HCL Technologies Shiv Nadar: ಎಚ್‌ಸಿಎಲ್ ಟೆಕ್ನಾಲಜೀಸ್ ಎಂ.ಡಿ. ಹುದ್ದೆಯಿಂದ ಕೆಳಗಿಳಿದ ಶಿವ್ ನಾಡರ್
ಎಚ್‌ಸಿಎಲ್ ಟೆಕ್ನಾಲಜೀಸ್ ಚೀಫ್ ಸ್ಟ್ರಾಟೆಜಿ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿವ ನಾಡಾರ್ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ.

ಎಚ್‌ಸಿಎಲ್ ಟೆಕ್ನಾಲಜೀಸ್ ಸೋಮವಾರ ಘೋಷಣೆ ಮಾಡಿರುವ ಪ್ರಕಾರ, ಚೀಫ್ ಸ್ಟ್ರಾಟೆಜಿ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿವ್ ನಾಡರ್ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ ಎಂದು ಎಂದು ಪ್ರಕಟಿಸಿದೆ. ಆದರೂ ಅವರನ್ನು ಈಗ ಮಂಡಳಿಯ ಗೌರವಾಧ್ಯಕ್ಷ ಮತ್ತು ಸ್ಟ್ರಾಟೆಜಿ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. “ಸಂಭಾವನೆ ಪಾವತಿ ಅಥವಾ ಈ ಪಾತ್ರದ ಅಡಿಯಲ್ಲಿ ಯಾವುದೇ ಸೌಲಭ್ಯಗಳನ್ನು ಒದಗಿಸುವುದು ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ,” ಎಂದು ಮಂಡಳಿ ಹೇಳಿದೆ. ಕಂಪೆನಿಯ ನಿರ್ದೇಶಕರ ಮಂಡಳಿಯು ಹಾಲಿ ಅಧ್ಯಕ್ಷ ಮತ್ತು ಸಿಇಒ ಸಿ. ವಿಜಯಕುಮಾರ್ ಅವರನ್ನು ಜುಲೈ 20, 2021ರಿಂದ ಜಾರಿಗೆ ಬರುವಂತೆ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಿದೆ.
“ಶಿವ್ ನಾಡರ್ ಭಾರತದ ಕಂಪ್ಯೂಟಿಂಗ್ ಮತ್ತು ಐಟಿ ಉದ್ಯಮದ ಪ್ರವರ್ತಕರಲ್ಲಿ ಒಬ್ಬರು. 1976ರಲ್ಲಿ ಅವರು ಎಚ್‌ಸಿಎಲ್ ಸಮೂಹವನ್ನು ಸ್ಥಾಪಿಸಿದರು. ಕಂಪ್ಯೂಟಿಂಗ್ ಕ್ರಾಂತಿಯನ್ನು ಭಾರತದ ಮೂಲ ಸ್ಟಾರ್ಟ್ಅಪ್ ಆಗಿ ಮುನ್ನಡೆಸಿದರು. ಜಾಗತಿಕ ಐಟಿ ಲ್ಯಾಂಡ್ಸ್ಕೇಪ್ ಬದಲಾವಣೆಗಳೊಂದಿಗೆ ಕಳೆದ 45 ವರ್ಷಗಳಿಂದ ಅವರ ಮಾರ್ಗದರ್ಶನದಲ್ಲಿ ಎಚ್‌ಸಿಎಲ್ ಅಲೆಗಳನ್ನು ದಾಟಿ ಸಾಗುತ್ತಿದೆ,” ಎಚ್‌ಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಶಿವ್ ನಾಡರ್ ಅವರನ್ನು 2015ರಲ್ಲಿ ಫೋರ್ಬ್ಸ್ ಉನ್ನತ ದಾನಿ ಎಂದು ಫೋರ್ಬ್ಸ್ ಇಂಡಿಯಾ ಮತ್ತು 2019 ರ ದಿ ಎಕನಾಮಿಕ್ ಟೈಮ್ಸ್ ದಾನಿ ಎಂದು ಹೆಸರಿಸಲಾಯಿತು. ಫೋರ್ಬ್ಸ್ನಿಂದ 2011ರಲ್ಲಿ ಪ್ರಕಟಿಸಿದ ಏಷ್ಯಾ ಪೆಸಿಫಿಕ್ನಲ್ಲಿನ ಭಾರತದ 48 ದಾನಿಗಳ ಪೈಕಿ ಅವರನ್ನು ಪಟ್ಟಿ ಮಾಡಲಾಯಿತು. 2008ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಪದ್ಮಭೂಷಣ ಗೌರವ ಪಡೆದರು.
ಈ ಮಧ್ಯೆ, ಎಚ್‌ಸಿಎಲ್ ಟೆಕ್ನಾಲಜೀಸ್ ಸೋಮವಾರ ಜೂನ್ 2021ರ ತ್ರೈಮಾಸಿಕದಲ್ಲಿ ಕನ್ಸಾಲಿಡೇಟೆಡ್ ನಿವ್ವಳ ಲಾಭದಲ್ಲಿ ಶೇ 9.9 ರಷ್ಟು ಏರಿಕೆ ಕಂಡು, 3,214 ಕೋಟಿಗೆ ತಲುಪಿದೆ. FY22 ರಲ್ಲಿ ನಿರಂತರ ಕರೆನ್ಸಿ ಆದಾಯದಲ್ಲಿ ಎರಡಂಕಿಯ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಲಾಗಿದೆ. ಏಪ್ರಿಲ್-ಜೂನ್ 2020ರ ತ್ರೈಮಾಸಿಕದಲ್ಲಿ (US GAAP ಪ್ರಕಾರ) ಐಟಿ ಪ್ರಮುಖ ಕಂಪೆನಿ 2,925 ಕೋಟಿ ರೂಪಾಯಿ ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ನಿಯಂತ್ರಕರ ಫೈಲಿಂಗ್‌ನಲ್ಲಿ ತಿಳಿಸಿದೆ.
ಈಗಲೂ ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಅದರ ಆದಾಯವು ಶೇಕಡಾ 12.5ರಷ್ಟು ಏರಿಕೆಯಾಗಿ, 20,068 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ, 17,841 ಕೋಟಿ ರೂಪಾಯಿಯಾಗಿತ್ತು. “ನಾವು ಸ್ಥಿರ ಕರೆನ್ಸಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 11.7 ಆದಾಯವನ್ನು ಮತ್ತು ಮೋಡ್ 2 ಸೇವೆಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 29ರಷ್ಟು ಬೆಳವಣಿಗೆಯನ್ನು ಕ್ಲೌಡ್ ಮತ್ತು ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಡೀಲ್‌ಗಳ ಅಡಿಯಲ್ಲಿ ಸ್ಥಿರ ಕರೆನ್ಸಿಯಲ್ಲಿ ಪೋಸ್ಟ್ ಮಾಡಿದ್ದೇವೆ. ಈ ವರ್ಷದಲ್ಲಿನ ಬಾಕಿ ತ್ರೈಮಾಸಿಕ ಅವಧಿಗೆ ಉತ್ತಮ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದೇವೆ. ವರ್ಷದಿಂದ ವರ್ಷಕ್ಕೆ ಶೇ 37ರಷ್ಟು ಏರಿಕೆಯಾಗಿ, 7500+ ಮಂದಿಯನ್ನು ಈ ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಳ್ಳಲಿದ್ದೇವೆ,” ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷ ಮತ್ತು ಸಿಇಒ ವಿಜಯ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Hurun Global Rich List: Hurunನಿಂದ ಭಾರತದ ಅತ್ಯಂತ ಸಿರಿವಂತರ ಟಾಪ್ 10 ಪಟ್ಟಿ ಬಿಡುಗಡೆ: ಮುಕೇಶ್ ಅಂಬಾನಿ ನಂಬರ್ ಒನ್
(Shiv Nadar stepped down as HCL managing director and chief strategy officer)
Published On - 8:06 pm, Mon, 19 July 21