ನವದೆಹಲಿ, ಆಗಸ್ಟ್ 11: ಅದಾನಿ ಗ್ರೂಪ್ಗೆ ಸಂಬಂಧಿಸಿದ ಮತ್ತೊಂದು ಸರಣಿಯ ಗಂಭೀರ ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಮಾಡಿದೆ. ಈ ಬಾರಿ ಅದು ನೇರವಾಗಿ ಸೆಬಿ ಬುಡಕ್ಕೆ ಕೈಹಾಕಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತವರ ಪತಿ ವಿರುದ್ಧ ಹಿಂಡನ್ಬರ್ಗ್ ಈ ಆರೋಪ ಮಾಡಿದೆ. ಅಕ್ರಮ ಹಣ ವರ್ಗಾವಣೆ ಕಾರ್ಯದಲ್ಲಿ ಬಳಕೆಯಾದ ಅದಾನಿ ಗ್ರೂಪ್ನ ರಹಸ್ಯ ಸಾಗರೋತ್ತರ ಫಂಡ್ ಕಂಪನಿಗಳಲ್ಲಿ ಮಾಧಬಿ ಪುರಿ ದಂಪತಿ ಪಾಲು ಹೊಂದಿದ್ದಾರೆ ಎಂಬುದು ಈ ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಮಾಡಿರುವ ಪ್ರಮುಖ ಆರೋಪಗಳಲ್ಲಿ ಒಂದು. ಸೆಬಿ ಮುಖ್ಯಸ್ಥೆ ಹಿಂಡನ್ಬರ್ಗ್ ರಿಸರ್ಚ್ನ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಮ್ಮ ಹಣಕಾಸು ವಿಚಾರಗಳು ತೆರೆದ ಪುಸ್ತಕದಂತಿವೆ. ಎಲ್ಲಾ ವಿವರಗಳನ್ನೂ ಸೆಬಿಗೆ ನೀಡಿದ್ದೇವೆ ಎಂದು ಮಾಧವಿ ಪುರಿ ಬುಚ್ ಮತ್ತವರ ಪತಿ ಹೇಳಿದ್ದಾರೆ.
ಕಳೆದ ವರ್ಷದ (2023) ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ತನಿಖಾ ವರದಿಯೊಂದನ್ನು ಬಿಡುಗಡೆ ಮಾಡಿ ಹಲವು ರೀತಿಯ ಗುರುತರ ಆರೋಪಗಳನ್ನು ಮಾಡಿತ್ತು. ಆ ಹೊತ್ತಿಗೆ ಅದಾನಿ ಗ್ರೂಪ್ನ ಷೇರುಗಳು ಉಚ್ಚ ಮಟ್ಟಕ್ಕೆ ಏರಿದ್ದವು. ಈ ವರದಿ ಬಿಡುಗಡೆಯಾದ ಬೆನ್ನಲ್ಲೇ ಗ್ರೂಪ್ನ ವಿವಿಧ ಸಂಸ್ಥೆಗಳ ಷೇರುಬೆಲೆ ತೀರಾ ಕುಸಿತ ಕಂಡಿದ್ದವು. ಬಳಿಕ ತಕ್ಕಮಟ್ಟಿಗೆ ಚೇತರಿಸಿಕೊಂಡವು. ಈ ಮಧ್ಯೆ, ಭಾರತದ ಬಗ್ಗೆ ಮತ್ತೊಂದು ಸ್ಫೋಟಕ ವರದಿ ಇದೆ ಎಂದು ಕೆಲ ದಿನಗಳ ಹಿಂದೆ ಹಿಂಡನ್ಬರ್ಗ್ ತನ್ನ ಎಕ್ಸ್ ಪೋಸ್ಟ್ವೊಂದರಲ್ಲಿ ಸುಳಿವು ನೀಡಿತ್ತು. ನಿನ್ನೆ ರಾತ್ರಿ (ಆ. 10) ಸೆಬಿ ಹೊಸ ವರದಿ ಬಿಡುಗಡೆ ಮಾಡಿದ್ದು, ಅದು ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಅವರು ಅದಾನಿ ಗ್ರೂಪ್ ಜೊತೆ ಹೊಂದಿರುವ ಸಂಬಂಧದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 675 ಬಿಲಿಯನ್ ಡಾಲರ್ಗೆ ಏರಿಕೆ; ಹೊಸ ದಾಖಲೆ
ಅದಾನಿ ಗ್ರೂಪ್ನಿಂದ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾದ ಎರಡು ಶೆಲ್ ಕಂಪನಿಗಳಲ್ಲಿ (Obscure Offshore funds) ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಪಾಲು ಹೊಂದಿದ್ದಾರೆ ಎಂದು ಕೆಲ ದಾಖಲೆಗಳನ್ನು ಉಲ್ಲೇಖಿಸಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಆರೋಪಿಸಿದೆ.
ಹಾಗೆಯೇ ತಾನು 2023ರ ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಆರೋಪಿಸಿರುವ ವಿಚಾರದ ಬಗ್ಗೆ ಸೆಬಿ ಸ್ವಲ್ಪವೂ ತನಿಖೆಗೆ ಆಸಕ್ತಿ ತೋರಿಲ್ಲ. ಅದಾನಿಯ ಮಾರಿಷಸ್ ಹಾಗೂ ಇತರ ಸಾಗರೋತ್ತರ ನಕಲಿ ಕಂಪನಿಗಳ ಬಗ್ಗೆ ಸೆಬಿ ನಿರಾಸಕ್ತಿ ತೋರಿದೆ ಎಂದು ಹಿಂಡನ್ಬರ್ಗ್ ವಿಷಾದಿಸಿದೆ.
ಅದಾನಿ ಗ್ರೂಪ್ ಸಂಸ್ಥೆಯೊಂದರ ನಿರ್ದೇಶಕರೊಬ್ಬರು ಇಂಡಿಯಾ ಇನ್ಫೋಲೈನ್ ಮೂಲಕ ಮಾರಿಷಸ್ನಲ್ಲಿ ಐಪಿಇ ಪ್ಲಸ್ ಫಂಡ್ ಎಂಬ ಸಣ್ಣ ಆಫ್ಶೋರ್ ಅಥವಾ ಸಾಗರೋತ್ತರ ಫಂಡ್ ಅನ್ನು ಸ್ಥಾಪಿಸಿದ್ದರು. ಈ ಇಂಡಿಯಾ ಇನ್ಫೋಲೈನ್ ಎಂಬುದು ವೈರ್ಕಾರ್ಡ್ ಹಗರಣದಲ್ಲಿ ಸಂಬಂಧ ಹೊಂದಿದೆ. ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಈ ಸಾಗರೋತ್ತರ ಫಂಡ್ಗಳ ಸಹಾಯದಿಂದ ವಿದ್ಯುತ್ ಉಪಕರಣಗಳಿಗೆ ಹೆಚ್ಚಿನ ಬೆಲೆಪಟ್ಟಿ ಕೊಟ್ಟು ಅದಾನಿ ಗ್ರೂಪ್ನಿಂದ ಹಣ ವರ್ಗಾಯಿಸಿಕೊಂಡು ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಬಳಸಲಾಗಿದೆ ಎನ್ನುವುದು ಹಿಂಡನ್ಬರ್ಗ್ನ ವರದಿಯಲ್ಲಿ ಮಾಡಿರುವ ಆರೋಪ.
ಇದನ್ನೂ ಓದಿ:ಭಾರತದಲ್ಲಿ ಸದ್ಯದಲ್ಲಿಯೇ ದೊಡ್ಡದೊಂದು ಸಂಭವಿಸಲಿದೆ: ಹಿಂಡೆನ್‌ಬರ್ಗ್ ಎಚ್ಚರಿಕೆ
ಅದಾನಿಯ ಗ್ರೂಪ್ನ ಸಾಗರೋತ್ತರ ಕಂಪನಿಗಳ ಪಾಲುದಾರರನ್ನು ಗುರುತಿಸುವ ಆಸಕ್ತಿ ಸೆಬಿಗೆ ಇದ್ದಿದ್ದರೆ ಬಹುಶಃ ಅದರ ಮುಖ್ಯಸ್ಥೆಯ ಪಾತ್ರ ಗೊತ್ತಾಗಿ ಹೋಗುತ್ತಿತ್ತು. ಇಂಡಿಯಾ ಇನ್ಫೋಲೈನ್ನಿಂದ ನಿರ್ವವಹಿಸಲಾದ ಇಎಂ ರಿಸರ್ಜೆಂಟ್ ಫಂಡ್ನ ಭಾರತೀಯ ಮೂಲದ ಷೇರುದಾರರ ವಿರುದ್ಧ ಸೆಬಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದೂ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅಚ್ಚರಿ ವ್ಯಕ್ತಪಡಿಸಿದೆ.
ಹಾಗೆಯೇ, ರಿಯಲ್ ಎಸ್ಟೇಟ್ ಹೂಡಿಕೆ ಯಂತ್ರಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಇತ್ತೀಚೆಗೆ ಆಸಕ್ತಿ ತೋರಿದ್ದರು. ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಸೆಬಿ ಮುಖ್ಯಸ್ಥೆ ಮತ್ತವರ ಪತಿ ಆರ್ಇಐಟಿಗಳಲ್ಲಿ ಹಿತಾಸಕ್ತಿ ಹೊಂದಿದ್ದಾರೆ ಎನ್ನುವುದನ್ನು ಗುರುತಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ