ಹಣ್ಣಿನ ಜ್ಯೂಸ್ನಲ್ಲಿ ಹಣ್ಣಿಲ್ಲ; ಇದು ಗ್ರಾಹಕರಿಗೆ ಮಾಡುವ ವಂಚನೆ; ಅಮೆರಿಕದಲ್ಲಿ ಸ್ಟಾರ್ಬಕ್ಸ್ ವಿರುದ್ಧ ಕೇಸ್
Starbucks Controversy: ವಿವಿಧ ಹಣ್ಣುಗಳ ಹೆಸರಿನಲ್ಲಿರುವ ಅದರ ಪಾನೀಯಗಳಲ್ಲಿ ಅ ಹಣ್ಣಿನ ಸಾರವೇ ಇಲ್ಲ ಎಂದು ಅಮೆರಿಕದ ಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. 5 ಮಿಲಿಯನ್ ಡಾಲರ್ (41 ಕೋಟಿ ರೂ) ಮೊತ್ತದ ಪರಿಹಾರಕ್ಕಾಗಿ ಸ್ಟಾರ್ಬಕ್ಸ್ ಮೇಲೆ ಮೊಕದ್ದಮೆ ದಾಖಲಾಗಿದೆ. ಹಣ್ಣಿನ ಹೆಸರಿದ್ದರೂ ಅದು ಫ್ಲೇವರ್ಡ್ ಡ್ರಿಂಕ್ ಎಂಬುದನ್ನು ಗ್ರಾಹಕರು ಬಲ್ಲರು. ಇದರಲ್ಲಿ ಗೊಂದಲವೇನಿಲ್ಲ ಎಂಬ ಸ್ಟಾರ್ಬಕ್ಸ್ ವಾದವನ್ನು ಕೋರ್ಟ್ ತಿರಸ್ಕರಿಸಿದೆ.
ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 19: ಹಣ್ಣಿನ ಜ್ಯೂಸ್ ಹೆಸರಿನಲ್ಲಿ ಆರ್ಟಿಫಿಶಿಯಲ್ ಫ್ಲೇವರ್ ಹಾಕಿ ಮಾರಲಾಗುತ್ತಿರುವ ಪಾನೀಯಗಳನ್ನು (Fruit Beverages) ಮಾರುಕಟ್ಟೆಯಲ್ಲಿ ಕಾಣಬಹುದು. ವಿಶ್ವದ ಅತಿದೊಡ್ಡ ರೀಟೇಲ್ ಕಾಫಿ ಹೋಟೆಲ್ಗಳ ಚೈನ್ ಹೊಂದಿರುವ ಸ್ಟಾರ್ಬಕ್ಸ್ (Starbucks) ಸಂಸ್ಥೆ ಇದೀಗ ಇದೇ ಕಾರಣಕ್ಕೆ ನ್ಯಾಯಾಲಯ ಮೊಕದ್ದಮೆ ಎದುರಿಸುತ್ತಿದೆ. ವಿವಿಧ ಹಣ್ಣುಗಳ ಹೆಸರಿನಲ್ಲಿರುವ ಅದರ ಪಾನೀಯಗಳಲ್ಲಿ ಅ ಹಣ್ಣಿನ ಸಾರವೇ ಇಲ್ಲ ಎಂದು ಅಮೆರಿಕದ ಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. 5 ಮಿಲಿಯನ್ ಡಾಲರ್ (41 ಕೋಟಿ ರೂ) ಮೊತ್ತದ ಪರಿಹಾರಕ್ಕಾಗಿ ಸ್ಟಾರ್ಬಕ್ಸ್ ಮೇಲೆ ಮೊಕದ್ದಮೆ ದಾಖಲಾಗಿದೆ.
ನ್ಯೂಯಾರ್ಕ್ನ ಜೋಆನ್ ಕೋಮಿನಿಸ್ ಮತ್ತು ಕ್ಯಾಲಿಫೋರ್ನಿಯಾದ ಜೇಸನ್ ಮೆಕಾಲಿಸ್ಟರ್ ಅವರಿಬ್ಬರು ಸ್ಟಾರ್ಬಕ್ಸ್ ಮೇಲಿನ ಕಾನೂನು ಮೊಕದ್ದಮೆ ನಿರ್ವಹಿಸುತ್ತಿದ್ದಾರೆ. ಅಮೆರಿಕದ ಮನ್ಹಟನ್ನ ಜಿಲ್ಲಾ ನ್ಯಾಯಾಧೀಶ ಜಾನ್ ಕ್ರೋನನ್ ಅವರು ಈ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದಾರೆ. ಮಾಡಲಾಗಿರುವ 11 ಆರೋಪಗಳಲ್ಲಿ 9 ಅನ್ನು ವಜಾಗೊಳಿಸುವಂತೆ ಸ್ಟಾರ್ಬಕ್ಸ್ ಮಾಡಿದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಅದ್ದೂರಿ ಮದುವೆ, ಬಾಲಿವುಡ್ ಸೆಲಬ್ರಿಟಿಗಳ ಪಾತ್ರ, ಪಾಕಿಸ್ತಾನದ ನಂಟು; ಬೆಟ್ಟಿಂಗ್ ಮಾದೇವನ ಕರ್ಮಕಾಂಡ
ಮ್ಯಾಂಗೋ ಡ್ರಾಗನ್ಫ್ರೂಟ್, ಪೈನ್ ಆ್ಯಪಲ್ ಪ್ಯಾಶನ್ಫ್ರೂಟ್, ಸ್ಟ್ರಾಬೆರಿ ಅಕೈ ಇತ್ಯಾದಿ ವಿವಿಧ ಹಣ್ಣಿನ ಫ್ಲೇವರ್ಗಳನ್ನು ಸ್ಟಾರ್ಬಕ್ಸ್ ಅಂಗಡಿಗಳಲ್ಲಿ ಮಾರಲಾಗುತ್ತದೆ. ಶೀರ್ಷಿಕೆಯಲ್ಲಿ ಹಣ್ಣಿನ ಹೆಸರು ಇದೆಯಾದರೂ, ಹೂರಣಗಳ ಪಟ್ಟಿಯಲ್ಲಿ (ಇನ್ಗ್ರೆಡಿಯೆಂಟ್ಸ್ ಲಿಸ್ಟ್) ನೀರು, ದ್ರಾಕ್ಷಿರಸದ ಸಾರ, ಸಕ್ಕರೆ ಮಾತ್ರವೇ ಇರುವುದು. ಇದು ಗ್ರಾಹಕರಿಗೆ ಮಾಡುತ್ತಿರುವ ದ್ರೋಹವಾಗಿದೆ. ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ರಾಜ್ಯಗಳ ಗ್ರಾಹಕ ರಕ್ಷಣೆ ಕಾನೂನುಗಳ ಉಲ್ಲಂಘನೆಯಾಗಿದೆ. ಹಾನಿ ಪರಿಹಾರವಾಗಿ ಕಂಪನಿಯಿಂದ 5 ಮಿಲಿಯನ್ ಡಾಲರ್ಗೂ ಹೆಚ್ಚಿನ ಮೊತ್ತದ ದಂಡ ಕಟ್ಟಿಸುವಂತೆ 2022ರ ಆಗಸ್ಟ್ ತಿಂಗಳಲ್ಲಿ ಮೊಕದ್ದಮೆ ಹಾಕಲಾಗಿತ್ತು. ಈಗ ಅದರ ವಿಚಾರಣೆ ನಡೆಯುತ್ತಿದೆ.
ಸ್ಟಾರ್ಬಕ್ಸ್ ವಾದವೇನು?
ಪಾನೀಯದ ಹೆಸರು ಅದರ ಫ್ಲೇವರ್ ಅನ್ನು ಮಾತ್ರವೇ ಸೂಚಿಸುತ್ತದೆ. ಅದು ಗ್ರಾಹಕರಿಗೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗೇನಾದರೂ ಗೊಂದಲ ಇದ್ದಲ್ಲಿ ಸ್ಟೋರ್ ಸಿಬ್ಬಂದಿಯನ್ನು ಕೇಳಿದರೆ ಸರಿಯಾದ ಮಾಹಿತಿ ಸಿಕ್ಕಿಬಿಡುತ್ತದೆ ಎಂದು ಸ್ಟಾರ್ಬಕ್ಸ್ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ಇಂದಿನಿಂದ ಭಾರತದ ಅತಿದೊಡ್ಡ ಆನ್ಲೈನ್ ಶಾಪಿಂಗ್ ತಾಣದಲ್ಲಿ 2,000 ರೂ ನೋಟುಗಳ ಬಳಕೆ ಬಂದ್
ಆದರೆ, ಕೋರ್ಟ್ ಜಡ್ಜ್ ಅವರಿಗೆ ಈ ವಾದ ಸಮಾಧಾನ ತರಲಿಲ್ಲ. ಸ್ಟಾರ್ಬಕ್ಸ್ನ ಕೆಲ ಪಾನೀಯಗಳ ಹೆಸರಿನಲ್ಲಿರುವ ವಸ್ತು ಅದರ ಇನ್ಗ್ರೆಡಿಯೆಂಟ್ ಲಿಸ್ಟ್ನಲ್ಲಿವೆ. ಹೀಗಾಗಿ, ಜನರಿಗೆ ಗೊಂದಲವಾಗುವ ಸಾಧ್ಯತೆ ಇಲ್ಲದಿಲ್ಲ ಎಂಬುದು ನ್ಯಾಯಾಧೀಶರ ಅನಿಸಿಕೆ.
ಸದ್ಯ ಎರಡೂ ಕಡೆಯವರ ವಾದಗಳನ್ನು ಕೋರ್ಟ್ ಆಲಿಸುತ್ತಿದೆ. ಇದರ ತೀರ್ಪು ಬಹಳ ಮಹತ್ವದ್ದಾಗಿರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Tue, 19 September 23