ಖರ್ಗೆ ಕಣ್ಣಿಗೆ ‘ಕಾಲ್ತುಳಿತ’ ಕಾಣುತ್ತೆ ಹೊರತು ಕಾರ್ಮಿಕ ಸಂಖ್ಯೆ ಹೆಚ್ಚಾಗಿದ್ದು ಕಾಣಲ್ಲ: ಸಚಿವ ಹರ್ದೀಪ್ ಸಿಂಗ್

|

Updated on: Nov 03, 2024 | 11:49 AM

Hardeep Singh Puri bats against allegations of Mallikarjuna Kharge: ಮಲ್ಲಿಕಾರ್ಜುನ ಖರ್ಗೆ ಅವರ ಕಣ್ಣಿಗೆ ಕಾಲ್ತುಳಿತ ಘಟನೆಗಳು ಮಾತ್ರ ಕಾಣುತ್ತವೆ. ಆದರೆ, ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿರುವುದು, ನಿರುದ್ಯೋಗ ದರ ಕಡಿಮೆ ಆಗಿರುವುದು ಕಾಣುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ತಮ್ಮ ಪಕ್ಷದ ಶಹಜಾದನ ನಿರುದ್ಯೋಗವನ್ನೇ ಅವರು ಸಾರ್ವತ್ರಿಕವೆಂಬಂತೆ ಭಾವಿಸಿದ್ದಾರೆ ಎಂದು ಖರ್ಗೆ ವಿರುದ್ಧ ಪುರಿ ವಾಗ್ದಾಳಿ ನಡೆಸಿದ್ದಾರೆ.

ಖರ್ಗೆ ಕಣ್ಣಿಗೆ ‘ಕಾಲ್ತುಳಿತ’ ಕಾಣುತ್ತೆ ಹೊರತು ಕಾರ್ಮಿಕ ಸಂಖ್ಯೆ ಹೆಚ್ಚಾಗಿದ್ದು ಕಾಣಲ್ಲ: ಸಚಿವ ಹರ್ದೀಪ್ ಸಿಂಗ್
ಹರ್ದೀಪ್ ಸಿಂಗ್ ಪುರಿ
Follow us on

ನವದೆಹಲಿ, ನವೆಂಬರ್ 3: ಕೇಂದ್ರದಲ್ಲಿ ಸುಳ್ಳು, ಮೋಸ, ಲೂಟಿ, ಪ್ರಚಾರಪ್ರಿಯ ಸರ್ಕಾರ ಇದೆ ಎಂದು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೇಂದ್ರ ಬಿಜೆಪಿ ನಾಯಕರು ಸಾಲುಸಾಲಾಗಿ ತಿರುಗೇಟು ನೀಡುತ್ತಿದ್ದಾರೆ. ಈ ಪ್ರತಿಟೀಕೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಧ್ವನಿಗೂಡಿಸಿದ್ದಾರೆ. ನಕಲಿ ದತ್ತಾಂಶ, ಸುಳ್ಳುಗಳ ಆಧಾರದ ಮೇಲೆ ಹಿಟ್ ಅಂಡ್ ರನ್ ಮಾಡುವಂತಹ ಸೋಷಿಯಲ್ ಮೀಡಿಯಾ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಅದರ ಅತ್ಯಂತ ಹಿರಿಯ ನಾಯಕರೂ ಕೂಡ ಸತ್ಯಾಂಶ ಪರಿಶೀಲಿಸದೆಯೇ ಸಾರ್ವಜನಿಕವಾಗಿ ಮಾತನಾಡುತ್ತಾರೆ ಎಂದು ಆರೋಪಿಸಿರುವ ಹರ್ದೀಪ್ ಸಿಂಗ್, ಕೇಂದ್ರ ಸರ್ಕಾರದ ಕೆಲ ಸಾಧನೆಗಳ ಮಾಹಿತಿ ಹಂಚಿಕೊಂಡಿದ್ದಾರೆ.

‘ಖರ್ಗೆ ಅವರಿಗೆ ಕಾಲ್ತುಳಿತಗಳು ಕಾಣುತ್ತವೆ. ಆದರೆ 2017-23ರವರೆಗೆ ಕಾರ್ಮಿಕ ಸಂಖ್ಯೆಯ ಪರಿಮಾಣ ಶೇ. 26ರಷ್ಟು ಹೆಚ್ಚಾಗಿರುವುದು ಕಣ್ಣಿ ಬೀಳುವುದಿಲ್ಲ. ಅವರು ತಪ್ಪಾದ ಸ್ಥಳಗಳಲ್ಲಿ ಶೋಧಿಸಿ ನಕಲಿ ಮಾಹಿತಿ ಪಡೆಯುತ್ತಿರುವುದು ಬಹಳ ಸ್ಪಷ್ಟವಾಗಿದೆ. ಮುರುಟಿಕೊಂಡು ಬೀಳುತ್ತಿರುವ ಪಕ್ಷವನ್ನು ಹಿಡಿದಿಡುವ ಕೆಲಸದಲ್ಲಿ ಖರ್ಗೆ ಮುಳುಗಿಹೋದಂತಿದೆ. ಅವರ ಸಲಹೆಗಾರರು ಹೇಳೋ ಸುಳ್ಳನ್ನೆಲ್ಲಾ ನಂಬುತ್ತಾರೆ. ತಮ್ಮ ಪಕ್ಷದ ಪ್ರವಾಸೀ ಶೆಹಜಾದನ (ರಾಹುಲ್ ಗಾಂಧಿ) ನಿರುದ್ಯೋಗವನ್ನೇ ಅವರು ಸಾರ್ವತ್ರಿಕಗೊಳಿಸಿದ್ದಾರೆ,’ ಎಂದು ಹರ್ದೀಪ್ ಸಿಂಗ್ ಕುಹಕವಾಡಿದ್ದಾರೆ.

ಪೇಪರ್ ಲೀಕ್ ಆರೋಪದ ಬಗ್ಗೆ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ಹಿಂದೆ ಇದ್ದ ಕಾಂಗ್ರೆಸ್ ಪ್ರಧಾನಿಗೆ ಯಾವ ಮಾಹಿತಿಯೂ ನೀಡಲಾಗುತ್ತಿರಲಿಲ್ಲ. ಈಗಿನ ಪಕ್ಷದ ಅಧ್ಯಕ್ಷರಿಗೂ ಅದೇ ಸ್ಥಿತಿ. ಪಕ್ಷದ ಅಧಿಕಾರದ ವೇಳೆ ನಡೆದ ಹಲವು ಹಗರಣಗಳಲ್ಲಿ ಪೇಪರ್ ಲೀಕ್ ಹಗರಣಗೂ ಇವೆ ಎನ್ನುವ ವಿಚಾರ ಖರ್ಗೆಯವರಿಗೆ ಇದ್ದಂತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ನಿಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಧ್ವನಿ ಎತ್ತಿ ಮಲ್ಲಿಕಾರ್ಜುನ್​ ಖರ್ಗೆ: ಲೆಹರ್ ಸಿಂಗ್ ಸಿರೋಯಾ

ಹರ್ದೀಪ್ ಸಿಂಗ್ ಬಿಚ್ಚಿಟ್ಟ ಎನ್​ಡಿಎ ಸರ್ಕಾರದ ಕೆಲ ಸಾಧನೆಗಳ ಪಟ್ಟಿ

  • 2016-17ರಿಂದ 2022-23ರಲ್ಲಿ 17 ಕೋಟಿ ಉದ್ಯೋಗಗಳ ಸೇರ್ಪಡೆಯಾಗಿದೆ. ಉದ್ಯೋಗವು ಶೇ. 36ರಷ್ಟು ಹೆಚ್ಚಾಗಿದೆ.
  • ನಿರುದ್ಯೋಗ ದರವು 2022-23ರಲ್ಲಿ ಶೇ. 3.2ಕ್ಕೆ ಇಳಿಕೆ ಆಗಿದೆ.
  • 15ರಿಂದ 29 ವರ್ಷದ ವಯೋಮಾನದ ಯುವಜನರ ನಿರುದ್ಯೋಗ ದರ 2017-18ರಲ್ಲಿ ಶೇ. 17.8ರಷ್ಟಿದ್ದದ್ದು 2022-23ರಲ್ಲಿ ಶೇ. 10ಕ್ಕೆ ಇಳಿದಿದೆ.
  • ಭಾರತದ ಜಿಡಿಪಿ ಸರಾಸರಿಯಾಗಿ ಶೇ. 6.5ರ ದರದಲ್ಲಿ ಬೆಳೆದಿದೆ.
  • 2014ರಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಈಗ ಅತಿ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ.
  • ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಇದ್ದರೂ ಕ್ರಮೇಣವಾಗಿ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗೆ ವರ್ಗಾವಣೆ ಆಗುತ್ತಿದೆ.
  • ಇಪಿಎಫ್​ಒ ಸದಸ್ಯರ ಸಂಖ್ಯೆ 2024ರಲ್ಲಿ 1.31 ಕೋಟಿ ತಲುಪಿದೆ. ಸ್ವತಂತ್ರ ಕೆಲಸಗಾರರ ಸಂಖ್ಯೆ 2029-30ರಲ್ಲಿ 2.35 ಕೋಟಿಗೆ ಹೆಚ್ಚುವ ನಿರೀಕ್ಷೆ ಇದೆ.
  • ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 81 ಸರ್ಕಾರಿ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ (ಮಾರ್ಕೆಟ್ ಕ್ಯಾಪ್) ಕಳೆದ ಮೂರು ವರ್ಷದಲ್ಲಿ ಶೇ. 225ರಷ್ಟು ಹೆಚ್ಚಾಗಿದೆ.
  • 2023ರಲ್ಲಿ ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದ ಹಣದುಬ್ಬರ 1.4 ಪ್ರತಿಶತ ಅಂಕಗಳಷ್ಟು ಕಡಿಮೆ ಇದೆ.

ಇದನ್ನೂ ಓದಿ: ಸುಳ್ಳು, ವಂಚನೆ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರ: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ


ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆಗಳಿಂದಾಗಿ ಕೆಲ ರಾಜ್ಯಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ಆರೋಪಿಸಿದ್ದರು. ಅದಕ್ಕೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದಲ್ಲಿ ಸುಳ್ಳು, ವಂಚನೆ, ಲೂಟಿ, ಮೋಸ, ಪ್ರಚಾರಪ್ರಿಯ ಸರ್ಕಾರ ಇದೆ ಎಂದು ಲೇವಡಿ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Sun, 3 November 24