ಭಾರತದ ಬಹು ಜನಪ್ರಿಯ ಹಾಗೂ ವಿಶ್ವಾಸಾರ್ಹ ವಿಮಾ ಕಂಪೆನಿ ಅಂದಾಕ್ಷಣ ನೆನಪಾಗುವುದು ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC). ಅದೆಷ್ಟು ಬಗೆಯ ವಿಮಾ ಉತ್ಪನ್ನಗಳು ಇವೆಯೆಂದರೆ, ಎಲ್ಲ ವಯಸ್ಸಿನ, ಎಲ್ಲ ವರ್ಗದ, ಎಲ್ಲ ಅಗತ್ಯಗಳಿಗೆ ಪೂರಕ ಎನಿಸುವಂಥ ವಿಮೆ ಉತ್ಪನ್ನಗಳು ದೊರೆಯುತ್ತವೆ. ಬ್ಯಾಂಕ್ನ ಉಳಿತಾಯ, ಪೋಸ್ಟ್ ಆಫೀಸಿನ ಉಳಿತಾಯ ಅಂತೆಲ್ಲ ಮುಗಿದ ಮೇಲೆ ಅಪಾಯ ಇಲ್ಲದಂಥ ಹೂಡಿಕೆ ಮಾಡಬೇಕು ಅಂತಾದಲ್ಲಿ ನೆನಪಾಗುವುದು ಎಲ್ಐಸಿ ಪಾಲಿಸಿಯೇ. ಹೂಡಿಕೆಯಲ್ಲಿ ಯಾವುದೇ ಅಪಾಯ ಇಲ್ಲದೆ ನಿಶ್ಚಿತ ಆದಾಯ ನೀಡುವಂಥ ಎಲ್ಐಸಿ ಪಾಲಿಸಿಗಳು ದೇಶದಾದ್ಯಂತ ಎಲ್ಲ ವರ್ಗಗಳ ಪಾಲಿನ ಅಚ್ಚುಮೆಚ್ಚು. ಹಲವು ಪಾಲಿಸಿಗಳ ಪೈಕಿ ಬಿಮಾ ಬಚತ್ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಲಾಗುವುದು. ಉಳಿತಾಯ ಮತ್ತು ರಕ್ಷಣೆ ಎರಡನ್ನೂ ಪಾಲಿಸಿದಾರರು ಮತ್ತು ಅವರ ಕುಟುಂಬದವರಿಗೆ ನೀಡುತ್ತದೆ ಈ ಪಾಲಿಸಿ.
ಏನಿದು ಎಲ್ಐಸಿ ಬಿಮಾ ಬಚತ್ ಪ್ಲಾನ್?
ಬಿಮಾ ಬಚತ್ ಪಾರ್ಟಿಸಿಪೇಟಿಂಗ್ ನಾನ್- ಲಿಂಕ್ಡ್ ಉಳಿತಾಯ ಕಮ್ ಸುರಕ್ಷತಾ ಪ್ಲಾನ್. ಇದರಲ್ಲಿ ಪ್ರೀಮಿಯಂ ಅನ್ನು ಒಂದು ಇಡಿಗಂಟಿನಲ್ಲಿ ಪಾವತಿಸಲಾಗುತ್ತದೆ. ಇದು ಮನಿಬ್ಯಾಕ್ ಪ್ಲಾನ್ ಆಗಿದ್ದು, ಪಾಲಿಸಿ ಅವಧಿಯ ವೇಳೆ ಸಾವು ಸಂಭವಿಸಿದಲ್ಲಿ ಹಣಕಾಸಿನ ರಕ್ಷಣೆ ಒದಗಿಸುತ್ತದೆ. ಜತೆಗೆ ನಿರ್ದಿಷ್ಟ ಅವಧಿಯಲ್ಲಿ ಸರ್ವೈವಲ್ ಅನುಕೂಲದ ಪಾವತಿಗೂ ನಿಯಮಾವಳಿ ಮಾಡಲಾಗಿದೆ. ಇದರ ಜತೆಗೆ ಮೆಚ್ಯೂರಿಟಿ (ಪಕ್ವ ಆಗುವ ವೇಳೆ) ಸಂದರ್ಭದಲ್ಲಿ ಸಿಂಗಲ್ ಪ್ರೀಮಿಯಂ ಅನ್ನು ಲಾಯಲ್ಟಿ ಏನಾದರೂ ಇದ್ದಲ್ಲಿ ಸೇರಿಸಿ ಹಿಂತಿರುಗಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಲಿಕ್ವಿಡಿಟಿ ಅನುಕೂಲ ಸಹ ಇದ್ದು, ಸಾಲದ ವ್ಯವಸ್ಥೆ ಸಹ ದೊರೆಯುತ್ತದೆ. ಪ್ರತಿ ಮೂರು ವರ್ಷಕ್ಕೆ, ಚಂದಾದಾರರು ಜೀವಂತವಾಗಿ ಉಳಿದಾಗ ಸರ್ವೈವಲ್ ಬೆನಿಫಿಟ್ ಅಂತ ಸಮ್ ಅಶ್ಯೂರ್ಡ್ನ ಶೇ 15ರಷ್ಟನ್ನು ಪಾವತಿಸಲಾಗುತ್ತದೆ. ಪಾಲಿಸಿ ಮುಂದುವರಿಯುತ್ತದೆ.
ಪಾಲಿಸಿಯ ಕನಿಷ್ಠ ಸಮ್ ಅಶ್ಯೂರ್ಡ್ ಹಾಗೂ ಅರ್ಹತೆ
ಎಲ್ಐಸಿ ಬಿಮಾ ಬಚತ್ ಪಾಲಿಸಿಯನ್ನು 9, 12 ಅಥವಾ 15 ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು. 9 ವರ್ಷದ ಅವಧಿಗೆ ಕನಿಷ್ಠ ಸಮ್ ಅಶ್ಯೂರ್ಡ್ 35 ಸಾವಿರ ರೂ., 12 ವರ್ಷಕ್ಕೆ 50 ಸಾವಿರ ರೂ., 15 ವರ್ಷಕ್ಕೆ 70 ಸಾವಿರ ರೂ. ಆದರೆ ಗರಿಷ್ಠ ಮಿತಿ ಏನೂ ಇಲ್ಲ. ಇನ್ನು ವಯಸ್ಸಿನ ಲೆಕ್ಕಾಚಾರಕ್ಕೆ ಬಂದರೆ ಕನಿಷ್ಠ ವಯಸ್ಸು 15 ವರ್ಷ ಮತ್ತು ಗರಿಷ್ಠ 50 ವರ್ಷ. ಪಾಲಿಸಿದಾರರ ಗರಿಷ್ಠ ವಯಸ್ಸು 9 ಹಾಗೂ 12 ಮತ್ತು 15 ವರ್ಷಗಳಿಗೆ ಕ್ರಮವಾಗಿ 59, 62 ಹಾಗೂ 65 ವರ್ಷಗಳಾಗಿ ಇರಲಿದೆ.
ಮೆಚ್ಯೂರಿಟಿ ಅನುಕೂಲಗಳು
ಪಕ್ವ ಆಗುವ ವೇಳೆಯಲ್ಲಿ ಪಾಲಿಸಿದಾರರಿಗೆ ಒಂದು ಸಲದ ಪ್ರೀಮಿಯಂ (ತೆರಿಗೆಗಳು ಮತ್ತು ಹೆಚ್ಚುವರಿ ಪ್ರೀಮಿಯಂ ಏನಾದರೂ ಪಾವತಿಸಿದಲ್ಲಿ ಹೊರತುಪಡಿಸಿ) ಜತೆಗೆ ಲಾಯಲ್ಟಿ ಬೋನಸ್ ಏನಾದರೂ ಇದ್ದಲ್ಲಿ, ಒಂದು ವೇಳೆ ಪಾಲಿಸಿದಾರರು ಬದುಕುಳಿದಲ್ಲಿ ಪಾವತಿ ಮಾಡಲಾಗುತ್ತದೆ. ಇದನ್ನು ಒಂದೇ ಸಲ ಪಾವತಿಸಬೇಕಾ ಅಥವಾ 5 ಅಥವಾ 10 ಅಥವಾ 15 ವರ್ಷಗಳ ಅವಧಿಗೆ ಕಂತಿನಲ್ಲಿ ಪಡೆಯಬೇಕಾ ಎಂಬುದನ್ನು ಪಾವತಿದಾರರು ಆರಿಸಿಕೊಳ್ಳಬಹುದು.
ಮೊದಲ ಪಾವತಿಯನ್ನು ಮೆಚ್ಯೂರಿಟಿ ದಿನದಂದು ಪಾವತಿಸಲಾಗುತ್ತದೆ. ಆ ನಂತರದಲ್ಲಿ ಪಾಲಿಸಿದಾರರು ಆರಿಸಿಕೊಂಡ ಪಾವತಿ ಕಂತಿನ ಆಧಾರದಲ್ಲಿ ಮೆಚ್ಯೂರಿಟಿ ಆದ ದಿನದಿಂದ ಪ್ರತಿ ತಿಂಗಳು ಅಥವಾ ಮೂರು ತಿಂಗಳು ಅಥವಾ ಆರು ತಿಂಗಳು ಅಥವಾ ವಾರ್ಷಿಕವಾಗಿ ಒಮ್ಮೆ ಪಾವತಿಸಲಾಗುತ್ತದೆ.
ಮೃತಪಟ್ಟಲ್ಲಿ ಎಲ್ಐಸಿ ಬಿಮಾ ಬಚತ್ ಪ್ಲಾನ್ ಹೇಗೆ ನೆರವಾಗುತ್ತದೆ?
ಪಾಲಿಸಿಯ ಮೊದಲ ಐದು ವರ್ಷದಲ್ಲಿ ಪಾಲಿಸಿದಾರರು ಮೃತಪಟ್ಟಲ್ಲಿ ಸಮ್ ಅಶ್ಯೂರ್ಡ್ ಮೊತ್ತವನ್ನು ಕುಟುಂಬಕ್ಕೆ ಪಾವತಿಸಲಾಗುತ್ತದೆ. ಒಂದು ವೇಳೆ ಐದು ವರ್ಷದ ನಂತರ ಮೃತಪಟ್ಟಲ್ಲಿ ಸಮ್ ಅಶ್ಯೂರ್ಡ್ ಜತೆಗೆ ಲಾಯಲ್ಟಿ ಕೂಡ ಇದ್ದಲ್ಲಿ ಅದೂ ಸೇರಿ ದೊರೆಯುತ್ತದೆ.
Published On - 4:53 pm, Thu, 14 July 22