ಹಾಸನ: ಇಲ್ಲಿನ ‘ಹಾಸನ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಅಥವಾ ಹಾಮುಲ್ (HAMUL)’ನಿಂದ ಮಾಲ್ಡೀವ್ಸ್ಗೆ ಯುಎಚ್ಟಿ ಹಾಲು (UHT Milk) ರಫ್ತು (Export) ಆರಂಭಿಸಲಾಗಿದೆ. ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ (HD Revanna) ರಫ್ತು ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಹೈನುಗಾರಿಕೆ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಹಾಮುಲ್ ಇದೀಗ ಮಾಲ್ಡೀವ್ಸ್ಗೆ ಹಾಲು ರಫ್ತು ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಶೀಘ್ರದಲ್ಲೇ ದುಬೈಗೂ ಹಾಲು ರಫ್ತು ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹಾಮುಲ್ ಮೂಲಗಳು ತಿಳಿಸಿವೆ.
ದೀರ್ಘಾವಧಿಗೆ ಬಾಳಿಕೆ ಬರುವಂತೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ಯಾಕ್ ಮಾಡಲಾದ ಹಾಲನ್ನು ಯುಎಚ್ಟಿ ಹಾಲು ಎಂದು ಕರೆಯಲಾಗುತ್ತದೆ. ಇದು ಸುಮಾರು 6 ತಿಂಗಳ ವರೆಗೆ ಬಾಳಿಕೆ ಬರುತ್ತದೆ ಎನ್ನಲಾಗಿದೆ.
ದೇಶದ ಮೊದಲ ಪೆಟ್ ಬಾಟಲ್ ಘಟಕ ಸ್ಥಾಪನೆ, ಐಸ್ ಕ್ರೀಂ ಘಟಕ ಹಾಗೂ ಇನ್ನಿತರ ಕ್ರಮಗಳ ಮೂಲಕ ಮೌಲ್ಯವರ್ದಿತ ಹಾಲು ಉತ್ಪನ್ನಗಳನ್ನು ತಯಾರಿಸಿ ಹಾಲಿಗೆ ಹೆಚ್ಚಿನ ಮಾರುಕಟ್ಟೆ ದೊರೆಯುವಂತೆ ಮಾಡುವಲ್ಲಿ ಹಾಮುಲ್ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಯುಎಚ್ಟಿ ಹಾಲು ರಫ್ತಿನ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಹಾಸನದ ಹೈನುಗಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಏಷ್ಯಾ ಖಂಡದ ಇತರ ದೇಶಗಳಿಗೂ ರಫ್ತು
ಹಾಸನ ಹಾಲು ಒಕ್ಕೂಟದ ಯುಎಚ್ಟಿ ಹಾಲನ್ನು ಏಷ್ಯಾ ಖಂಡದ ಇತರ ದೇಶಗಳಿಗೆ ರಫ್ತು ಮಾಡುವ ಸಂಬಂಧ ಕರ್ನಾಟಕ ಹಾಲು ಮಂಡಳಿ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಹಾಮುಲ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Milk Price: ನಂದಿನಿ ಹಾಲಿನ ಬೆಲೆ ಹೆಚ್ಚಳ: ಸಭೆ ಬಳಿಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ
ಒಕ್ಕೂಟವು 2022 ರ ಅಕ್ಟೋಬರ್ ಅಂತ್ಯದವರೆಗೆ ಸುಮಾರು 15 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಹಾಸನ ಹಾಲು ಒಕ್ಕೂಟದಲ್ಲಿ ಸ್ಥಾಪಿಸಿರುವ ಪೆಟ್ ಬಾಟಲ್ ಘಟಕದಲ್ಲಿ ಸುಮಾರು 9 ಮಾದರಿಯ ಸುವಾಸಿತ ಹಾಲನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. 200 ಎಂಎಲ್ನ ‘ಹರ್ಬಲ್ ಟೇಸ್ಟ್ ಯುಎಚ್ಟಿ ಹಾಲು’ ಉತ್ಪಾದನೆ ಮಾಡಲಾಗುತ್ತಿದೆ. ಈ ಹರ್ಬಲ್ ಮಿಲ್ಕ್ನಲ್ಲಿ ಅಶ್ವಗಂಧ, ತುಳಸಿ, ಶುಂಠಿ, ಲವಂಗ, ಮೆಣಸು, ಅರಿಶಿನ ಇವುಗಳು ಒಳಗೊಂಡಿದ್ದು, ಆರೋಗ್ಯಕ್ಕೂ ಪೂರಕವಾಗಿರಲಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ರೇವಣ್ಣ ತಿಳಿಸಿದ್ದಾರೆ.
ನಿತ್ಯ 10 ಲಕ್ಷ ಲೀಟರ್ಗೂ ಹೆಚ್ಚು ಹಾಲು ಸಂಗ್ರಹ
ಹಾಸನ ಜಿಲ್ಲೆಯ ಹಾಲು ಒಕ್ಕೂಟ ನಿತ್ಯವೂ 10.15 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇದರಲ್ಲಿ ಮೂರು ಲಕ್ಷದಷ್ಟು ಹಾಲು ನಿತ್ಯ ಬಳಕೆಯಾಗುತ್ತಿದ್ದರೆ ಒಂದು ಲಕ್ಷ ಲೀಟರ್ ಹಾಲನ್ನು ಬೇರೆ ಒಕ್ಕೂಟಕ್ಕೆ ನೀಡಲಾಗುತ್ತಿದೆ. ಇನ್ನುಳಿದ ಹಾಲನ್ನು ಮೌಲ್ಯವರ್ದಿತ ಉತ್ಪನ್ನಗಳಾದ ಮೊಸರು, ತುಪ್ಪ, ಸುವಾಸಿತ ಹಾಲು, ಯುಎಚ್ಟಿ ಹಾಲು ಉತ್ಪಾದಿಸಲಾಗುತ್ತಿದೆ ಎಂದು ಹಾಮುಲ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Tue, 13 December 22