ನವದೆಹಲಿ, ಅಕ್ಟೋಬರ್ 17: ಕಳೆದ ಒಂದು ವರ್ಷದ ಅವಧಿಯಲ್ಲಿ 800 ಕೋಟಿ ಲಸಿಕೆ ಡೋಸ್ಗಳನ್ನು ತಯಾರಿಸಿ ವಿಶ್ವಾದ್ಯಂತ ಬಳಕೆ ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ವ್ಯಾಕ್ಸಿನ್ಗಳನ್ನು ಭಾರತದಲ್ಲೇ ತಯಾರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪುಣ್ಯಾ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ. ಅಂದರೆ, ಭಾರತದಲ್ಲಿ ಒಂದು ವರ್ಷದಲ್ಲಿ 400 ಕೋಟಿ ವ್ಯಾಕ್ಸಿನ್ ಡೋಸ್ಗಳನ್ನು ತಯಾರಿಸಲಾಗಿದೆ. ಅಮೆರಿಕ ಭಾರತ ಸ್ಟ್ರಾಟಿಜಿಕ್ ಪಾರ್ಟ್ನರ್ಶಿಪ್ ಫೋರಂನಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ವಾರ್ಷಿಕ ಇಂಡಿಯಾ ಲೀಡರ್ಶಿಪ್ ಸಮಿಟ್ನಲ್ಲಿ ಮಾತನಾಡುತ್ತಾ ಪುಣ್ಯ ಅವರು ಈ ಮಾಹಿತಿ ನೀಡಿದ್ದಾರೆ.
ವ್ಯಾಕ್ಸಿನ್ ಮಾತ್ರವಲ್ಲ, ಔಷಧ ತಯಾರಿಕೆಯಲ್ಲೂ ಭಾರತ ಸೈ ಎನಿಸಿದೆ. ಜಗತ್ತಿನಲ್ಲಿ ಅತಿಹೆಚ್ಚು ಔಷಧ ತಯಾರಿಸುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಜೆನೆರಿಕ್ ಮೆಡಿಸಿನ್ಗಳ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅಮೆರಿಕ ಸೇರಿದಂತೆ ಜಾಗತಿಕವಾಗಿ ಹಲವು ದೇಶಗಳ ಆರೋಗ್ಯ ಕ್ಷೇತ್ರಕ್ಕೆ ಭಾರತದ ಕೊಡುಗೆ ಗಮನಾರ್ಹವಾಗಿದೆ ಎಂದು ಪುಣ್ಯ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತವನ್ನು ಮಟ್ಟಹಾಕಲು ಚೀನಾದ ಜಲಾಸ್ತ್ರ? ವಿಶ್ವದ ಅತಿದೊಡ್ಡ ಹೈಡ್ರೊಪವರ್ ಪ್ರಾಜೆಕ್ಟ್ ಆದ್ರೆ ಏನು ಗತಿ?
ಅಮೆರಿಕದ ಎಫ್ಡಿಎ ಅನುಮೋದಿತ ಔಷಧ ತಯಾರಿಕೆ ಕೇಂದ್ರಗಳು ಭಾರತದಲ್ಲಿ ಸಾಕಷ್ಟಿವೆ. ಅಮೆರಿಕದ ಹೊರಗೆ ಇರುವ ಎಫ್ಡಿಎ ಅನುಮೋದಿತ ಫಾರ್ಮಾ ಘಟಕಗಳಲ್ಲಿ ಶೇ. 25ರಷ್ಟು ಯೂನಿಟ್ಗಳು ಭಾರತದಲ್ಲೇ ಇವೆ. ಇದು ಭಾರತದ ಔಷಧ ತಯಾರಿಕೆಯ ಉದ್ಯಮದ ಮಹತ್ವವನ್ನು ತೋರಿಸುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿಯಾದ ಆಕೆ ಅಭಿಪ್ರಾಯಪಟ್ಟಿದ್ದಾರೆ.
‘ಭಾರತೀಯ ಕಂಪನಿಗಳಿಂದ ತಯಾರಾಗಿ ಸರಬರಾಜಾಗುವ ಔಷಧಗಳಿಂದಾಗಿ 2022ರಲ್ಲಿ ಅಮೆರಿಕದ ಆರೋಗ್ಯ ಕ್ಷೇತ್ರಕ್ಕೆ 219 ಬಿಲಿಯನ್ ಡಾಲರ್ನಷ್ಟು (19,000 ಕೋಟಿ ರೂ ಅಂದಾಜು) ಹಣ ಉಳಿತಾಯ ಆಗಿದೆ. 2013ರಿಂದ 2022ರ ಅವಧಿಯಲ್ಲಿ ಆ ದೇಶಕ್ಕೆ 1.3 ಟ್ರಿಲಿಯನ್ ಡಾಲರ್ನಷ್ಟು ಹಣ ಉಳಿತಾಯ ಆಗಿದೆ ಎನ್ನುವ ಮಾಹಿತಿ ನನಗೆ ಸಿಕ್ಕಿದೆ,’ ಎಂದು ಪುಣ್ಯಾ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್, ಇನ್ಸ್ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಟೀಮ್ನಿಂದ ಉದ್ಯೋಗಿಗಳ ಲೇ ಆಫ್
ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯಲ್ಲಿನ ಅನಗತ್ಯ ನಿಯಮ ಹಾಗೂ ಕಾನೂನುಗಳನ್ನು ನಿವಾರಣೆ ಮಾಡುವ ಮೂಲಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ. ಇದರಿಂದ ಮೆಡಕಲ್ ಮತ್ತು ನರ್ಸಿಂಗ್ ಕಾಲೇಜುಗಲ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ಕಾಲೇಜುಗಳಲ್ಲಿ ದಾಖಲಾತಿಗಳೂ ಕೂಡ ಹೆಚ್ಚಿವೆ. ತತ್ಪರಿಣಾಮವಾಗಿ ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳಿಗೆ ಪೂರೈಸಲು ಸಾಧ್ಯವಾಗುತ್ತಿದೆ ಎಂದು ಪುಣ್ಯಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 17 October 24