿದೆ. ತೇಜಸ್ ವಿಮಾನದ ತಯಾರಿಕೆಗೆ ಇದ್ದ ಅಡಚಣೆಯೊಂದು ನಿವಾರಣೆಯಾಗುತ್ತಿದೆ. ಈ ವಿಮಾನಕ್ಕೆ ಬೇಕಾಗಿರುವ ಎಂಜಿನ್ ಅನ್ನು ಅಮೆರಿಕದ ಜಿಇ ಸಂಸ್ಥೆ ಸರಬರಾಜು ಮಾಡುತ್ತಿದೆ. ಇಂದು ಗುರುವಾರ ಎಚ್ಎಎಲ್ ಮೂರನೇ ಜಿಇ-404 ಎಂಜಿನ್ (GE 404 engine) ಅನ್ನು ಪಡೆದಿದೆ.
ಸೆಪ್ಟೆಂಬರ್ ಕೊನೆಯಲ್ಲಿ ನಾಲ್ಕನೇ ಎಂಜಿನ್ ಸರಬರಾಜಾಗಲಿದೆ ಎಂದು ಎಚ್ಎಎಲ್ ಹೇಳಿಕೊಂಡಿದೆ. ಇದರೊಂದಿಗೆ, ಎಲ್ಸಿಎ ಎಂಕೆ1ಎ ಯುದ್ಧ ವಿಮಾನಗಳ ಡೆಲಿವರಿ ಕಾರ್ಯ ಸುಗಮಗೊಳ್ಳಲಿದೆ.
ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ
ಮಹಾರಾಷ್ಟ್ರದ ನಾಶಿಕ್ನಲ್ಲಿ ಎಚ್ಎಎಲ್ ತನ್ನ ಎಲ್ಸಿಎ ತೇಜಸ್ ಎಂಕೆ1ಎ ಯುದ್ಧ ವಿಮಾನದ ತಯಾರಿಕೆಗೆ ಹೊಸ ಘಟಕ ನಿರ್ಮಿಸಿದೆ. ಇದರಲ್ಲಿ ಜುಲೈನಲ್ಲೇ ಮೊದಲ ವಿಮಾನ ತಯಾರಿಕೆಗೊಂಡು ಬಿಡುಗಡೆ ಆಗಬೇಕಿತ್ತು. ಇನ್ನೂ ಆಗಿಲ್ಲ. ಎಂಜಿನ್ ಸಿಕ್ಕದೇ ಇರುವುದು, ದೇಶೀಯ ರಾಡಾರ್ ಅಳವಡಿಕೆಯಲ್ಲಿ ವಿಳಂಬ ಆಗಿರುವುದು, ಇದರಿಂದ ವಿಮಾನ ಬಿಡುಗಡೆ ನಿರೀಕ್ಷಿತ ದಿನದಂದು ಸಾಧ್ಯವಾಗಿಲ್ಲ.
ಈಗ ಮೂರನೇ ಜಿಇ ಎಂಜಿನ್ ಬಂದಿರುವುದರಿಂದ ಶೀಘ್ರದಲ್ಲೇ ತೇಜಸ್ ವಿಮಾನ ತಯಾರಾಗಿ ಹೊರಗೆ ಬರುವ ನಿರೀಕ್ಷೆ ಇದೆ. ಎಚ್ಎಎಲ್ ಬೆಂಗಳೂರಿನಲ್ಲಿ ಎರಡು, ಮತ್ತು ನಾಶಿಕ್ನಲ್ಲಿ ಒಂದು ಎಲ್ಸಿಎ ತಯಾರಿಕಾ ಘಟಕ ಹೊಂದಿದೆ. ನಾಶಿಕ್ನಲ್ಲಿ ವರ್ಷಕ್ಕೆ ಎಂಟು ಯುದ್ಧ ವಿಮಾನ ತಯಾರಾಗುವ ಸಾಮರ್ಥ್ಯದ ಘಟಕ ನಿರ್ಮಿಸಲಾಗಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್
ಎಲ್ ಅಂಡ್ ಟಿ ಸೇರಿದಂತೆ ಖಾಸಗಿ ಸಂಸ್ಥೆಗಳನ್ನೂ ತೇಜಸ್ ಯುದ್ದ ವಿಮಾನ ತಯಾರಿಕೆಗೆ ಎಚ್ಎಎಲ್ ಬಳಸಿಕೊಳ್ಳುತ್ತಿದೆ. ಇದರೊಂದಿಗೆ, ಎಚ್ಎಎಲ್ಗೆ ವರ್ಷಕ್ಕೆ 30 ತೇಜಸ್ ವಿಮಾನ ತಯಾರಿಸುವ ಸಾಮರ್ಥ್ಯ ಹೊಂದಿದೆ.
ಎಲ್ಸಿಎ ತೇಜಸ್ ಎಂಕೆ1 ವಿಮಾನಗಳಿಗೆ ಅಮೆರಿಕದ ಜಿಇ ಸಂಸ್ಥೆ ಎಂಜಿನ್ ಒದಗಿಸುತ್ತದೆ. ಒಟ್ಟು 99 ಎಂಜಿನ್ಗಳಿಗೆ ಎಚ್ಎಎಲ್ ಆರ್ಡರ್ ನೀಡಿದೆ. ಜಿಇ ಈಗಾಗಲೇ ಮೂರು ಎಂಜಿನ್ ನೀಡಿದೆ. ಈ ಹಣಕಾಸು ವರ್ಷದಲ್ಲಿ 12 ಎಂಜಿನ್ ಡೆಲಿವರಿ ನೀಡುವ ನಿರೀಕ್ಷೆ ಇದೆ. ಎಚ್ಎಎಲ್ ಈಗಾಗಲೇ ಲಭ್ಯ ಇರುವ ಎಂಜಿನ್ಗಳನ್ನೇ ಬಳಸಿ ಈ ವರ್ಷ 12 ವಿಮಾನಗಳನ್ನು ತಯಾರಿಸುವ ಗುರಿ ಇಟ್ಟುಕೊಂಡಿದೆ. ತೇಜಸ್ ಎಲ್ಸಿಎ ಎಂಕೆ1 ಯುದ್ಧವಿಮಾನದ ಸುಧಾರಿತ ಆವೃತ್ತಿ ಎಂಕೆ1ಎ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ