ನವದೆಹಲಿ, ಅಕ್ಟೋಬರ್ 1: ಪೆಪ್ಸಿ, ಕೋಕ ಕೋಲಾ ಇತ್ಯಾದಿ ಕಾರ್ಬನ್ಯುಕ್ತ ಪಾನೀಯಗಳ ಮೇಲೆ ಗರಿಷ್ಠ ಶೇ. 40ರಷ್ಟು ತೆರಿಗೆ ವಿಧಿಸುವುದರಿಂದ ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ಪಾನೀಯ ಸಂಸ್ಥೆಯಾದ ಐಬಿಎ ಪ್ರಧಾನ ಕಾರ್ಯದರ್ಶಿ ಜೆ.ಪಿ. ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಉತ್ಪನ್ನಗಳಿಗೆ ತೆರಿಗೆ ವಿಚಾರದಲ್ಲಿ ಅನ್ಯಾಯ ಆಗುತ್ತಿದೆ. ಪೂರ್ವಗ್ರಹವಾಗಿ ತೆರಿಗೆ ವಿಧಿಸುವ ಕ್ರಮವನ್ನು ನಿಲ್ಲಿಸಬೇಕು. ಕಡಿಮೆ ಸಕ್ಕರೆ, ಹಣ್ಣಿನ ಸಾರ ಇರುವ ಉತ್ಪನ್ನಗಳಿಗೂ ಶೇ. 40ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇದರಿಂದ ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಸಾಧ್ಯವಾಗುತ್ತಿಲ್ಲ ಎಂದು ಜೆ.ಪಿ. ಮೀನಾ ಹೇಳಿದ್ದಾರೆ.
ಸಕ್ಕರೆ ರಹಿತವಾದ ಅಥವಾ ಕಡಿಮೆ ಸಕ್ಕರೆ ಇರುವ ಉತ್ಪನ್ನಗಳು ಇನ್ನೂ ಯೋಜನೆಯ ಹಂತದಲ್ಲೇ ಇವೆ. ಭಾರೀ ಮೊತ್ತದ ತೆರಿಗೆಯಿಂದಾಗಿ ಆವಿಷ್ಕಾರ ಸಾಧ್ಯವಾಗುತ್ತಿಲ್ಲ. ಇಂಥ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಆಗುತ್ತಿಲ್ಲ. ಈ ಕ್ಷೇತ್ರದಲ್ಲಿ ಆವಿಷ್ಕಾರ ಸಾಧ್ಯವಾದರೆ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ, ರೈತರಿಗೆ ಒಳ್ಳೆಯ ಬೆಲೆ ಸಿಗುತ್ತದೆ, ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಹೆಚ್ಚೆಚ್ಚು ಹೂಡಿಕೆಗಳು ಮತ್ತು ಸ್ಟಾರ್ಟಪ್ಗಳು ಬರುವಂತೆ ಸಹಾಯವಾಗಬಹುದು ಎಂದು ಮೀನಾ ತಿಳಿಸಿದ್ದಾರೆ.
ಭಾರತದಲ್ಲಿ ಕಾರ್ಬೊನೇಟೆಡ್ ಡ್ರಿಂಕ್ಗಳಿಗೆ ಶೇ. 28ರಷ್ಟು ಜಿಎಸ್ಟಿ ಇದೆ. ಜೊತೆಗೆ ಶೇ. 12ರಷ್ಟು ಕಾಂಪೆನ್ಸೇಶನ್ ಸೆಸ್ ಕೂಡ ಸೇರಿ ಒಟ್ಟು ತೆರಿಗೆ ಶೇ. 40ರಷ್ಟಿದೆ. ಆದರೆ, ಸಿಹಿ ತಿಂಡಿಗಳು, ಚಾಕೊಲೇಟ್ಗಳಿಗೆ ಶೇ. 5ರಿಂದ 18ರಷ್ಟು ಮಾತ್ರವೇ ತೆರಿಗೆ ಇರುವುದು. ಬೇರೆ ದೇಶಗಳ ಮಾರುಕಟ್ಟೆಗಳಲ್ಲಿ ಸಿಹಿ ಅಂಶಗಳ ಆಧಾರದ ಮೇಲೆ ತೆರಿಗೆ ಪ್ರಮಾಣ ಇರುತ್ತದೆ. ಭಾರತದಲ್ಲಿ ಈ ರೀತಿ ಇಲ್ಲ ಎಂಬುದು ಇಂಡಿಯನ್ ಬೆವರೇಜಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿಗಳ ಅಳಲು.
ಇದನ್ನೂ ಓದಿ: ಆರೋಗ್ಯಕ್ಕೆ ಜನರ ಖಾಸಗಿ ವೆಚ್ಚಕ್ಕಿಂತ ಸರ್ಕಾರಿ ವೆಚ್ಚ ಅಧಿಕ; ಭಾರತದಲ್ಲಿ ಇದೇ ಮೊದಲು; ಇದು ಆಯುಷ್ಮಾನ್ ಸ್ಕೀಮ್ ಪರಿಣಾಮವಾ?
ಹಣ್ಣಿನ ಪಾನೀಯಗಳಿಗೆ ಶೇ. 12ರಷ್ಟು ತೆರಿಗೆ ಇದೆ. ಆದರೆ, ನೀರಿನ ಬಾಟಲ್ಗಳಿಗೆ ಶೇ. 18ರಷ್ಟು ಜಿಎಸ್ಟಿ ಇದೆ. ನೀರು ಬಹಳ ಅಗತ್ಯದ ವಸ್ತು. ಕುಡಿಯುವ ಸ್ವಚ್ಛ ನೀರಿನ ಸಮಸ್ಯೆ ಇದೆ. ಈ ಕ್ಷೇತ್ರಕ್ಕೆ ಖಾಸಗಿ ವಲಯದ ಪಾತ್ರ ಮಹತ್ವ ಇರುತ್ತದೆ. ನೀರಿನ ಬಾಟಲ್ಗೆ ವಿಧಿಸಲಾಗುತ್ತಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದೂ ಜೆ.ಪಿ. ಮೀನಾ ಮನವಿ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ