ತೀರಾ ತುರ್ತಾಗಿ ಹಣದ ಅಗತ್ಯ ಇದೆ ಅಂದರೆ ನಿಮ್ಮ ಮುಂದೆ ಕಾಣಿಸಿಕೊಳ್ಳುವ ಆಯ್ಕೆ ಏನು? ಸಾಲ ಪಡೆಯುವುದೇ ಅಲ್ಲೇ! ನೀವು ಆರೋಗ್ಯಕರ ಕ್ರೆಡಿಟ್ ಸ್ಕೋರ್ (Credit Score) ಅನ್ನು ಕಾಪಾಡಿಕೊಳ್ಳಲು ಬಯಸಿದರೆ ನೀವು ಪರಿಗಣಿಸಬಹುದಾದ ಐದು ಅಂಶಗಳು ಇಲ್ಲಿವೆ. ಶಿಕ್ಷಣಕ್ಕೆ, ಸ್ವಂತ ಮನೆ ನಿರ್ಮಾಣಕ್ಕೆ, ಭೂಮಿ ಖರೀದಿಗೆ, ಮನೆ ದುರಸ್ತಿಗೆ, ಅಷ್ಟೇ ಯಾಕೆ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳಿಗೆ ಸಹ ಸಾಲ ಪಡೆಯುವುದು ಸಾಮಾನ್ಯವಾದ ಸಂಗತಿ. ಸಾಲ ಪಡೆಯುವುದಕ್ಕೆ ಅದಕ್ಕೆ ಅರ್ಹರಾಗಿರುವುದು ಮುಖ್ಯ. ಸಾಲ ವಿತರಣೆ ಮಾಡುವ ಮುನ್ನ ಬ್ಯಾಂಕ್ ಮೊದಲಾದ ಸಂಸ್ಥೆಗಳು ಗಮನಿಸುವ ಅತಿ ಮುಖ್ಯವಾದದ್ದೇನೆಂದರೆ, ಅದು ಕ್ರೆಡಿಟ್ ಸ್ಕೋರ್. ಕ್ರೆಡಿಟ್ ಸ್ಕೋರ್ 300ರಿಂದ 900ರ ಮಧ್ಯೆ ಇರುತ್ತದೆ. ಅದು ವ್ಯಕ್ತಿಯ ಸಾಲ ಹಿಂತಿರುಗಿಸುವ ಸಾಮರ್ಥ್ಯವನ್ನು ಅಳೆಯುವುದಕ್ಕೆ ಕ್ರೆಡಿಟ್ ಸ್ಕೋರ್ ಬಳಸಲಾಗುತ್ತದೆ.
750 ಮತ್ತು ಅದಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಸಾಕಾಗುವಂಥದ್ದು ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಸಾಲ ದೊರೆಯುವುದಕ್ಕೆ ಮಾಡಲು ಇಷ್ಟು ಸ್ಕೋರ್ ಸಾಕು. 900ರ ಸಮೀಪಕ್ಕೆ ಸ್ಕೋರ್ ಬರುತ್ತಿದ್ದಂತೆ ಸಾಲ ಮಂಜೂರಾತಿ ಸಿಗುವ ಅವಕಾಶ ಹೆಚ್ಚು. ಆದರೆ ಅದರಲ್ಲಿ ಆದಾಯದಂಥ ಇತರ ಮಾನದಂಡವೂ ಮುಖ್ಯವಾಗುತ್ತದೆ. ಸದಾ ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಎಂದು ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ನಿಮಗೆ ಯಾವಾಗ ಸಾಲ ಬೇಕಾಗುತ್ತದೆ ಎಂಬುದು ಗೊತ್ತಿರುವುದಿಲ್ಲ. ಆ ಬಗ್ಗೆ ಗಮನವೇ ನೀಡದಂತಿದ್ದು, ಏಕಾಏಕಿ ಸಾಲ ಬೇಕು ಅಂತಾದಾಗ ಸ್ಕೋರ್ ಹೆಚ್ಚಿಸಿಕೊಳ್ಳುವುದು ಆಗಲ್ಲ. ಇಲ್ಲಿ 5 ಅಂಶಗಳನ್ನು ನೀಡಲಾಗಿದೆ. ಒಂದು ವೇಳೆ ಆರೋಗ್ಯಕರ ಕ್ರೆಡಿಟ್ ಸ್ಕೋರ್ ಇಟ್ಟುಕೊಳ್ಳಬೇಕು ಅಂತಾದಲ್ಲಿ ಇವುಗಳನ್ನು ಗಮನಿಸಿ.
1) ಸಮಯೋಚಿತ ಇಎಂಐ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳು: ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕುವಾಗ ಸಮಯೋಚಿತ ಪಾವತಿಗಳು ಪಾಸಿಟಿವ್ ಪರಿಣಾಮವನ್ನು ಬೀರುತ್ತವೆ. ನೀವು ಸಮಯಕ್ಕೆ ಪಾವತಿಸಿದಂತೆ ಸ್ಕೋರ್ ಹೆಚ್ಚಾಗುತ್ತದೆ. ತಡವಾದರೆ ಅದು ಕಡಿಮೆ ಆಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ನಿಮ್ಮ ಇಎಂಐಗಳು ತಡವಾದ ಕಾರಣಕ್ಕೆ ಕ್ರೆಡಿಟ್ ಇತಿಹಾಸದ ಮೇಲೆ ನಕಾರಾತ್ಮಕವಾಗಿ ಪ್ರತಿಫಲಿಸುತ್ತದೆ ಮತ್ತು ಸಾಲದಾತರು ಅದನ್ನು ಇಷ್ಟಪಡುವುದಿಲ್ಲ.
2) ನಿಮ್ಮ ಕ್ರೆಡಿಟ್ ಮಿತಿಯನ್ನು ಖಾಲಿ ಮಾಡಬೇಡಿ: ಎಲ್ಲ ಕ್ರೆಡಿಟ್ ಕಾರ್ಡ್‌ಗಳು ನಿಗದಿತ ಖರ್ಚು ಮಿತಿಯನ್ನು ಹೊಂದಿವೆ. ನಿಮ್ಮ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್ ಮಿತಿಯನ್ನು ನಿಗದಿಪಡಿಸುತ್ತದೆ. ನಿಮ್ಮ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಹೆಚ್ಚಾದಷ್ಟೂ ನಿಮ್ಮ ಖರ್ಚಿನ ಮಿತಿಯೂ ಹೆಚ್ಚಾಗಬಹುದು. ಆದರೆ ನಿಮ್ಮ ಖರ್ಚು ಮಿತಿಯನ್ನು ಆಗಾಗ ಮುಟ್ಟುತ್ತಾ ಅಥವಾ ದಾಟುತ್ತಿದ್ದರೆ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ನಿಮ್ಮ ಖರ್ಚು ಮಿತಿಯನ್ನು ಖಾಲಿ ಮಾಡದಿರುವುದು ಮತ್ತು ಶೇ 30ಕ್ಕಿಂತ ಕಡಿಮೆ ಇರುವಂತೆ ಸಲಹೆ ನೀಡಲಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಹೆಚ್ಚು ಮಿತಿಗೆ ಹೋಗಬಹುದು. ಆದರೆ ನಿಯಮಿತವಾಗಿ ದಾಟಿ ಹೋಗುವುದು ಕ್ರೆಡಿಟ್ ಆರೋಗ್ಯಕ್ಕೆ ಕೆಟ್ಟದು. ಏಕೆಂದರೆ ನಿಮ್ಮನ್ನು ವಿಪರೀತ ಸಾಲ ಮಾಡುವ ಮನಸ್ಥಿತಿಯವರು ಎಂದು ಪರಿಗಣಿಸಲಾಗುತ್ತದೆ. ಹೊಸ ಸಾಲದಾತರಿಗೆ ಇದು ಸಾಲ ನೀಡದಿರುವುದಕ್ಕೆ ಕಾರಣ ಆಗಬಹುದು.
3) ಒಂದೇ ಸಲಕ್ಕೆ ಅನೇಕ ಕಡೆಗೆ ಸಾಲಗಳನ್ನು ತಪ್ಪಿಸಿ: ಹಲವಾರು ಸಾಲಗಳು ಮತ್ತು ಕಾರ್ಡ್ ಸಾಲಗಳು ಏಕಕಾಲದಲ್ಲಿ ಪಡೆಯುವುದರಿಂದ ನಿಮ್ಮ ವೆಚ್ಚ ಮಾಡಬಹುದಾದ ಆದಾಯವನ್ನು ಕುಗ್ಗಿಸುತ್ತದೆ. ಆದ್ದರಿಂದ ಆಲೋಚಿಸಿ ಸಾಲ ಮಾಡಿ. ತಾತ್ತ್ವಿಕವಾಗಿ, ನಿಮ್ಮ ಖರ್ಚು ಮಾಡಬಹುದಾದ ಮೊತ್ತದಲ್ಲಿ ಶೇ 30ರಿಂದ 40ಕ್ಕಿಂತ ಹೆಚ್ಚು ಇಎಂಐಗಳ ಕಡೆಗೆ ಹೋಗಬಾರದು. ನಿಮ್ಮ ಆದಾಯ ಕಡಿಮೆಯಿದ್ದಲ್ಲಿ ಇಎಂಐಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಹೆಸರಿನಲ್ಲಿ ಹಲವಾರು ಪಾವತಿಸದ ಸಾಲಗಳಿದ್ದಲ್ಲಿ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ನಿಮ್ಮ ಆದಾಯ ಕಡಿಮೆಯಾದಲ್ಲಿ ಡೀಫಾಲ್ಟ್ ಆಗುವ ಅಪಾಯದಲ್ಲಿ ಇರುತ್ತೀರಿ. ಅದು ನಿಮ್ಮ ಸ್ಕೋರ್ ಅನ್ನು ಕುಗ್ಗಿಸಬಹುದು.
4) ಮಿಶ್ರ ಸಾಲ ಒಳ್ಳೆಯದು: ನಿಮ್ಮ ಕ್ರೆಡಿಟ್ ಸ್ಕೋರ್ ನೀವು ತೆಗೆದುಕೊಂಡಿರುವ ಸಾಲಗಳ ಮೇಲೆ ಪರಿಣಾಮ ಆಗಿರುತ್ತದೆ, ಅದು ಸೆಕ್ಯೂರ್ಡ್ ಹಾಗೂ ಅನ್ಸೆಕ್ಯೂರ್ಡ್ ಸಾಲಗಳ ವಿಧಗಳಿಂದ ಸ್ವಲ್ಪ ಪ್ರಭಾವಿತ ಆಗಿರುತ್ತದೆ. ಸೆಕ್ಯೂರ್ಡ್ ಲೋನ್ಗಳು (ಗೃಹ ಸಾಲ, ಕಾರು ಸಾಲ) ಮತ್ತು ಅನ್ಸೆಕ್ಯೂರ್ಡ್ ಲೋನ್ಗಳು (ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿನ ಸಾಲಗಳು) ಸಂಯೋಜನೆಯು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ. ಆದರೆ ನಿಮ್ಮ ಕ್ರೆಡಿಟ್ ಇತಿಹಾಸ ಗಮನಿಸಿದಾಗ ಅನ್ಸೆಕ್ಯೂರ್ಡ್ ಸಾಲಗಳೇ ಹೆಚ್ಚಿದ್ದಲ್ಲಿ ಕ್ರೆಡಿಟ್ ಅರ್ಹತೆ ಕಡಿಮೆ ಆಗುತ್ತದೆ.
5) ಕ್ರೆಡಿಟ್ ಕಾರ್ಡ್‌ಗಳ ಭಾಗಶಃ ಪಾವತಿಗಳನ್ನು ತಪ್ಪಿಸಿ: ಕ್ರೆಡಿಟ್ ಕಾರ್ಡ್‌ಗಳು ಗ್ರಾಹಕರಿಗೆ ಕನಿಷ್ಠ ಪಾವತಿ ಮಾಡಲು ಅನುಮತಿಸುತ್ತದೆ. ಅಂದರೆ ಅದು ಸಾಮಾನ್ಯವಾಗಿ ನಿಮ್ಮ ಬ್ಯಾಲೆನ್ಸ್‌ನ ಶೇ 5ರಷ್ಟಿರುತ್ತದೆ. ಆ ಮೂಲಕ ಕನಿಷ್ಠ ಪಾವತಿ ಸಾಕು ಎಂದು ಯೋಚಿಸುವಂತೆ ಮಾಡಿ, ಸಾಲಗಾರರನ್ನು ಮೂರ್ಖರನ್ನಾಗಿಸುತ್ತದೆ. ಆದರೆ ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ತಿಂಗಳಿಗೆ ಶೇ 3ರಿಂದ ಶೇ 4ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಇದು ತುಂಬ ಹೆಚ್ಚಿನದಾಗುತ್ತದೆ. ಅಲ್ಲದೆ, ಕಾರ್ಡ್ ಬ್ಯಾಲೆನ್ಸ್ ಹೆಚ್ಚಾದಂತೆ ಕ್ರೆಡಿಟ್ ಬಳಕೆಯು ಹೆಚ್ಚಾಗುತ್ತದೆ ಮತ್ತು ಹೀಗಾಗಿ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ. ಕನಿಷ್ಠ ಪಾವತಿಗಳು ಭಾರಿ ಬಡ್ಡಿಗೆ ಕಾರಣವಾಗುತ್ತವೆ; ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಕಾಲಿಕ ಪಾವತಿಗಳು ಮತ್ತು ಕಡಿಮೆ ಸಾಲದ ಬಳಕೆ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಸಹಾಯ ಮಾಡುತ್ತವೆ. ಕೊನೆಯದಾಗಿ, ಯಾವುದೇ ಸಾಲವನ್ನು ಬಳಸಿದರೆ ಕ್ರೆಡಿಟ್ ಸ್ಕೋರ್ ಅನ್ನು ಆನ್‌ಲೈನ್‌ನಲ್ಲಿ ಪ್ರತಿ ತಿಂಗಳು ಉಚಿತವಾಗಿ ಪರಿಶೀಲನೆ ಮಾಡಿ. ನಿಮ್ಮ ಸಾಲದ ನಡವಳಿಕೆಯು ಸ್ಕೋರ್ ಅನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಸ್ಕೋರ್ ಕುಸಿಯುತ್ತಿದ್ದರೆ ಅದನ್ನು ಸುಧಾರಿಸಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Credit Score: ಉಚಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Published On - 9:04 pm, Tue, 3 May 22