ಎಚ್​ಡಿಎಫ್​ಸಿ ಬ್ಯಾಂಕ್ ಷೇರುಬೆಲೆ 4 ಪ್ರತಿಶತದಷ್ಟು ಕುಸಿತ; ಹೂಡಿಕೆದಾರರಿಗೆ ಶಾಕ್; ಏನು ಕಾರಣ?

|

Updated on: Sep 20, 2023 | 2:06 PM

HDFC Bank Shares: ಎಚ್​ಡಿಎಫ್​ಸಿ ಬ್ಯಾಂಕ್​ನ ಸಾಂಸ್ಥಿಕ ಹೂಡಿಕೆದಾರರ ಸಭೆ ಬಳಿಕ ಕೆಲ ಬ್ರೋಕರೇಜ್ ಕಂಪನಿಗಳು ಎಚ್​ಡಿಎಫ್​ಸಿ ಷೇರುಬೆಲೆಯ ಪ್ರೈಸ್ ಟಾರ್ಗೆಟ್ ಇಳಿಸಿವೆ. ಇದರ ಬೆನ್ನಲ್ಲೇ ಎಚ್​ಡಿಎಫ್​ಸಿ ಬ್ಯಾಂಕ್​ನ ಷೇರುಬೆಲೆ ಕುಸಿದಿವೆ. ಬುಧವಾರ ಬೆಳಗ್ಗೆ 60 ರೂಗಳಿಗೂ ಹೆಚ್ಚು ಇಳಿದಿವೆ. ಆದರೆ, ಮಾರ್ಗನ್ ಸ್ಟಾನ್ಲೀಯಂತಹ ಇತರ ಪ್ರಮುಖ ಬ್ರೋಕರ್ ಸಂಸ್ಥೆಗಳು ಎಚ್​ಡಿಎಫ್​ಸಿಗೆ ಉತ್ತಮ ಗ್ರೇಡಿಂಗ್ ಕೊಟ್ಟಿವೆ.

ಎಚ್​ಡಿಎಫ್​ಸಿ ಬ್ಯಾಂಕ್ ಷೇರುಬೆಲೆ 4 ಪ್ರತಿಶತದಷ್ಟು ಕುಸಿತ; ಹೂಡಿಕೆದಾರರಿಗೆ ಶಾಕ್; ಏನು ಕಾರಣ?
ಎಚ್​ಡಿಎಫ್​ಸಿ ಬ್ಯಾಂಕ್
Follow us on

ಮುಂಬೈ, ಸೆಪ್ಟೆಂಬರ್ 20: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್​ಡಿಎಫ್​ಸಿ ಬ್ಯಾಂಕ್​ನ ಷೇರುಬೆಲೆ (HDFC Bank Share Price) ಇಂದು ಬುಧವಾರ ದಿಢೀರ್ ಕುಸಿತ ಕಾಣುತ್ತಿದೆ. ಇಂದಿನ ಬೆಳಗಿನ ವಹಿವಾಟಿನಲ್ಲಿ ಅದರ ಬೆಲೆ ಶೇ. 4ಕ್ಕಿಂತಲೂ ಹೆಚ್ಚು ಕುಸಿತವಾಗಿದೆ. ಇದು ವಿವಿಧ ಬ್ರೋಕರೇಜ್ ಏಜೆನ್ಸಿಗಳ (Brokerage Companies) ಅಭಿಪ್ರಾಯಗಳ ಫಲಶ್ರುತಿ ಎನ್ನಲಾಗಿದೆ. ಮೊನ್ನೆ ಸೋಮವಾರ ಎಚ್​ಡಿಎಫ್​ಸಿ ಬ್ಯಾಂಕ್​ನ ಅನಾಲಿಸ್ಟ್ ಮತ್ತು ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್ ಸಭೆ ನಡೆದ ಬಳಿಕ ರೇಟಿಂಗ್ ಸಂಸ್ಥೆಗಳಿಂದ ಮಿಶ್ರ ಅನಿಸಿಕೆಗಳು ಬಂದಿದ್ದವು. ಹೆಚ್ಚಿನ ರೇಟಿಂಗ್​ಗಳು ಎಚ್​ಡಿಎಫ್​ಸಿಗೆ ಆಶಾದಾಯಕ ಚಿತ್ರಣ ನೀಡಿಲ್ಲದಿರುವುದು ಹೂಡಿಕೆದಾರರನ್ನು ಗೊಂದಲಕ್ಕೆ ಕೆಡವಿರುವ ಸಾಧ್ಯತೆ ಇದೆ. ಹಿಂದಿನ ದಿನ 1,629 ರೂ ಇದ್ದ ಎಚ್​ಡಿಎಫ್​ಸಿ ಷೇರು ಬೆಲೆ ಬುಧವಾರ ಬೆಳಗಿನ ವಹಿವಾಟಿನ ವೇಳೆ 67 ರುಪಾಯಿಗೂ ಹೆಚ್ಚು ಬೆಲೆ ಇಳಿಕೆ ಕಂಡಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ನ ಷೇರುಬೆಲೆ ಇಳಿಕೆಯಾಗಿದ್ದು ಷೇರುಪೇಟೆಯ ವಿವಿಧ ಸೂಚ್ಯಂಕಗಳು ಕುಂದುವಂತೆ ಮಾಡಿದೆ. ಬ್ಯಾಂಕ್ ನಿಫ್ಟಿ ಶೇ. 0.63ರಷ್ಟು ಕುಸಿದರೆ, ನಿಫ್ಟಿ50 ಸೂಚ್ಯಂಕ ಶೇ. 0.54ರಷ್ಟು ಇಳಿದಿದೆ.

ಬ್ರೋಕರೇಜ್ ಏಜೆನ್ಸಿಗಳು ಹೇಳುವುದೇನು?

ಎಚ್​ಡಿಎಫ್​ಸಿಯ ಅನಾಲಿಸ್ಟ್ ಮೀಟಿಂಗ್ ಬಳಿಕ ನೊಮುರಾ, ಕೋಟಕ್ ಇನ್ಸ್​ಟಿಟ್ಯೂಷನಲ್ ಈಕ್ವಿಟೀಸ್ ಮತ್ತು ಇನ್ವೆಸ್ಟೆಕ್ ಸಂಸ್ಥೆಗಳು ನಕಾರಾತ್ಮಕವಾಗಿ ಸ್ಪಂದಿಸಿವೆ. ಖರೀದಿ ಮಾಡಬಹುದು ಎಂದಿದ್ದ ರೇಟಿಂಗ್ ಅನ್ನು ನೊಮುರಾ ನ್ಯೂಟ್ರಲ್​ಗೆ ಇಳಿಸಿತು. ಅದರ ಪ್ರೈಸ್ ಟಾರ್ಗೆಟ್ ಅನ್ನೂ ಇಳಿಸಿತು. ಕೋಟಕ್ ಮತ್ತು ಇನ್ವೆಸ್ಟೆಕ್ ಸಂಸ್ಥೆಗಳೂ ಕೂಡ ಪ್ರೈಸ್ ಟಾರ್ಗೆಟ್ ಇಳಿಸಿದ್ದವು.

ಇದನ್ನೂ ಓದಿ: Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್​ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್​ಗಳ ಬೆಲೆ

ನೊಮುರಾ ಸಂಸ್ಥೆ ಈ ಮೊದಲು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಪ್ರೈಸ್ ಟಾರ್ಗೆಟ್ 1,970 ರೂ ಎಂದು ಅಂದಾಜು ಮಾಡಿತ್ತು. ಮೊನ್ನೆ ಅದನ್ನು 1,800 ರೂಗೆ ಡೌನ್​ಗ್ರೇಡ್ ಮಾಡಿದೆ. ಇಷ್ಟು ದೊಡ್ಡ ಮೊತ್ತದ ಇಳಿಕೆಯು ಹೂಡಿಕೆದಾರರನ್ನು ಕಂಗಾಲುಗೊಳಿಸಿರಬಹುದು.

ಇನ್ನು, ಕೋಟಕ್ ಇನ್ಸ್​ಟಿಟ್ಯೂಷನ್ ಈಕ್ವಿಟೀಸ್ ಇರಿಸಿದ್ದ 1,925 ರೂನ ಪ್ರೈಸ್ ಟಾರ್ಗೆಟ್ ಅನ್ನು 1,850 ರೂಗೆ ಇಳಿಸಿದೆ. ಇನ್ವೆಸ್ಟೆಕ್ ಸಂಸ್ಥೆ 1,735 ರೂನಿಂದ 1,690 ರೂಗೆ ಟಾರ್ಗೆಟ್ ಪ್ರೈಸ್ ಇಳಿಸಿದೆ. ಇವೆರಡಕ್ಕಿಂತ ಮುಖ್ಯವಾಗಿ ನೊಮುರಾ ಬ್ರೋಕರೇಜ್ ಸಂಸ್ಥೆ ಹೆಚ್ಚು ನಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸಿರುವುದು ಎಚ್​ಡಿಎಎಫ್​ಸಿ ಬ್ಯಾಂಕ್​ನ ಷೇರುಬೆಲೆ ಕುಸಿಯುಂತೆ ಮಾಡಿರಬಹುದು.

ಆದರೆ, ಪ್ರಮುಖ ಬ್ರೋಕರೇಜ್ ಸಂಸ್ಥೆಗಳಾದ ಮಾರ್ಗನ್ ಸ್ಟಾನ್ಲೀ, ಮೆಕಾರೀ ಮತ್ತು ಜೆಫರೀಸ್ ಎಚ್​ಡಿಎಫ್​ಸಿ ಬ್ಯಾಂಕ್ ಬಗ್ಗೆ ಸಕಾರಾತ್ಮಕ ಅನಿಸಿಕೆ ಹೊಂದಿವೆ. ಮಾರ್ಗನ್ ಸ್ಟಾನ್ಲೀಯಂತೂ ಪ್ರೈಸ್ ಟಾರ್ಗೆಟ್ ಆಗಿ 2,110 ರೂ ನಿಗದಿ ಮಾಡಿದೆ. ಹೀಗಾಗಿ, ಎಚ್​​ಡಿಎಫ್​ಸಿ ಬ್ಯಾಂಕ್ ಷೇರುಬೆಲೆ ತೀರಾ ಹೆಚ್ಚು ಕುಸಿಯದಂತೆ ನಿಯಂತ್ರಿತವಾಗಿದೆ. ಮೆಕಾರೀ ಮತ್ತು ಜೆಫರೀಸ್ ಎರಡೂ ಕೂಡ ಪ್ರೈಸ್ ಟಾರ್ಗೆಟ್ ಆಗಿ 2,000 ರೂಗಿಂತ ಹೆಚ್ಚು ಮೊತ್ತ ನಿಗದಿ ಮಾಡಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಹಣ್ಣಿನ ಜ್ಯೂಸ್​ನಲ್ಲಿ ಹಣ್ಣಿಲ್ಲ; ಇದು ಗ್ರಾಹಕರಿಗೆ ಮಾಡುವ ವಂಚನೆ; ಅಮೆರಿಕದಲ್ಲಿ ಸ್ಟಾರ್​ಬಕ್ಸ್ ವಿರುದ್ಧ ಕೇಸ್

ಕೆಲ ತಜ್ಞರ ಪ್ರಕಾರ ಎಚ್​​ಡಿಎಫ್​ಸಿ ಬ್ಯಾಂಕ್​ನ ಷೇರುಬೆಲೆ ಕುಸಿಯುತ್ತಿದ್ದರೆ ಅದನ್ನು ಖರೀದಿಸುವುದು ಜಾಣತನ. ಮುಂದಿನ ದಿನಗಳಲ್ಲಿ ಇದರ ಬೆಲೆ 2,000 ರೂಗಿಂತ ಹೆಚ್ಚು ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ