ಮುಂಬೈ: ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ (Quarter 2) ಎಚ್ಡಿಎಫ್ಸಿ ಬ್ಯಾಂಕ್ನ (HDFC bank) ಕ್ರೂಡೀಕೃತ ನಿವ್ವಳ ಲಾಭದಲ್ಲಿ (Net Profit) ಶೇಕಡಾ 22.30 ಏರಿಕೆಯಾಗಿದೆ. ಈ ಅವಧಿಯ ಲಾಭ 11,125.21 ಕೋಟಿ ರೂಪಾಯಿ ಆಗಿದೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಬ್ಯಾಂಕ್ 9,096.19 ಕೋಟಿ ಕ್ರೂಡೀಕೃತ ನಿವ್ವಳ ಲಾಭ ಗಳಿಸಿತ್ತು. ಜೂನ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿಯೂ ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 20ಕ್ಕಿಂತಲೂ ಹೆಚ್ಚು ನಿವ್ವಳ ಲಾಭ ಗಳಿಸಿತ್ತು. ಏಪ್ರಿಲ್-ಜೂನ್ ಅವಧಿಯಲ್ಲಿ ಬ್ಯಾಂಕ್ನ ನಿವ್ವಳ ಲಾಭ 10,605.78 ಕೋಟಿ ರೂಪಾಯಿ ಆಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 8,834.31 ಕೋಟಿ ರೂಪಾಯಿ ಆಗಿತ್ತು.
ಒಟ್ಟು ಆದಾಯ 46,182 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಒಟ್ಟು ಆದಾಯ 38,754 ಕೋಟಿ ರೂಪಾಯಿ ಆಗಿತ್ತು. ನಿಬಂಧನೆಗಳು ಮತ್ತು ಆಕಸ್ಮಿಕಗಳನ್ನು ಹೊರತುಪಡಿಸಿದ ವೆಚ್ಚದಲ್ಲಿಯೂ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,947 ಕೋಟಿ ಇದ್ದ ವೆಚ್ಚ ಈ ಬಾರಿ 28,790 ಕೋಟಿ ರೂಪಾಯಿ ತಲುಪಿದೆ ಎಂದು ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಎಟಿಎಂ ನಗದು ಡ್ರಾ ಮಿತಿ ಎಷ್ಟು? ಮಿತಿ ಮೀರಿದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದು ಇಲ್ಲಿದೆ
ಅನುತ್ಪಾದಕ ಆಸ್ತಿಯ ಪ್ರಮಾಣದಲ್ಲಿ ಈ ವರ್ಷ ಸುಧಾರಣೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತ್ರೈಮಾಸಿಕದ ಸಂದರ್ಭದಲ್ಲಿ ಅನುತ್ಪಾದಕ ಆಸ್ತಿಯ ಪ್ರಮಾಣ ಶೇಕಡಾ 1.35 ಇದ್ದರೆ ಈ ವರ್ಷ ಶೇಕಡಾ 1.23ಕ್ಕೆ ಇಳಿಕೆಯಾಗಿದೆ. ಮೂರು ತಿಂಗಳ ಹಿಂದೆ ಅನುತ್ಪಾದಕ ಆಸ್ತಿಯ ಪ್ರಮಾಣ ಶೇಕಡಾ 1.28ರಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ.
ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್ ವಿಲೀನಕ್ಕೆ ಸಭೆ:
ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲೀನ ಪ್ರಸ್ತಾವಕ್ಕೆ ಸಂಬಂಧಿಸಿ ಷೇರುದಾರರ ಸಭೆ ನಡೆಸಲು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ (ಎನ್ಸಿಎಲ್ಟಿ) ಅನುಮತಿ ನೀಡಿದೆ.
ವಿಲೀನ ಯೋಜನೆಯ ಕುರಿತು ಚರ್ಚಿಸಲು ಮತ್ತು ಅನುಮೋದಿಸಲು ನವೆಂಬರ್ 25ರಂದು ಷೇರುದಾರರು ಸಭೆ ಸೇರಲಿದ್ದಾರೆ ಎಂದು ಎಚ್ಡಿಎಫ್ಸಿ ತಿಳಿಸಿದೆ. ಎಚ್ಡಿಎಫ್ಸಿ ಪ್ರಾಪರ್ಟಿ ವೆಂಚರ್ಸ್ ಲಿಮಿಟೆಡ್ ಅನ್ನು ಎಚ್ಡಿಎಫ್ಸಿ ಬ್ಯಾಂಕ್ಗೆ ವರ್ಗಾಯಿಸುವುದಕ್ಕಾಗಿ ಎಚ್ಡಿಎಫ್ಸಿ ಲಿಮಿಟೆಡ್ ಈಗಾಗಲೇ ಮಾರುಕಟ್ಟೆ ನಿಯಂತ್ರಕ ಸೆಬಿಯ (Securities and Exchange Board of India) ಅನುಮೋದನೆ ಪಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Sat, 15 October 22