McDonald’s: ಭಾರತದಲ್ಲಿ 5,000 ಸಿಬ್ಬಂದಿ ನೇಮಕಾತಿ ಮಾಡಲಿದೆ ಮೆಕ್ಡೊನಾಲ್ಡ್ಸ್
ಮೆಕ್ಡೊನಾಲ್ಡ್ಸ್ ಭಾರತದಲ್ಲಿ ಅತಿದೊಡ್ಡ ರೆಸ್ಟೋರೆಂಟ್ ಅನ್ನು ಗುವಾಹಟಿಯಲ್ಲಿ ಸೋಮವಾರ ಆರಂಭಿಸಿದೆ. ಇದು 6,700 ಚದರ ಅಡಿಯಲ್ಲಿ ವ್ಯಾಪಿಸಿದ್ದು, ಒಂದು ಬಾರಿಗೆ 220 ಜನ ಕುಳಿತುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ.
ನವದೆಹಲಿ: ಉದ್ಯೋಗ ಕಡಿತ, ಉದ್ಯೋಗಿಗಳ ವಜಾಕ್ಕೆ (Layoffs) ಸಂಬಂಧಿಸಿದ ಸುದ್ದಿಯೇ ಎಲ್ಲೆಡೆ ಕೇಳಿಬರುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಸುಮಾರು 5,000 ಸಿಬ್ಬಂದಿ ನೇಮಕಾತಿಗೆ ಮೆಕ್ಡೊನಾಲ್ಡ್ಸ್ (McDonald’s) ಚಿಂತನೆ ನಡೆಸಿದೆ. ಉತ್ತರ ಮತ್ತು ಪೂರ್ವ ಭಾರತದಲ್ಲಿ (North and East India) ಮುಂದಿನ ಮೂರು ವರ್ಷಗಳಲ್ಲಿ ಮಳಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು. ಇದರೊಂದಿಗೆ ಈ ವಲಯದಲ್ಲಿ ಸುಮಾರು 300 ಮಳಿಗೆಗಳು ಆರಂಭವಾಗಲಿವೆ. ಇವುಗಳಿಗೆ ಸುಮಾರು 5,000 ಮಂದಿಯ ನೇಮಕಾತಿಗೆ ಚಿಂತನೆ ನಡೆಸಲಾಗಿದೆ ಎಂದು ಉತ್ತರ ಮತ್ತು ಪೂರ್ವ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ರಂಜನ್ ತಿಳಿಸಿದ್ದಾರೆ.
ಮೆಕ್ಡೊನಾಲ್ಡ್ಸ್ ಭಾರತದಲ್ಲಿ ಅತಿದೊಡ್ಡ ರೆಸ್ಟೋರೆಂಟ್ ಅನ್ನು ಗುವಾಹಟಿಯಲ್ಲಿ ಸೋಮವಾರ ಆರಂಭಿಸಿದೆ. ಇದು 6,700 ಚದರ ಅಡಿಯಲ್ಲಿ ವ್ಯಾಪಿಸಿದ್ದು, ಒಂದು ಬಾರಿಗೆ 220 ಜನ ಕುಳಿತುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಕಂಪನಿಯ ಮಳಿಗೆಗಳ ವಿಸ್ತರಣೆ ಯೋಜನೆಯ ಭಾಗವಾಗಿ ಈ ರೆಸ್ಟೋರೆಂಟ್ ಅನ್ನು ಆರಂಭಿಸಲಾಗಿದೆ. ಕಂಪನಿಯು ಕ್ಷಿಪ್ರ ಬೆಳವಣಿಗೆಯ ಹಾದಿಯಲ್ಲಿದ್ದು, ರಾಜ್ಯಗಳಲ್ಲಿ ಕಾರ್ಯಾಚರಣೆ ವಿಸ್ತರಣೆ ಎದುರುನೋಡುತ್ತಿದೆ ಎಂದು ರಾಜೀವ್ ರಂಜನ್ ಹೇಳಿದ್ದಾರೆ.
‘ಎಲ್ಲ ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ ಉದ್ಯಮವನ್ನು ಬೆಳೆಸುವತ್ತ ದೃಷ್ಟಿ ನೆಟ್ಟಿದ್ದೇವೆ’ ಎಂದು ಅವರು ಹೇಳಿದ್ದಾರೆ. ಮೆಕ್ಡೊನಾಲ್ಡ್ಸ್ನ ಈ ಹಿಂದಿನ ಪಾಲುದಾರರ ಜತೆಗಿನ ಕಾನೂನು ಸಂಘರ್ಷಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ಇದನ್ನೂ ಓದಿ: Layoffs: ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವ ಸ್ವಿಗ್ಗಿ, ವೇದಾಂತು, ಅಡೋಬ್
ಕಂಪನಿಯು ಉತ್ತರ ಮತ್ತು ಪೂರ್ವ ಭಾರತದಲ್ಲಿ ಸದ್ಯ 156 ರೆಸ್ಟೋರೆಂಟ್ಗಳನ್ನು ಹೊಂದಿದೆ. ಇದನ್ನು ಮುಂದಿನ ಮೂರು ವರ್ಷಗಳಲ್ಲಿ ದ್ವಿಗುಣಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಉದ್ಯೋಗಿಗಳ ಸಂಖ್ಯೆಯೂ ದುಪ್ಪಟ್ಟಾಗಲಿದೆ ಎಂದು ರಂಜ್ ಹೇಳಿದ್ದಾರೆ.
ಗುವಾಹಟಿ ಈಶಾನ್ಯ ಭಾರತದ ಹೆಬ್ಬಾಗಿಲಾಗಿದೆ. ಹೀಗಾಗಿ ಇದು ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ರೆಸ್ಟೋರೆಂಟ್ ಆರಂಭಿಸಿರುವುದು ನಮ್ಮ ವಿಸ್ತರಣೆ ಯೋಜನೆಗೆ ಪೂರಕವಾಗಲಿದೆ. ಈಶಾನ್ಯ ರಾಜ್ಯಗಳಲ್ಲಿ ಹಲವು ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕವಾಗಿ 20,000 ಉದ್ಯೋಗಿಗಳನ್ನು ವಜಾಗೊಳಿಸಲು ಅಮೆಜಾನ್ ಮುಂದಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಅದರ ಬೆನ್ನಲ್ಲೇ, ವೇದಾಂತು ಹಾಗೂ ಅಡೋಬ್ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಮುಂದಾಗಿರುವ ಬಗ್ಗೆ ವರದಿಯಾಗಿತ್ತು. ಪದೇಪದೇ ಉದ್ಯೋಗಿಗಳ ವಜಾ ಸುದ್ದಿ ಕೇಳಿಬರುತ್ತಿರುವ ಸಂದರ್ಭದಲ್ಲೇ ಮೆಕ್ಡೊನಾಲ್ಡ್ಸ್ ನೇಮಕಾತಿಗೆ ಮುಂದಾಗಿರುವುದು ಭರವಸೆ ಮೂಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ