HCL Technologies FY21 Q4 Results; ಎಚ್​ಸಿಎಲ್ ವಿಶೇಷ ಮಧ್ಯಂತರ ಡಿವಿಡೆಂಡ್ ತಲಾ 10 ರೂ. ಘೋಷಣೆ

|

Updated on: Apr 23, 2021 | 11:34 PM

ಎಚ್​ಸಿಎಲ್ ಟೆಕ್ನಾಲಜೀಸ್​ನಿಂದ 2020-21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಫಲಿತಾಂಶವನ್ನು ಘೋಷಿಸಲಾಗಿದೆ. ಒಟ್ಟಾರೆ ನಿವ್ವಳ ಲಾಭ ಶೇ 6.1ರಷ್ಟು ಇಳಿಕೆಯಾಗಿ, ರೂ. 2,962 ಕೋಟಿಯನ್ನು ಮುಟ್ಟಿದೆ.

HCL Technologies FY21 Q4 Results; ಎಚ್​ಸಿಎಲ್ ವಿಶೇಷ ಮಧ್ಯಂತರ ಡಿವಿಡೆಂಡ್ ತಲಾ 10 ರೂ. ಘೋಷಣೆ
ಪ್ರಾತಿನಿಧಿಕ ಚಿತ್ರ
Follow us on

ಎಚ್​ಸಿಎಲ್ ಟೆಕ್ನಾಲಜೀಸ್​ನಿಂದ ಶುಕ್ರವಾರದಂದು 2021ರ ಜನವರಿಯಿಂದ- ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಒಟ್ಟಾರೆ ನಿವ್ವಳ ಲಾಭ ಶೇ 6.1ರಷ್ಟು ಇಳಿಕೆಯಾಗಿ, ರೂ. 2,962 ಕೋಟಿಯನ್ನು ಮುಟ್ಟಿದೆ. ಇನ್ನು ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇ 25.6ರಷ್ಟು ಲಾಭ ಇಳಿಕೆ ಆಗಿದೆ. ಅಂದಹಾಗೆ 2020- 21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಏನು ಲಾಭ ಬಂದಿದೆಯೋ, ಅದು ಬಹಳ ಮಹತ್ವದ್ದು ಎನಿಸಿಕೊಂಡಿದೆ.

ಏಕೆಂದರೆ, ಒಂದು ಸಲದ ಬೋನಸ್ 728 ಕೋಟಿ ರೂಪಾಯಿ ಅಥವಾ ರೂ. 575 ಕೋಟಿ ರೂಪಾಯಿ ನಿವ್ವಳ ತೆರಿಗೆಯನ್ನು ಮಾರ್ಚ್​ ತಿಂಗಳಲ್ಲಿ ಪಾವತಿಸಲಾಗಿದೆ ಎಂದು ಎಚ್​ಸಿಎಲ್ ಟೆಕ್ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಬೋನಸ್ ಸೇರಿಸಿಕೊಂಡಿದ್ದರೆ ಕಂಪೆನಿಯ ಲಾಭ ರೂ. 2,387 ಕೋಟಿ ಆಗಿರುತ್ತಿತ್ತು.

ಎಚ್​ಸಿಎಲ್​ ಕಂಪೆನಿಯ ಆದಾಯ ಕಳೆದ ವರ್ಷಕ್ಕಿಂತ ಶೇ 5.7ರಷ್ಟು ಹೆ್ಚ್ಚಳವಾಗಿ ರೂ. 19,642 ಕೋಟಿ ಆಗಿದೆ. ಇನ್ನು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇ 1.8ರಷ್ಟು ಜಾಸ್ತಿ ಆಗಿದೆ. FY21 ಹಣಕಾಸು ವರ್ಷದಲ್ಲಿ ಎಚ್​ಸಿಎಲ್ ಟೆಕ್​ ನಿವ್ವಳ ಲಾಭ ಅದರ ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇಕಡಾ 17.6ರಷ್ಟು ಹೆಚ್ಚಾಗಿದೆ. ಇನ್ನು ಆದಾಯ ಶೇ 6.7ರಷ್ಟು ಮೇಲೇರಿ ರೂ. 75,379 ಕೋಟಿಯಾಗಿದೆ. FY22ರಲ್ಲಿ ಆದಾಯ ಬೆಳವಣಿಗೆ ಎರಡಂಕಿ ದಾಟಬಹುದು ಎಂಬ ನಿರೀಕ್ಷೆ ಎಚ್​ಸಿಎಲ್​ಗೆ ಇದೆ.

“ಜಾಗತಿಕ ಆರ್ಥಿಕತೆ ಚೇತರಿಕೆ ಕಾಣಿಸಿಕೊಳ್ಳುತ್ತಿದ್ದಂತೆ ನಾವೆಲ್ಲ ಈ ಬಿಕ್ಕಟ್ಟಿನಿಂದ ಮೇಲೇಳುತ್ತೇವೆ. ಭವಿಷ್ಯದ ಸವಾಲುಗಳನ್ನು ಮುಟ್ಟಲು ಎಚ್​ಸಿಎಲ್ ಇನ್ನಷ್ಟು ಉತ್ತಮವಾಗಿ ಸಜ್ಜಾಗಿದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಆವಿಷ್ಕಾರ ಮತ್ತು ಹೊಸ ಅನ್ವೇಷಣೆಗಳ ಜತೆಜತೆಗೆ ಮಾನವೀಯ ಮೌಲ್ಯಗಳೊಂದಿಗೆ ನಾವು ಸಜ್ಜಾಗಿದ್ದೇವೆ. ನಮ್ಮ ಉದ್ಯಮ ಗುರಿಯನ್ನು ತಲುಪುತ್ತೇವೆ. ನಾವು ಎಲ್ಲಿ ಕೆಲಸ ಮಾಡುತ್ತೇವೋ ಅಲ್ಲಿನ ಸಾಮಾಜಿಕ- ಆರ್ಥಿಕ ಬೆಳವಣಿಗೆ ಜತೆಗೆ ಅದು ಹೊಂದಿಕೊಂಡಿದೆ,” ಎಂದು ಎಚ್​ಸಿಎಲ್​ ಟೆಕ್ ಅಧ್ಯಕ್ಷ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ಶಿವ್ ನಾಡಾರ್ ಹೇಳಿದ್ದಾರೆ.

ಈ ತ್ರೈಮಾಸಿಕದಲ್ಲಿ ಕಂಪೆನಿಗೆ ಅತಿ ಹೆಚ್ಚು ಹೊಸ ವ್ಯವಹಾರಗಳು, ಅಂದರೆ 3.1 ಬಿಲಿಯನ್ (310 ಕೋಟಿ) ಅಮೆರಿಕನ್ ಡಾಲರ್​ನಷ್ಟು ಬಂದಿವೆ. ಇದರ ಜತೆಗೆ ಅತಿ ದೊಡ್ಡ ಪ್ರಮಾಣದಲ್ಲಿ ಕೆಲಸಗಳು ಬರುವುದು ಅಂತಿಮವಾಗಬೇಕಿದೆ ಎಂದು ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಸಿ. ವಿಜಯ್​ಕುಮಾರ್ ಹೇಳಿದ್ದಾರೆ. ಎಚ್​ಸಿಎಲ್​ ಟೆಕ್​ನಿಂದ ಮೊದಲ ಮಧ್ಯಂತರ ಲಾಭಾಂಶ ಪ್ರತಿ ಷೇರಿಗೆ 6 ರೂಪಾಯಿ ಘೋಷಣೆ ಮಾಡಲಾಗಿದೆ. ಮತ್ತು FY22ಕ್ಕೆ ವಿಶೇಷ ಮಧ್ಯಂತರ ಡಿವಿಡೆಂಡ್ ಪ್ರತಿ ಷೇರಿಗೆ 10 ರೂಪಾಯಿ ಘೋಷಿಸಲಾಗಿದೆ. ಶುಕ್ರವಾರದ ದಿನಾಂತ್ಯಕ್ಕೆ ಬಿಎಸ್​ಇಯಲ್ಲಿ ಎಚ್​ಸಿಎಲ್​ ಟೆಕ್ ಕಂಪೆನಿ ಷೇರಿನ ಬೆಲೆ ರೂ. 955.80 ಇತ್ತು.

ಇದನ್ನೂ ಓದಿ: ಇನ್ಫೋಸಿಸ್ ಲಾಭದಲ್ಲಿ ಶೇ 17ರಷ್ಟು ಏರಿಕೆ; ಪ್ರತಿ ಷೇರಿಗೆ 15 ರೂ. ಡಿವಿಡೆಂಡ್, 9,200 ಕೋಟಿ ತನಕ ಷೇರು ಬೈಬ್ಯಾಕ್

ಇದನ್ನೂ ಓದಿ: TCS FY21 Q4 results: ಟಿಸಿಎಸ್ ಲಾಭ ರೂ. 9246 ಕೋಟಿ; ಪ್ರತಿ ಷೇರಿಗೆ ತಲಾ 15 ರೂ. ಡಿವಿಡೆಂಡ್

(HCL Technologies announced FY21 Q4 results consolidated net profit of Rs 2962 crore)