Interest Only Home Loans: ಬಡ್ಡಿ ಮಾತ್ರ ಗೃಹ ಸಾಲದ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು
ಬಡ್ಡಿ ಮಾತ್ರ ಗೃಹ ಸಾಲದ ಬಗ್ಗೆ ಗೊತ್ತಿರಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ. ಗೃಹ ಸಾಲ ಪಡೆಯುವವರು ಈ ಬಗ್ಗೆ ತಿಳಿದುಕೊಂಡಿರುವುದು ಉತ್ತಮ.
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನಿಂದ “ಬಡ್ಡಿ ಮಾತ್ರ ಪಾವತಿ”ಸುವಂಥ ಗೃಹ ಸಾಲ (Home Loan) ಉತ್ಪನ್ನವೊಂದನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಈಗಾಗಲೇ ಇರುವ ಬ್ಯಾಂಕ್ನ ಹಳೇ ಗೃಹ ಸಾಲ ಗ್ರಾಹಕರಿಗೆ ಮತ್ತು ಹೊಸ ಗೃಹ ಸಾಲ ಗ್ರಾಹಕರಿಗೆ ಪೂರ್ಣಗೊಂಡ ವಸತಿ ಪ್ರಾಪರ್ಟಿಗಳ ಖರೀದಿ ಮೇಲೆ ಬಡ್ಡಿ ಮಾತ್ರ ಗೃಹ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. “ಬಡ್ಡಿ ಮಾತ್ರ ಗೃಹ ಸಾಲ”ವು ಒಂದು ಸೌಲಭ್ಯವಾಗಿದ್ದು, ಇದರಲ್ಲಿ ಸಾಲಗಾರರು ಸಾಲದ ಅವಧಿಯ ಸೀಮಿತ ಸಮಯಕ್ಕೆ ಅಸಲು ಬಾಕಿಯ ಮೇಲಿನ ಬಡ್ಡಿಯನ್ನು ಮಾತ್ರ ಪಾವತಿಸುತ್ತಾರೆ. ಆ ಅವಧಿಯನ್ನು ‘ಬಡ್ಡಿ-ಮಾತ್ರ ಅವಧಿ’ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಮೂಲ ಮೊತ್ತವನ್ನು ಕಡಿತಗೊಳಿಸುವುದಿಲ್ಲ. ರೂ. 35 ಲಕ್ಷದಿಂದ 3.5 ಕೋಟಿ ರೂಪಾಯಿ ತನಕದ ಗೃಹ ಸಾಲ ಗಾತ್ರದೊಂದಿಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್‌ನಿಂದ ಹೋಮ್ ಲೋನ್ ಪಡೆದವರು 1ರಿಂದ 3 ವರ್ಷಗಳ ಆರಂಭಿಕ ಅವಧಿಗೆ ಇಎಂಐ (EMI)ಗಳ ಮೂಲಕ ಬಡ್ಡಿ ಮೊತ್ತವನ್ನು ಮಾತ್ರ ಪಾವತಿಸಲು ಆಯ್ಕೆ ಮಾಡಬಹುದು.
ಈ ಬಡ್ಡಿ ಮಾತ್ರ ಅವಧಿಯು ಮುಗಿದ ನಂತರ ಗೃಹ ಸಾಲ ಸೌಲಭ್ಯವನ್ನು ಸಾಮಾನ್ಯ ಸಾಲದ ಖಾತೆಯಂತೆ ಪರಿಗಣಿಸಲಾಗುತ್ತದೆ. ಅಲ್ಲಿ ಇಎಂಐಗಳು ಸಾಲದ ಮುಕ್ತಾಯದವರೆಗೆ ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುತ್ತದೆ. ಈ ಸೌಲಭ್ಯವನ್ನು ಮತ್ತೊಂದು ಬ್ಯಾಂಕ್ನಿಂದ ಸ್ಟ್ಯಾಂಡರ್ಡ್ ಚಾರ್ಟರ್ಡ್‌ಗೆ ವರ್ಗಾಯಿಸಲು ಬಯಸುವ ಸಾಲಗಾರರಿಗೂ ವಿಸ್ತರಿಸಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ SBI ಫ್ಲೆಕ್ಸಿಪೇ ಹೋಮ್ ಲೋನ್ ಉತ್ಪನ್ನದ ಭಾಗವಾಗಿ ಈ ಸೌಲಭ್ಯವನ್ನು ಸಹ ಒದಗಿಸುತ್ತದೆ.
ಉದ್ಯಮದ ಮೂಲಗಳ ಪ್ರಕಾರ, ಸಾಲಗಾರರೊಂದಿಗಿನ ಮಾತುಕತೆಗಳು ಮತ್ತು ಸಾಲದ ನಿಯಮಗಳ ಆಧಾರದ ಮೇಲೆ ಇತರ ವಿವಿಧ ಬ್ಯಾಂಕ್‌ಗಳು ಬಡ್ಡಿ-ಮಾತ್ರ ಗೃಹ ಸಾಲಗಳನ್ನು ನೀಡಬಹುದು. ಕೆಲವೊಮ್ಮೆ, ವಸತಿ ಪ್ರಾಜೆಕ್ಟ್‌ಗಳ ಡೆವಲಪರ್‌ಗಳು ಅಥವಾ ಬಿಲ್ಡರ್‌ಗಳು ಮನೆ ಖರೀದಿದಾರರಿಗೆ ನಿರ್ದಿಷ್ಟ ಅವಧಿಗೆ ಬಡ್ಡಿ-ಮಾತ್ರ ಸಾಲವನ್ನು ಒದಗಿಸಲು ಬ್ಯಾಂಕ್ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ವಿಶ್ಲೇಷಕರು ಹೇಳುವಂತೆ, “ನಿರ್ಮಾಣದಲ್ಲಿ ಇರುವ ಆಸ್ತಿಗಳಿಗೆ ಸಾಮಾನ್ಯವಾಗಿ ಬಡ್ಡಿ-ಮಾತ್ರ ಗೃಹ ಸಾಲಗಳನ್ನು ನೀಡಲಾಗುತ್ತದೆ ಮತ್ತು ಆಸ್ತಿಯು ವಾಸ್ತವ್ಯಕ್ಕೆ ಸಿದ್ಧವಾದಾಗ ಮಾತ್ರ ಮೂಲ ಮರುಪಾವತಿಗಳು ಪ್ರಾರಂಭ ಆಗುವುದರಿಂದ ಆಕರ್ಷಕವಾಗಿ ಉಳಿಯುತ್ತದೆ.”
ಈ ಆಯ್ಕೆಯನ್ನು ಆರಿಸಿಕೊಳ್ಳುವ ಸಾಲಗಾರರು ಬಡ್ಡಿ-ಮಾತ್ರ ಅವಧಿಯಲ್ಲಿ ನಗದು ಹರಿವಿನ ಹೊರೆ ಕಡಿಮೆಯಾದಾಗ ಸಂಪೂರ್ಣ ಅವಧಿಯಲ್ಲಿ ಸಾಲದಾತರಿಗೆ ಒಟ್ಟಾರೆ ಮರುಪಾವತಿ ಮೊತ್ತವು ಈ ಸಂದರ್ಭದಲ್ಲಿ ಹೆಚ್ಚಾಗಿರುತ್ತದೆ ಎಂದು ಗಮನಿಸಬಹುದು. 30 ವರ್ಷಗಳ ಅವಧಿಗೆ ಶೇ 8ರ ಸ್ಥಿರ ಬಡ್ಡಿ ದರದಲ್ಲಿ ರೂ. 50 ಲಕ್ಷದ ಸಾಮಾನ್ಯ ಗೃಹ ಸಾಲದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಈ ಸಂದರ್ಭದಲ್ಲಿ ಇಎಂಐ ಮೊತ್ತವು ರೂ. 36,688ಕ್ಕೆ ಬರುತ್ತದೆ ಮತ್ತು ಸಂಪೂರ್ಣ ಅವಧಿಯಲ್ಲಿ ಪಾವತಿಸಬೇಕಾದ ಒಟ್ಟು ಮೊತ್ತ – ಅಸಲು ಮತ್ತು ಬಡ್ಡಿ – ರೂ. 1.32 ಕೋಟಿ ಆಗುತ್ತದೆ.
ಮೇಲಿನ ಉದಾಹರಣೆಯಲ್ಲಿ 3 ವರ್ಷಗಳ (36 ತಿಂಗಳು) ಬಡ್ಡಿ-ಮಾತ್ರ ಅವಧಿಯನ್ನು ಆರಿಸಿದರೆ ಮೊದಲ 3 ವರ್ಷಗಳಲ್ಲಿ ಮಾಸಿಕ ಕಂತು ರೂ. 33,333 ಆಗಿರುತ್ತದೆ. ಅದರ ನಂತರ ಅಸಲು ಮತ್ತು ರೂ. 37,713 ಬಡ್ಡಿ ಸೇರಿದಂತೆ ಸಾಮಾನ್ಯ ಇಎಂಐ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಗೃಹ ಸಾಲದ ಅವಧಿಯ ಒಟ್ಟು ನಗದು ಪಾವತಿಯು ರೂ. 1.34 ಕೋಟಿಯಾಗಿರುತ್ತದೆ. ಈ ಪ್ರಕರಣದಲ್ಲಿ ಹೆಚ್ಚುವರಿ ಸಾಲ ಸುಮಾರು 2 ಲಕ್ಷ ರೂಪಾಯಿ. ಇದು ಸರಳವಾದ ಹೋಲಿಕೆಯಾಗಿದೆ. ಫ್ಲೋಟಿಂಗ್ ಬಡ್ಡಿ ದರವನ್ನು ಹೋಮ್ ಲೋನ್ ಖರೀದಿದಾರರು ಆರಿಸಿಕೊಂಡರೆ ಮೊತ್ತವು ಭಿನ್ನವಾಗಿರಬಹುದು.
ಹೀಗೆ ಹೇಳಿದ ನಂತರ, ಬಡ್ಡಿ-ಮಾತ್ರ ಅವಧಿಯಲ್ಲಿ ಇಎಂಐ ವಿಭಿನ್ನ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಈ ಆಫರ್ ಲಾಭವನ್ನು ಪಡೆಯಬಹುದು ಎಂದು ವಿಶ್ಲೇಷಕರು ಸೂಚಿಸುತ್ತಾರೆ. ಹೂಡಿಕೆಯಿಂದ ಬರುವ ಆದಾಯವು ಗೃಹ ಸಾಲದ ಬಡ್ಡಿ ದರವನ್ನು ಮೀರಿದರೆ ಸಾಲವನ್ನು ಮರುಪಾವತಿ ಮಾಡಬೇಡಿ ಎಂದು ಅವರು ಹೇಳುತ್ತಾರೆ. ತೆರಿಗೆ ವಿಷಯದಲ್ಲಿ ಬಡ್ಡಿ-ಮಾತ್ರ ಅವಧಿಯಲ್ಲಿ ಯಾವುದೇ ಅಸಲು ಮರುಪಾವತಿ ಇಲ್ಲದಿರುವುದರಿಂದ ಇಎಂಐನ ಪ್ರಮುಖ ಭಾಗಕ್ಕೆ ಆದಾಯ ತೆರಿಗೆ (IT) ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ರೂ. 1.5 ಲಕ್ಷದವರೆಗೆ ಕಡಿತವು ಲಭ್ಯ ಇರುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಬಡ್ಡಿ ಮೊತ್ತವನ್ನು (ಸ್ವಯಂ-ಬಳಕೆ ಆಸ್ತಿಯ ಸಂದರ್ಭದಲ್ಲಿ ರೂ. 2 ಲಕ್ಷದವರೆಗೆ) ಕಡಿತವಾಗಿ ಕ್ಲೇಮ್ ಮಾಡುವುದನ್ನು ಮುಂದುವರಿಸಬಹುದು. ಒಂದು ವೇಳೆ ನಿರ್ಮಾಣ ಹಂತದಲ್ಲಿರುವ ಆಸ್ತಿಗೆ ಬಡ್ಡಿ-ಮಾತ್ರ ಇಎಂಐ ಪಾವತಿಸಿದರೆ ನಿರ್ಮಾಣ ಪೂರ್ಣಗೊಂಡ ನಂತರ ಬಡ್ಡಿ ಮೊತ್ತವನ್ನು ಐದು ಸಮಾನ ಕಂತುಗಳಲ್ಲಿ ಕಡಿತವಾಗಿ ಅನುಮತಿಸಲಾಗುತ್ತದೆ.
ಸಾಲ ಪಡೆಯುವವರ ಹಣಕಾಸಿನ ಅಗತ್ಯಗಳು ಇದ್ದರೆ ಮಾತ್ರ ಈ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಹೆಚ್ಚಿನ ಗೃಹ ಸಾಲಗಳು ಫ್ಲಸಟಿಂಗ್ ಬಡ್ಡಿದರಗಳನ್ನು ಆಧರಿಸಿವೆ. ಇದು ಮಾರುಕಟ್ಟೆಯಲ್ಲಿ ಬಡ್ಡಿದರದ ಏರಿಳಿತದೊಂದಿಗೆ ಬದಲಾಗುತ್ತದೆ. ಈಗ ಬಡ್ಡಿದರಗಳು ಕಡಿಮೆ ಆಗಿರುವುದರಿಂದ ಸಾಲವನ್ನು ಮರುಪಾವತಿ ಮಾಡುವುದು ಮತ್ತು ಬಾಕಿ ಇರುವ ಸಾಲವನ್ನು ಕಡಿಮೆ ಮಾಡುವುದು ಉತ್ತಮ. ಸಾಲಗಾರರು ಅಸಲು ಮೊತ್ತವನ್ನು ಒಳಗೊಂಡಂತೆ ಇಎಂಐ ಅನ್ನು ಮರುಪಾವತಿಸಬಹುದು.
ಇದನ್ನೂ ಓದಿ: Personal finance: ಋಣಭಾರ ಪತ್ರವಿಲ್ಲದೆ ನಿಮಗೇಕೆ ಗೃಹ ಸಾಲ ದೊರೆಯುವುದಿಲ್ಲ?