Adani Group: ಅದಾನಿ ಸಮೂಹದ ಕಂಪೆನಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ; ಸಂಸತ್ಗೆ ಮಾಹಿತಿ ನೀಡಿದ ಸಚಿವರು
ಗೌತಮ್ ಅದಾನಿ ಸಮೂಹದ ಕೆಲವು ಕಂಪೆನಿಗಳ ಬಗ್ಗೆ ಸೆಬಿ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಹೇಳಿದ್ದಾರೆ.

ಅದಾನಿ ಸಮೂಹಕ್ಕೆ (Adani Group) ಸೇರಿದ ಹಲವು ಕಂಪೆನಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರವು ಸಂಸತ್ಗೆ ಮಾಹಿತಿ ನೀಡಿದೆ. ಜುಲೈ 19ನೇ ತಾರೀಕಿನ ಸೋಮವಾರದಂದು ಸಂಸತ್ಗೆ ಲಿಖಿತ ಪ್ರತಿಕ್ರಿಯೆ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ, ಮಾರುಕಟ್ಟೆ ನಿಯಂತ್ರಕವಾದ ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮತ್ತು ಸರ್ಕಾರದ ಡೈರೆಕ್ಟೊರೇಟ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ವಿಚಾರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ಈ ಸುದ್ದಿ ಹೊರಬಿದ್ದ ಮೇಲೆ ಅದಾನಿ ಸಮೂಹದ ಕಂಪೆನಿ ಷೇರುಗಳ ಬೆಲೆಯಲ್ಲಿ ಇಳಿಕೆ ಆಗಿದೆ. “ಸೆಬಿ ನಿಯಮಾವಳಿಗಳ ಅನುಸಾರವಾಗಿ ನಡೆದುಕೊಳ್ಳಲಾಗುತ್ತಿದೆಯಾ ಎಂಬ ಬಗ್ಗೆ ಅದಾನಿ ಸಮೂಹದ ಕೆಲವು ಕಂಪೆನಿಗಳ ಬಗ್ಗೆ ಸೆಬಿ ವಿಚಾರಣೆ ನಡೆಸುತ್ತಿದೆ. ಇನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಡಿಯಲ್ಲಿ ಬರುವ ಕಾನೂನು ಪಾಲನೆಗೆ ಸಂಬಂಧಿಸಿದಂತೆ ಸಹ ಅದಾನಿ ಸಮೂಹದ ಕೆಲವು ಕಂಪೆನಿಗಳ ವಿಚಾರಣೆ ನಡೆಸಲಾಗುತ್ತಿದೆ,” ಎಂದು ಚೌಧರಿ ಹೇಳಿದ್ದಾರೆ.
ಆದರೂ ಇದಕ್ಕೆ ಸಂಬಂಧಿಸಿದಂತೆ ಮತ್ತೂ ಮುಂದುವರಿದು ಮಾತನಾಡಿದ ಚೌಧರಿ, ಜಾರಿ ನಿರ್ದೇಶನಾಲಯದಿಂದ ಈ ಕಂಪೆನಿಗಳ ಮೇಲೆ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ. ಭಾರತದ ಅಂಗೀಕೃತ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಅದಾನಿ ಸಮೂಹದ ಆರು ಕಂಪೆನಿಗಳು ಲಿಸ್ಟ್ ಆಗಿ, ವಹಿವಾಟು ನಡೆಸುತ್ತಿವೆ. ದಿನದಿಂದ ದಿನದ ಷೇರಿನ ವಹಿವಾಟಿನ ಮೇಲೆ ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆ ಆಧಾರವಾಗಿರುತ್ತದೆ. ಸಚಿವರು ಸ್ಪಷ್ಟಪಡಿಸಿದ ಪ್ರಕಾರ, ಅಲ್ಬುಲಾ ಇನ್ವೆಸ್ಟ್ಮೆಂಟ್ ಲಿಮಿಟೆಡ್, ಕ್ರೆಸ್ಟಾ ಫಂಡ್ ಲಿಮಿಟೆಡ್ ಮತ್ತು ಎಪಿಎಂಎಸ್ ಇನ್ವೆಸ್ಟ್ಮೆಂಡ್ ಫಂಡ್ ಈ ಮುರನ್ನೂ ಸೆಬಿಯಿಂದ ಜೂನ್ನಲ್ಲಿ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಇದು ಈ ಹಿಂದೆ ವರದಿ ಆಗಿತ್ತು. ಆ ನಂತರ ಎನ್ಎಸ್ಡಿಡಲ್ನಿಂದ ಸ್ಪಷ್ಟನೆ ನೀಡಿ, ಅದಾನಿ ಕಂಪೆನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಖಾತೆಗಳನ್ನು ತಡೆ ಹಿಡಿದಿಲ್ಲ ಎಂದು ಹೇಳಲಾಗಿತ್ತು. “ಕೆಲವು ಭಾರತೀಯ ಲಿಸ್ಟೆಡ್ ಕಂಪೆನಿಗಳ ಗ್ಲೋಬಲ್ ಡಿಪಾಸಿಟರಿ ರಸೀಟ್ (ಜಿಡಿಆರ್) ವಿತರಣೆಗೆ ಸಂಬಂಧಿಸಿದ ವಿಷಯದಲ್ಲಿ, ಜೂನ್ 16, 2016ರ ಸೆಬಿ ಆದೇಶದ ಪ್ರಕಾರ ಅಲ್ಬುಲಾ ಇನ್ವೆಸ್ಟ್ಮೆಂಟ್ ಫಂಡ್ ಲಿಮಿಟೆಡ್, ಕ್ರೆಸ್ಟಾ ಫಂಡ್ ಲಿಮಿಟೆಡ್ ಮತ್ತು ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್ ಲಿಮಿಟೆಡ್ ಸೇರಿ ಕೆಲವು ಎಫ್‌ಪಿಐಗಳ ನಿರ್ದಿಷ್ಟ ಫಲಾನುಭವಿ ಖಾತೆಗಳನ್ನು ತಡೆ ಹಿಡಿಯಲು ಡೆಪಾಸಿಟರೀಸ್ಗಳಿಗೆ ನಿರ್ದೇಶನ ನೀಡಿತ್ತು,” ಎಂದು ಸಚಿವರು ಸಂಸತ್ತಿನಲ್ಲಿ ಹೇಳಿದ್ದಾರೆ.
ಈ ಮೂರು ಎಫ್‌ಪಿಐಗಳ ಇತರ ಫಲಾನುಭವಿ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ಸೆಬಿ ಅಂಗೀಕರಿಸಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: Adani group shares: ಅದಾನಿ ಸಮೂಹ ಕಂಪೆನಿಗಳ ಬಂಡವಾಳ 4 ದಿನದಲ್ಲಿ ರೂ. 2 ಲಕ್ಷ ಕೋಟಿ ಖಲಾಸ್; ಇದರಲ್ಲಿನ ರಹಸ್ಯ ಏನು?
ಇದನ್ನೂ ಓದಿ: Gautam Adani: 2021ರಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚಾಯಿತು ಅದಾನಿ ಆಸ್ತಿ; ಇದು ಅಪಾಯದ ಅದೃಷ್ಟ ಎನ್ನುತ್ತಾರೆ ವಿಶ್ಲೇಷಕರು
(Adani group companies investigated by market regulator SEBI and Directorate of Revenue Intelligence, said by minister of state Finance Pankaj Chaudhary)