ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ

|

Updated on: Oct 01, 2024 | 6:13 PM

Mutual Funds nomination rules amended by SEBI: ಮ್ಯೂಚುವಲ್ ಫಂಡ್ ಹೂಡಿಕೆದಾರರ ಕೆವೈಸಿ ದಾಖಲೆ ಅಪ್​ಡೇಟ್ ಮಾಡುವುದು, ನಾಮಿನಿಗಳ ಕ್ರಮ ಹೀಗೆ ಕೆಲವಿಷ್ಟು ನಿಯಮಗಳಿಗೆ ಸೆಬಿ ತಿದ್ದುಪಡಿ ತಂದಿದೆ. ಹೂಡಿಕೆದಾರರು ತಮ್ಮ ನಿರ್ಗಮನದ ಬಳಿಕ ಯಾರಿಗೆ ಆಸ್ತಿ ಹೋಗಬೇಕೆಂದು ನಿರ್ಧರಿಸಲು 10 ನಾಮಿನಿಗಳನ್ನು ನೇಮಿಸಬಹುದಾಗಿದೆ.

ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ
ಮ್ಯೂಚುವಲ್ ಫಂಡ್
Follow us on

ನವದೆಹಲಿ, ಅಕ್ಟೋಬರ್ 1: ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಕೆಲ ನಿಯಮ ಬದಲಾವಣೆಗಳನ್ನು ಮಾಡಿದೆ. 1996ರ ಸೆಬಿ (ಮ್ಯುಚುವಲ್ ಫಂಡ್) ರೆಗ್ಯುಲೇಶನ್ಸ್ ಮತ್ತು 2018ರ ಡೆಪಾಸಿಟರಿ ಅಂಡ್ ಪಾರ್ಟಿಸಿಪೆಂಟ್ಸ್ ರೆಗ್ಯುಲೇಶನ್​ನಲ್ಲಿ ತಿದ್ದುಪಡಿ ತರಲು ಸೆಬಿ ಮಂಡಳಿ ಅನುಮೋದನೆ ನೀಡಿದೆ. ಭಾರತೀಯ ಸೆಕ್ಯೂರಿಟಿ ಮಾರುಕಟ್ಟೆಯಲ್ಲಿ (ಷೇರುಪೇಟೆ) ಕೆಲ ಪದ್ಧತಿಗಳನ್ನು ಸಂಬದ್ಧಗೊಳಿಸಲು ಈ ತಿದ್ದುಪಡಿ ನೆರವಾಗಲಿದೆ. ಕೆವೈಸಿ ದಾಖಲೆ, ನಾಮಿನಿ ಮೊದಲಾದ ವಿಚಾರಗಳಲ್ಲಿ ನಿಯಮಗಳು ಮತ್ತು ಕ್ರಮಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

  • ಮ್ಯೂಚುವಲ್ ಫಂಡ್ ಹೂಡಿಕೆದಾರರು 10 ನಾಮಿನಿಗಳವರೆಗೆ ನಮೂದಿಸಬಹುದು. ಸದ್ಯ ಮೂವರು ನಾಮಿನಿಗಳಿಗೆ ಅವಕಾಶ ಇದೆ.
  • ಹೂಡಿಕೆದಾರ ಒಂದು ವೇಳೆ ಅಶಕ್ತಗೊಂಡಿದ್ದರೆ ಅವರ ಪರವಾಗಿ ನಾಮಿನಿಗಳು ಕ್ರಮ ವಹಿಸಬಹುದು. ಈಗಿರುವ ನಿಯಮದಲ್ಲಿ ಇದಕ್ಕೆ ಅವಕಾಶ ಇಲ್ಲ.
  • ನಾಮಿನಿಗಳ ಪ್ಯಾನ್ ನಂಬರ್, ಪಾಸ್​ಪೋರ್ಟ್ ನಂಬರ್ ಅಥವಾ ಆಧಾರ್ ಇತ್ಯಾದಿ ಐಡಿ ದಾಖಲೆಗಳ ಸಂಖ್ಯೆ ನಮೂದಿಸಿದರೂ ಸಾಕಿತ್ತು. ಈಗ ಈ ಐಡಿ ದಾಖಲೆಗಳ ಪ್ರತಿಯನ್ನು ಸಲ್ಲಿಸುವ ಅಗತ್ಯ ಇರುತ್ತದೆ.
  • ನಾಮಿನಿಗಳು ಸಹಜ ವಾರಸುದಾರರೆನಿಸುವುದಿಲ್ಲ. ಕಾನೂನು ಪ್ರಕಾರ ಅರ್ಹ ವಾರಸುದಾರರಿಗೆ ನಾಮಿನಿಗಳು ಟ್ರಸ್ಟಿಯಂತೆ ಕಾರ್ಯ ನಿರ್ವಹಿಸಬಹುದು ಅಷ್ಟೇ. ಆಸ್ತಿಯನ್ನು ಅರ್ಹ ವಾರಸುದಾರರಿಗೆ ತಲುಪಿಸುವ ಹೊಣೆಗಾರಿಕೆ ನಾಮಿನಿಗಳಿಗೆ ಇರುತ್ತದೆ.
  • ಹೂಡಿಕೆದಾರರು ಎಷ್ಟು ಬಾರಿ ಬೇಕಾದರೂ ನಾಮಿನಿಗಳನ್ನು ಬದಲಿಸಬಹುದು.
  • ಜಂಟಿಯಾಗಿ ಹೂಡಿಕೆ ಮಾಡಿದ್ದರೆ, ಒಬ್ಬ ಹೂಡಿಕೆದಾರ ಮೃತಪಟ್ಟರೆ ಆ ಆಸ್ತಿಯು, ಜೀವಂತ ಇರುವ ಇನ್ನೊಬ್ಬ ಹೂಡಿಕೆದಾರ ಅಥವಾ ಹೂಡಿಕೆದಾರರಿಗೆ ವರ್ಗಾವಣೆ ಆಗುತ್ತದೆ.
  • ನಾಮಿನಿ ಅಪ್ರಾಪ್ತ ವಯಸ್ಸಿನವರಾಗಿದ್ದರೆ ಅವರಿಗೆ ಪಾಲಕರು ಯಾರೆಂದು ನಮೂದಿಸುವ ಅವಕಾಶ ಇರುತ್ತದೆ. ಅಂದರೆ ಅಪ್ರಾಪ್ತ ನಾಮಿನಿ 18 ವರ್ಷ ವಯಸ್ಸು ತುಂಬುವವರೆಗೂ ಪಾಲಕರಿಗೆ ಜವಾಬ್ದಾರಿ ಇರುತ್ತದೆ.

ಇದನ್ನೂ ಓದಿ: ಒಂದು ಕೋಟಿ ಯುವಕರಿಗೆ ಇಂಟರ್ನ್​ಶಿಪ್ ಸ್ಕೀಮ್; ಪೋರ್ಟಲ್ ಸಿದ್ಧ; ಅಕ್ಟೋಬರ್ 12ರಿಂದ ಅಭ್ಯರ್ಥಿಗಳಿಗೆ ನೊಂದಾವಣಿ ಅವಕಾಶ

ಪಾನ್ ಮತ್ತು ಆಧಾರ್ ಲಿಂಕ್ ಆಗದೇ ಇದ್ದರೆ…?

ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದೇ ಹೋಗಿರುವ ಕಾರಣ ಹೂಡಿಕೆದಾರರ ಕೆವೈಸಿಯನ್ನು ತಡೆ ಹಿಡಿಯಲಾಗಿರುವ ಹಲವು ಪ್ರಕರಣಗಳಿವೆ. ಈ ವಿಚಾರದಲ್ಲಿ ಸೆಬಿ ನಿಯಮ ಬದಲಾವಣೆ ಮಾಡಿದೆ. ಹೂಡಿಕೆದಾರರು ಹೆಸರು, ಪ್ಯಾನ್, ಇಮೇಲ್ ವಿಳಾಸ ಅಥವಾ ಮೊಬೈಲ್ ನಂಬರ್ ವ್ಯಾಲಿಡೇಟ್ ಮಾಡಲಾಗಿದ್ದರೆ, ಅಂಥವರ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗದೇ ಹೋದರೂ ಕೆವೈಸಿ ತಡೆಹಿಡಿಯಲಾಗುವುದಿಲ್ಲ. ಇಂಥವರ ಕೆವೈಸಿ ಸ್ಟೇಟಸ್ ಸ್ವಯಂ ಆಗಿ ರಿಜಿಸ್ಟರ್ಡ್ ಎಂದು ಬದಲಾಗುತ್ತದೆ.

ಹತ್ತು ನಾಮಿನಿಗಳಿದ್ದರೆ ತಲೆನೋವು?

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ 10 ನಾಮಿನಿಗಳವರೆಗೆ ನೇಮಿಸುವ ಅವಕಾಶ ನೀಡಲಾಗಿದೆ. ಒಂದು ವೇಳೆ 10 ನಾಮಿನಿಗಳನ್ನು ನೇಮಿಸಿದರೆ ಮುಂದಕ್ಕೆ ತೊಂದರೆಯಾಗಬಹುದು ಎನ್ನುವುದು ತಜ್ಞರ ಅನಿಸಿಕೆ. ಯಾಕೆಂದರೆ, ಆಸ್ತಿಯನ್ನು ಯಾರಿಗೆ ವರ್ಗಾಯಿಸಬೇಕೆಂಬ ವಿಚಾರದಲ್ಲಿ ಎಲ್ಲಾ 10 ನಾಮಿನಿಗಳು ಏಕರೀತಿಯ ಅಭಿಪ್ರಾಯ ಪಟ್ಟರೆ ತೊಂದರೆ ಇಲ್ಲ. ಯಾರೇ ಒಬ್ಬರು ಭಿನ್ನಾಭಿಪ್ರಾಯ ಹೊಂದಿದ್ದರೆ ಆಗ ವಾರಸುದಾರರಿಗೆ ಆಸ್ತಿ ವರ್ಗಾವಣೆ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ